Dr. Babu Jagjivan Ram's Death Anniversary 
ಬೆಂಗಳೂರು ಗ್ರಾಮಾಂತರ

ಸಮಾನತೆ ತರಲು ಶ್ರಮಿಸಿದ ಧೀಮಂತ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇಶದಲ್ಲಿ ಸಾಮಾಜಿಕ ಸಮಾನತೆ ತರಲು ಶ್ರಮಿಸಿದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆಗಳು ಸದಾ ಸ್ಮರಣೀಯವಾಗಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಾಬು ಜಗಜೀವನರಾಂ ಅವರು ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದು ಅವರ ಬದುಕು ನಮಗೆ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಸಮಾನತೆಯಿಂದ ಬದುಕಬೇಕಿದೆ:
ಭಾರತದ ಉಪ ಪ್ರಧಾನಿಗಳಾಗಿ, ಸಾರಿಗೆ, ರೈಲ್ವೆ, ಕಾರ್ಮಿಕ ಮತ್ತು ಪುನರ್ವಸತಿ, ಆಹಾರ, ಕೃಷಿ, ಸಹಕಾರ, ನೀರಾವರಿ ಸೇರಿ ಹಲವಾರು ಇಲಾಖೆಯ ಸಚಿವರಾಗಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಾಬೂಜೀ ಅವರು ಭಾರತ ಸಂವಿಧಾನ ರಚನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಮೇರು ನಾಯಕರಾಗಿದ್ದರು. ಅವರ ಆಶಯದಂತೆ ದೇಶದಲ್ಲಿ ನಾವೆಲ್ಲರೂ ಜಾತಿ-ಭೇದ ತೊರೆದು ಸಮಾನತೆಯಿಂದ ಬದುಕಬೇಕಿದೆ ಎಂದು ಎಡಿಸಿ ಕರೆ ನೀಡಿದರು.
ಪುಷ್ಪನಮನ:
ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನ ರಾಮ್ ಅವರ 40ನೇ ಪುಣ್ಯಸ್ಮರಣೆ ಅಂಗವಾಗಿ ಬಾಬೂಜೀ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾಡಳಿತದ ಸಿಬ್ಬಂದಿ ಬಾಬೂಜೀ ಅವರ ಕಾರ್ಯವೈಖರಿಗಳ ಬಗ್ಗೆ ಗುಣಗಾನ ಮಾಡಿದರು.