ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಿಯೂ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಬೆಳೆಯುವುದು, ಸರಬರಾಜು ಮಾಡುವುದು ಸೇರಿ ಇನ್ನಿತರ ಅಕ್ರಮಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದಲ್ಲಿನ ಅಮೆಟಿ ಯೂನಿವರ್ಸಿಟಿಯಲ್ಲಿ ಜಿಲ್ಲಾ ಪೊಲೀಸ್ ಉಪ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಬೇಡ ಬ್ರೋ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಜಿಲ್ಲೆಯ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಈ ವಿಷಯನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಸಿಬ್ಬಂದಿಯನ್ನು ಅಲರ್ಟ್ ಮಾಡಿ ಇಂಥ ಜಾಗಗಳು ಬೇರು ಬಿಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಡ್ರಗ್ಸ್ ಕುರಿತು ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಂಪೂರ್ಣವಾಗಿ ಪ್ರಕರಣಗಳಿಗೆ ತಡೆಹಾಕಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು. ನಮ್ಮದು ಸ್ವಾಭಿಮಾನಿಗಳ ದೇಶ, ವರ್ಷನುಘಟ್ಟಲೆ ಸೆರೆಮನೆ ವಾಸ ಮಾಡಿ ಸ್ವತಂತ್ರ ತಂದಿದ್ದಾರೆ. ದೇಶಭಕ್ತಿ, ರಾಷ್ಟ್ರಭಿಮಾನ ನಮ್ಮಲ್ಲಿ ಹೆಚ್ಚಾಗಿದೆ. ಯುವಕರೆ ಮುಂದಿನ ಪ್ರಜೆಗಳು ತಾವೆಲ್ಲವೆಂಬುದನ್ನು ಮರೆಯದಿರಿ ಹಾಗಾಗಿಯೇ ವ್ಯಸನದಿಂದ ದೇಶಕ್ಕೆ ನಷ್ಟವಾಗುತ್ತದೆ ಮಕ್ಕಳೇ ಗುಣ ಮಟ್ಟದ ಶಿಕ್ಷಣ ಪಡೆದರೆ ಮಾತ್ರ ಪಾಲಕರು ಸಂತಸ ಪಡುತ್ತಾರೆ, ಕಷ್ಟ ಪಟ್ಟು ನಿಮಗೆ ಶಿಕ್ಷಣ ಕೊಡಿಸುತ್ತಾರೆ. ಅವರ ಕನಸು ನನಸಾಗಿಸಿ ಎಂದು ಕರೆ ನೀಡಿದರು.ಯುವಕರು ಮಾದಕ ವಸ್ತುಗಳಿಂದ ದೂರವಿದ್ದು ಸದ್ಗುಣ, ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಶೈಕ್ಷಣಿಕ ಸಂಸ್ಥೆ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಕಿವಿಮಾತು:
ಮಹಾತ್ಮ ಗಾಂಧೀಜಿ, ಸರದಾರ್ ವಲ್ಲಭಾಯ್ ಪಟೇಲ್ ಸೇರಿ ದೇಶಭಕ್ತರ ನಮ್ಮ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕೆಂದು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಮಹಾತ್ಮರು ಉಳಿಸಿ ಬೆಳೆಸಿದ ನಮ್ಮ ದೇಶವನ್ನು ಯುವ ಪೀಳಿಗೆ ಕೊಂಡೊಯ್ಯುವ ಕೆಲಸ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಚಿವರು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಮಾತನಾಡಿ ಯುವ ಪೀಳಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಒಂದು ಬಾರಿ ಡ್ರಗ್ಸ್ ಸೇವನೆಯಿಂದ ಏನು ಆಗುವುದಿಲ್ಲ ಎಂದು ನಿಮ್ಮ ಸ್ನೇಹಿತರು ನಿಮಗೆ ಸಲಹೆಯನ್ನು ಕೊಟ್ಟರೆ ಅದನ್ನು ಎಂದಿಗೂ ಪಾಲಿಸಬೇಡಿ. ಡ್ರಗ್ಸ್ ಸೇವನೆ ಹವ್ಯಾಸವಾಗಿ ಮಾರ್ಪಾಟ್ಟು ಜೀವನ ಹಾಳಾಗುವುದರ ಜತೆಗೆ ಕುಟುಂಬವು ನೋವು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಇಂದಿನಿಂದಲೇ ದೃಢ ನಿರ್ಧಾರ ತೆಗೆದುಕೊಂಡು ಡ್ರಗ್ಸ್ ಮುಕ್ತ ದೇಶ ನಿರ್ಮಾಣಕ್ಕೆ ಯುವ ಪೀಳಿಗೆ ಜತೆಯಾಗಬೇಕು. ಶಾಲಾ ಕಾಲೇಜು ಸುತ್ತಮುತ್ತ ಡ್ರಗ್ಸ್ ಮಾರಾಟ ಅಥವಾ ಮಾರಾಟ ಮಾಡುವವರು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಡ್ರಗ್ಸ್ ಮಾರಾಟಗಾರರು ದುಡಿಯುವ ವರ್ಗ, ಯುವ ಸಮೂಹವನ್ನು ಗುರಿಯಾಗಿಸಿದೆ. ಎಷ್ಟೋ ಕುಟುಂಬಗಳು ಡ್ರಗ್ಸ್ ಜಾಲದಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿವೆ. ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟದಿದ್ದರೆ ಮುಂದೆ ಕೆಟ್ಟ ಪರಿಣಾಮವನ್ನು ಸಮಾಜ ಎದುರಿಸಬೇಕಾಗುತ್ತದೆ ಎಂದು ಎಸ್‌ಪಿ ಚಂದ್ರಕಾಂತ್ ಹೇಳಿದರು. ಇಂದಿನ ಪರಿಸ್ಥಿಯಲ್ಲಿ ನಾವು ಎಲ್ಲ ಕಡೆಗಳಲ್ಲೂ ಮನೆ, ಮಕ್ಕಳ ಕೊಠಡಿ, ಪುಸ್ತಕಗಳಲ್ಲಿ ಮಾದಕ ವಸ್ತುಗಳು ಪರಿಶೋಧನೆ ಮಾಡುವಂಥ ಪರಿಸ್ಥಿತಿ ಉದ್ಭವಾಗಿದೆ. ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶವನ್ನು ಮುನ್ನಡೆಸುವ ಕಾರ್ಯ ಯುವ ಪೀಳಿಗೆ ನಿಮ್ಮ ಮೇಲಿದೆ ಎಂದರು.