Dr. BR Ambedkar statue unveiled
ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ
ದೇಶದ ಪ್ರಜೆಗಳಿಗೆ ಸಮಾನತೆಯಿಂದ ಬದುಕುವ ದಾರಿ ತೋರಿಸಿಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ಒಂದು ವರ್ಗದ ಸೀಮಿತಗೊಳಿಸಬಾರದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ದೇವನಹಳ್ಳಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಜಾತಿ ವರ್ಗಕ್ಕೆ ಅಂಬೇಡ್ಕರ್ ಅವರನ್ನು ಸೀಮಿತಗೊಳಿಸಬಾರದು. ಇಡೀ ದೇಶಕ್ಕೆ ಸಮಾನತೆ ಕೊಟ್ಟಂತಹ ನಾಯಕರು ಎಂದರು. ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿ ದೇಶ ಕಟ್ಟುವ ಮುಂದಾಳತ್ವ ನೀಡಿತು. ಅವರ ನೇತೃತ್ವದಲ್ಲಿ ಸಂವಿಧಾನವು ಈ ದೇಶಕ್ಕೆ ಕೊಡುಗೆಯಾಗಿ ಸಿಕ್ಕಿತು. ಭೀಮಾ ಬಾಯಿ ಅವರು ಕೇವಲ ಮಗುವಿಗೆ ಜನ್ಮ ನೀಡಲಿಲ್ಲ. ನಮ್ಮ ರಾಷ್ಟ್ರದ ಹಾಗೂ ಜನರ ಏಳಿಗೆಗೆ ಸಂವಿಧಾನವನ್ನು ಕೊಟ್ಟ ಶಕ್ತಿಗೆ ಜನ್ಮ ಕೊಟ್ಟರು ಎಂದು ಬಣ್ಣಿಸಿದರು.
ಜಿಲ್ಲೆಗೆ ಎತ್ತಿನಹೊಳೆ ಗ್ಯಾರಂಟಿ:
ಸರ್ಕಾರ ಎತ್ತಿನ ಹೊಳೆಯಿಂದ, ಕೋಲಾರ, ಚಿಕ್ಕಬಳ್ಳಾಪುರ ಭಾಗಕ್ಕೆ ಕುಡಿಯುವ ನೀರು ತಂದೇ ತರುತ್ತೇವೆ. ಕೆರೆಗಳನ್ನು ತುಂಬಿಸುತ್ತೇವೆ. ನೀರನ್ನು ಹೊರಗೆ ತರುವಂತ ಶಕ್ತಿ ಭಗವಂತ ನನಗೆ ನೀಡಿದ್ದಾನೆ ಎಂದು ಸಿಎಂ ಒತ್ತಿ ಹೇಳಿದರು. ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಿ ರೈತರ ಬದುಕು ಹಸನು ಮಾಡುವ ಕೆಲಸ ಮಾಡಲಿದ್ದೇನೆ. ಹೊಸಕೋಟೆ ಕೆರೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಕೆರೆ ಸುತ್ತಮುತ್ತ ಕೆರೆಗಳಿಗೆ ಹೊಸ ರೂಪ ಕೊಡುವ ಕೆಲಸಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದರು.
ಬೌದ್ದ ಕುರುಹುಗಳ ಅಧ್ಯಯನ, ರಕ್ಷಣೆಗೆ ತಂಡ:
ಬುದ್ಧನ ಇತಿಹಾಸದ ಬಗ್ಗೆ ರಾಜಘಟ್ಟದಲ್ಲಿ ಅಭಿವೃದ್ಧಿ ಆಗಬೇಕು ಎಂದು ಮನವಿ ಕೊಟ್ಟಿದ್ದಾರೆ. ಇದರ ವಿಚಾರವಾಗಿ ಅಧ್ಯಯನ ಸಮಿತಿ ರಚಿಸಲಾಗುವುದು, ರಾಜಘಟ್ಟದಲ್ಲಿ ಬೌದ್ಧ ಸಂಸ್ಕೃತಿಯ ಸಾವಿರಾರು ವರ್ಷದ ಪುರಾತನ ಅವಶೇಷಗಳು ಬೆಳಕಿಗೆ ಬಂದಿವೆ. ಇದರ ಅಧ್ಯಯನಕ್ಕೆ ಸೂಚಿಸುತ್ತೇನೆ. ಅಧಿಕಾರಿಗಳ ತಂಡ ರಚಿಸಿ ಈ ಭಾಗದಲ್ಲಿನ ಬೌದ್ದ ಸಂಸ್ಕೃತಿ ಉಳಿಸುವಂತಹ ಕೆಲಸ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಪ್ರಜಾ ಸೇವೆ ಇಲಾಖೆ ಸ್ಥಾಪನೆ:
ಮುಖ್ಯಮಂತ್ರಿ ಆದ ತಕ್ಷಣ ಹೊಸ ಇಲಾಖೆ ಮಾಡಲು ಹೊರಟಿದ್ದೇನೆ. ಹೋರಾಟ ಮಾಡುವವರಿಗೆ, ನೊಂದ ಜನರಿಗೆ ಧ್ವನಿ ತುಂಬಲು, ಅವರ ವಿಚಾರ ತಿಳಿಯಲು ಪ್ರಜಾ ಸೇವಾ ಇಲಾಖೆ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬಾಬಾ ಸಾಹೇಬರು ಕುಟುಂಬಕ್ಕಾಗಿ ಬದುಕದೇ ಸಾಮಾಜಿಕ ಸಮಾನತೆಗಾಗಿ ಶಿಕ್ಷಣ, ಸಂಘಟನೆ, ಹೋರಾಟ ಮೂಲತತ್ವದಡಿ ಶ್ರಮಿಸಿದವರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಪರಿಶಿಷ್ಟರ ಅಭಿವೃದ್ಧಿಗಾಗಿ ಅವರ ಕೊಡುಗೆ ಅನನ್ಯ. ಆರ್ಥಿಕ, ಸಾಮಾಜಿಕ ನ್ಯಾಯದಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದನ್ನು ತಿಳಿಸಿಕೊಟ್ಟರು ಎಂದರು. ಕುಂದುಕೊರತೆಗಳಿಗೆ ಸ್ಪಂದಿಸುವ ಸರ್ಕಾರಕ್ಕೆ ಜನರು ಸಂಪೂರ್ಣ ಬೆಂಬಲ ನೀಡಬೇಕು ಎಂದರು.