Drone for wildlife monitoring 
ಬೆಂಗಳೂರು ಗ್ರಾಮಾಂತರ

ವನ್ಯಜೀವಿಗಳ ನಿಗಾಕ್ಕೆ ಡ್ರೋನ್

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ವನ್ಯಜೀವಿಗಳ ಸಂರಕ್ಷಣೆ ನಿಟ್ಟಿನಲ್ಲಿ ಡ್ರೋನ್ ಕಣ್ಗಾವಲಿನ ಮೂಲಕ ನಿಗಾ ವಹಿಸಲು ಜಿಲ್ಲಾ ಅರಣ್ಯ ಇಲಾಖೆ ಮುಂದಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿದ್ದು, ಮುಖ್ಯವಾಗಿ ಚಿರತೆಗಳ ವಾಸಸ್ಥಾನವಿದೆ, ಇದರೊಂದಿಗೆ ಕರಡಿ, ಕಾಡುಹಂದಿ, ಜಿಂಕೆ, ನವಿಲು ಸೇರಿ ಹಲವು ಬಗೆಯ ವನ್ಯಜೀವಿಗಳಿವೆ. ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಸಂದರ್ಭ ಎದುರಾದರೆ ವನ್ಯಜೀವಿಗಳು ನಾಶವಾಗುವ ಅಪಾಯ ಎದುರಾಗುತ್ತದೆ, ಅದೇ ರೀತಿ ಬೇಟೆಗಾರರ ಬಾಣಕ್ಕೆ ಬಲಿಯಾಗುವ ಸಾಧ್ಯತೆಯೂ ಇರುತ್ತದೆ ಈ ನಿಟ್ಟಿನಲ್ಲಿ ಇಂಥ ವನ್ಯಜೀವಿಗಳ ಚಲನವಲನಗಳ ಮೇಲೆ ನಿಗಾ ವಹಿಸುವುದರ ಜತೆಗೆ ಅವಘಡಗಳು ಸಂಭವಿಸುವ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಡ್ರೋನ್ ಕ್ಯಾಮರಾಗಳ ಸಹಾಯ ಪಡೆಯಲು ಅರಣ್ಯ ಇಲಾಖೆ ಸಜ್ಜಾಗಿದೆ. ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಆಹಾರವನ್ನು ಹುಡುಕಿಕೊಂಡು ವನ್ಯಜೀವಿಗಳು ಗ್ರಾಮಗಳತ್ತ ಮುಖ ಮಾಡುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುರುಚಲು ಕಾಡು ಹೊಂದಿರುವ ಕಡೆಗಳಲ್ಲಿ ಚಿರತೆ, ಜಿಂಕೆಯಂಥ ಪ್ರಾಣಿಗಳು ಹೆಚ್ಚಾಗಿ ಕಂಡುಬರುತ್ತದೆ ಇವುಗಳ ಮೇಲೆ ನಿಗಾ ವಹಿಸಲು ಡ್ರೋನ್ ಕ್ಯಾಮರಾ ಬಳಕೆಗೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಚಿರತೆಗಳ ಹಾವಳಿ ಹೆಚ್ಚು:
ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿ, ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ, ಹೊಸಕೋಟೆಯ ಸೂಲಿಬೆಲೆ ಹೋಬಳಿ ಸೇರಿ ದೇವನಹಳ್ಳಿಯ ಕೊಯಿರಾ ಬೆಟ್ಟಗಳ ಸಾಲಿನಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿ ಕಂಡುಬರುತ್ತವೆ. ಇವುಗಳು ಆಗಾಗ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಹಾಕಿ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ ಎನ್ನುವಂತಾಗಿದೆ. ಚಿರತೆಗಳ ಚಲನವಲನ ಪತ್ತೆ ಹಚ್ಚುವ ನಿಟ್ಟಿನಲ್ಲಿ ಡ್ರೋನ್ ಕ್ಯಾಮರಾ ಬಳಕೆ ಅವಶ್ಯವಾಗಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸಿಬ್ಬಂದಿಗೆ ಸುರಕ್ಷತಾ ಕಿಟ್:
ವನ್ಯಜೀವಿಗಳ ರಕ್ಷಣೆ ಮಾಡುವ ಜತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷತೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸಿಬ್ಬಂದಿ ಸುರಕ್ಷತೆಗಾಗಿ ಸುರಕ್ಷತಾ ಕಿಟ್ಟ್ ಗಳನ್ನು ನೀಡಲು ಚಿಂತಿಸಿದ್ದು ಇಂತ ಕಿಟ್‌ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಇದರ ಜತೆಗೆ ಚಿರತೆಯಂತ ಕಾಡುಪ್ರಾಣಿಗಳ ಸೆರೆಗೆ ಬೋನುಗಳ ಖರೀದಿಗೂ ಚಿಂತನೆ ನಡೆಸಲಾಗಿದೆ ಪ್ರತಿ ತಾಲೂಕಿಗೆ ಮೂರು ಬೋನುಗಳ ಅವಶ್ಯವಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.
ಪ್ರಾಣಿಗಳ ಸೆರೆಗೂ ಬೇಕು ಕ್ಯಾಮರಾ:
ಕಾಡುಪ್ರಾಣಿಗಳ ಸೆರೆಗೆ ಬೋನುಗಳನ್ನಿಟ್ಟರೂ ಹಲವು ಸಂದರ್ಭಗಳಲ್ಲಿ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಕೆಲವು ವೇಳೆ ಬೋನಿನಲ್ಲಿ ಬಂಧಿತವಾದರೂ ತಿಳಿಯುವುದು ತಡವಾಗುತ್ತದೆ. ಜತೆಗೆ ಇಂಥ ಸಂದರ್ಭದಲ್ಲಿ ವನ್ಯಜೀವಿಗಳಿಗೆ ಯಾವುದೇ ಅಪಾಯವಾಗದಂತೆ ಎಚ್ಚರಿಕೆ ವಹಿಸಬೇಕಾಗಿರುವುದು ಇಲಾಖೆಯ ಕರ್ತವ್ಯವಾಗಿದೆ, ಕೆಲವು ಸಂದರ್ಭಗಳಲ್ಲಿ ಸೆರೆಸಿಕ್ಕ ಕಾಡುಪ್ರಾಣಿಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸುವ ಅಪಾಯವೂ ಇರುತ್ತದೆ, ಬೋನಿನಲ್ಲಿ ಸಿಲುಕಿದ ಪ್ರಾಣಿಗಳು ಹೆದರಿ ಅಸ್ವಸ್ಥಗೊಂಡು ಪ್ರಾಣಕ್ಕೂ ಸಂಚಾಕಾರ ತಂದುಕೊಳ್ಳುವ ಸಾಧ್ಯತೆ ಇರುತ್ತವೆ, ಈ ನಿಟ್ಟಿನಲ್ಲಿ ಡ್ರೋನ್ ಕ್ಯಾಮರಾಗಳ ಸಹಕಾರ ಅವಶ್ಯವಾಗಿದೆ ಎಂಬುದು ಅಧಿಕಾರಿಗಳ ಅಭಿಮತವಾಗಿದೆ.
ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಚಲನವಲನಗಳ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಡ್ರೋನ್ ಕ್ಯಾಮರಾಗಳ ಸಹಾಯ ಪಡೆಯಲು ಚಿಂತಿಸಲಾಗಿದೆ ಜಿಲ್ಲೆಯ ಅನೇಕ ಕಡೆ ಚಿರತೆ ಸೇರ ಹಲವು ಕಾಡುಪ್ರಾಣಿಗಳು ಕಾಡಂಚಿನ ಗ್ರಾಮಗಳಲ್ಲಿ ಸುಳಿದಾಡುವುದು ಸಾಮಾನ್ಯವಾಗಿದೆ ಈ ನಿಟ್ಟಿನಲ್ಲಿ ಇವುಗಳ ಮೇಲೆ ನಿಗಾವಹಿಸಬೇಕಿದೆ ಜತೆಗೆ ವನ್ಯಜೀವಿಗಳ ರಕ್ಷಣೆ ಬಗ್ಗೆ ಸಿಬ್ಬಂದಿಗೂ ತರಬೇತಿ ನೀಡುತ್ತಿದ್ದು ಸುರಕ್ಷತಾ ಕಿಟ್ ಖರೀದಿಗೂ ಚಿಂತನೆ ನಡೆಸಲಾಗಿದೆ.
ಸಂತೋಷ್‌ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂ. ಗ್ರಾಮಾಂತರ