ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಸಾರ್ವಜನಿಕರ ಅಸಹಕಾರ, ತಾಂತ್ರಿಕ ಸಮಸ್ಯೆ ಸೇರಿ ಕೆಲವೊಂದು ಲೋಪದೋಷಗಳ ನಡುವೆಯೂ ಪೌತಿ ಖಾತೆ ಆಂದೋಲನದ ಗುರಿ ಮುಟ್ಟಲು ಹರಸಾಹಸ ನಡೆಸುತ್ತಿರುವ ಗ್ರಾಮಾಂತರ ಜಿಲ್ಲಾಡಳಿತ ಇದುವರೆಗೆ 4548 ಖಾತೆಗಳನ್ನು ಪೂರ್ಣಗೊಳಿಸಿದೆ. ಪೌತಿ ಖಾತೆ ಆಂದೋಲನ ಜಿಲ್ಲಾಡಳಿತದ ಪಾಲಿಗೆ ಕಲ್ಲುಮುಳ್ಳಿನ ಹಾದಿಯಾಗಿ ಪರಿಣಮಿಸಿದ್ದು, ಕಂದಾಯ ಇಲಾಖೆ ಸಿಬ್ಬಂದಿ ಗುರಿ ಮುಟ್ಟಲು ಕಸರತ್ತು ನಡೆಸುತ್ತಿದ್ದಾರೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೊಸಕೋಟೆ ಮುಂದಿದ್ದು ಪ್ರಸ್ತುತ 1801 ಖಾತೆಗಳು ವಾರಸುದಾರರ ಕೈಸೇರಿವೆ. ದೇವನಹಳ್ಳಿ ಕೊನೆ ಸ್ಥಾನದಲ್ಲಿದ್ದು ಇದುವರೆಗೆ 611 ಪೌತಿ ಖಾತೆ ಭೂಮಿ ತಂತ್ರಾಂಶದಲ್ಲಿ ಜನರೇಟ್ ಆಗಿದೆ.
ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಕೃಷಿ ಜಮೀನುಗಳ ಮಾಲೀಕತ್ವವನ್ನು ಅವರ ಕಾನೂನುಬದ್ಧ ವಾರಸುದಾರರ ಹೆಸರಿಗೆ ವರ್ಗಾಯಿಸುವ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಒಂದು ವಿಶೇಷ ಅಭಿಯಾನವಾಗಿರುವ ಪೌತಿ ಖಾತೆ ಆಂದೋಲನವನ್ನು ಯಶಸ್ವಿಯಾಗಿ ಪೂರೈಸಲು ಜಿಲ್ಲಾಡಳಿತ ಬೆವರು ಹರಿಸುತ್ತಿದೆ. ಆದರೆ ಬಹುತೇಕ ಗ್ರಾಮಗಳಲ್ಲಿ ಸೂಕ್ತ ಸ್ಪಂದನೆ ವ್ಯಕ್ತವಾಗದೆ ನಿಗಧಿತ ಗುರಿ ಮುಟ್ಟುವುದು ಕಷ್ಟಸಾಧ್ಯ ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆಯೂ ಜಿಲ್ಲೆಯ ನಾಲ್ಕೂ ತಾಲೂಕುಗಳ ತಹಸೀಲ್ದಾರ್ ನೇತೃತ್ವದಲ್ಲಿ ಆಂದೋಲನ ನಡೆಯುತ್ತಿದ್ದು ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ 62371 ಅರ್ಜಿಗಳು ಸಲ್ಲಿಕೆಯಾಗಿವೆ, ಈ ಪೈಕಿ 6336 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಭೂಮಿ ತಂತ್ರಾಂಶದಲ್ಲಿ 1201 ಇ-ಪೌತಿ ರಾಜಸ್ವ ನಿರೀಕ್ಷಕರಿಂದ ಪರಿಶೀಲನೆಯಾಗಿದೆ, 9532 ಅರ್ಜಿಗಳು ಸರ್ವೇಯಾಗಿವೆ.
ರಾಜ್ಯ ಸರ್ಕಾರ ಇದನ್ನು ರೈತರಿಗೆ ಮನೆ ಬಾಗಿಲಲ್ಲಿ ಪೌತಿ ಖಾತೆಗಳನ್ನು ಒದಗಿಸಲು ’ಇ-ಪೌತಿ’ ತಂತ್ರಾಂಶದ ಮೂಲಕ ಜಾರಿಗೊಳಿಸಲಾಗಿದೆ. ಇದರ ಮುಖ್ಯ ಉದ್ದೇಶ ರೈತರಿಗೆ ಬ್ಯಾಂಕ್ ಸಾಲ, ಬೆಳೆ ವಿಮೆ, ಪರಿಹಾರ, ಹಾಗೂ ಇತರ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಅನುಕೂಲ ಮಾಡಿಕೊಡುವುದಾಗಿದೆ. ಆದರೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೌಟುಂಬಿಕ ಕಲಹ, ಒಗ್ಗಟ್ಟಿನ ಕೊರತೆ ಮತ್ತಿತರ ಕಾರಣಗಳಿಂದ ಕಂದಾಯ ಇಲಾಖೆಯೊಂದಿಗೆ ಸಾರ್ವಜನಿಕರ ಸಮನ್ವಯ ಕೊರತೆ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕೈದು ಸದಸ್ಯರಿದ್ದರೆ ಎಲ್ಲರ ಸಹಿ ಹಾಗೂ ಅವರ ಮೊಬೈಲ್ ಸಂಖ್ಯೆ ಬಳಿಕ ಒಟಿಪಿ ನಮೂದಾಗಬೇಕಾಗಿದೆ. ಇದರಲ್ಲಿ ಒಬ್ಬರದು ವ್ಯತ್ಯಾಸವಾದರೂ ಅರ್ಜಿ ಪೂರ್ಣಗೊಳ್ಳುವುದಿಲ್ಲ. ಪರಿಣಾಮವಾಗಿ ಖಾತೆ ಆಂದೋಲನ ಗುರಿ ಮುಟ್ಟುವುದು ಸುಲಭದ ಹಾದಿಯಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಲಕ್ಷಾಂತರ ಆರ್‌ಟಿಸಿಗಳು ಮೃತರ ಹೆಸರಲ್ಲೇ ಉಳಿದಿದ್ದು, ಇದರಿಂದ ವಾರಸುದಾರರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಮಾಲೀಕತ್ವ ವರ್ಗಾವಣೆ ಆಗದಿದ್ದರೆ ರೈತರು ಸಾಲ, ಬೆಳೆ ಹಾನಿ ಪರಿಹಾರ, ವಿಮೆ ಮುಂತಾದ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಾರೆ. ಎಲ್ಲಾ ವಾರಸುದಾರರ ಒಪ್ಪಿಗೆಯನ್ನು ದಾಖಲಿಸುವುದರಿಂದ ನಕಲಿ ಖಾತೆಗಳನ್ನು ತಡೆಯಬಹುದು.
ಕಂದಾಯ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಆಧಾರ್ ಸೀಡಿಂಗ್, ವಂಶವೃಕ್ಷ ಮತ್ತು ಮರಣ ಪ್ರಮಾಣ ಪತ್ರಗಳ ಮೂಲಕ ಆನ್‌ಲೈನ್‌ನಲ್ಲಿ ಖಾತೆಗಳನ್ನು ವರ್ಗಾಯಿಸುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳು ಮೃತರ ವಾರಸುದಾರರ ಆಧಾರ್, ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷದಂತಹ ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಈ ದಾಖಲೆಗಳನ್ನು ಇ-ಪೌತಿ ತಂತ್ರಾಂಶದ ಮೂಲಕ ಅಪ್‌ಲೋಡ್‌ಮಾಡಿ, ಆಧಾರ್ ಸೀಡಿಂಗ್ ಮಾಡಲಾಗುತ್ತದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಇ-ಪೌತಿ ಖಾತಾ ಆಂದೋಲನವನ್ನು ಚುರುಕುಗೊಳಿಸಲಾಗಿದೆ, ಪ್ರತಿನಿತ್ಯ ಜಿಲ್ಲೆಯ ನಾಲ್ಕೂ ತಾಲೂಕುಗಳ ತಹಸೀಲ್ದಾರ್ ಜತೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈ ಆಂದೋಲನದ ಯಶಸ್ವಿಗೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ರೈತರು ತಮ್ಮ ಗ್ರಾಮದ ್ಖ ರಾಜಸ್ವ ನಿರೀಕ್ಷಕ ಜತೆ ಸಹಕರಿಸಿ, ಅಗತ್ಯ ದಾಖಲೆಗಳನ್ನು ಒದಗಿಸಬೇಕು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ, ಬೆಂ.ಗ್ರಾಮಾಂತರ
ತಾಲೂಕು ಅರ್ಜಿ ಪೂರ್ಣಗೊಂಡ ಅರ್ಜಿ ಭಾಗಶಃ ಪೂರ್ಣ ಭೂಮಿಯಲ್ಲಿ ದಾಖಲು
ದೇವನಹಳ್ಳಿ 12348 851 136 611
ದೊಡ್ಡಬಳ್ಳಾಪುರ 19412 1711 120 1271
ಹೊಸಕೋಟೆ 15273 2551 144 1801
ನೆಲಮಂಗಲ 15338 1223 147 865