ಕೆಆರ್ ಪುರ ಕ್ಷೇತ್ರದ ಕಲ್ಕೆರೆಯ ಬಂಜಾರ ಬಡಾವಣೆ, ಕನಕಗಿರಿ ಬಡಾವಣೆ ಮತ್ತು ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ನಡೆಸಿದರು. 
ಬೆಂಗಳೂರು ಗ್ರಾಮಾಂತರ

ಸುಳ್ಳು ಸುದ್ದಿ ಹರಡುವವರ ಬಗ್ಗೆ ತಲೆ ಕೆಡಸಿಕೊಳ್ಳಬೇಡಿ: ಬೈರತಿ ಬಸವರಾಜು.

ಕೆಆರ್ ಪುರ: ಸುಳ್ಳು ಹೇಳಿಕೊಂಡು ತಿರುಗಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಅಭಿವೃದ್ಧಿಯ ಮೂಲಕ ನಾನು ಉತ್ತರ ನೀಡಿದ್ದೇನೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಕಲ್ಕೆರೆಯ ಬಂಜಾರ ಬಡಾವಣೆ, ಟ್ರಿನಿಟಿ ಎನ್ ಕ್ಲೇವ್, ಆರ್.ಕೆ.ಬಿ.ಆರ್ ಬಡಾವಣೆ, ಕನಕಗಿರಿ ಬಡಾವಣೆ, ಕಲ್ಕೆರೆ ಸರೋವರ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿ ಅವರು ಮಾತನಾಡಿದರು.
ಸರ್ಕಾರ ನೀಡಿದ ಅನುದಾನವನ್ನು ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿದ್ದೇನೆ, ಜಿಬಿಎ ಚುನಾವಣೆಗೋಸ್ಕರ ಕೆಲವರು ಜನರ ತಲೆ ಕೆಡಿಸುವ ಕೆಲಸ ಮಾಡಲಾಗುತ್ತಿದೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಕ್ಷೇತ್ರದ ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು, ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಆರ್ ಪುರದಲ್ಲಿ 100 ಹಾಸಿಗೆ ಒಳಗೊಂಡ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಉದ್ಘಾಟನೆ ಸಿದ್ಧವಾಗಿದೆ, ಆದರೆ, ಅದನ್ನು ಉದ್ಘಾಟನೆ ಮಾಡಲು ಇನ್ನು ಸರ್ಕಾರದಿಂದ ದಿನಾಂಕ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು110 ಹಳ್ಳಿಗೆ ಕಾವೇರಿ ನೀರು ಮತ್ತು ಯುಜಿಡಿ ಕೆಲಸ ಮಾಡಿಸಬೇಕು ಎಂದು ಹೋರಾಟ ಮಾಡಿದವರು ನಾವು. ಅಗರ ಕೆರೆ, ಕಲ್ಕೆರೆ, ಜಯಂತಿನಗರ ಕೆರೆ ಅದೋಗತಿಯಲ್ಲಿತ್ತು ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿಸಿದ್ದೇನೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಮಳೆಗಾಲದಲ್ಲಿ ಯುಜಿಡಿ ಮತ್ತು ಕಾವೇರಿ ನೀರಿಗಾಗಿ ರಸ್ತೆಗಳನ್ನು ಅಗೆಯದಿರುವಂತೆ ತಿಳಿಸಿದ್ದೇನೆ ಜನರು ಓಡಾಡುವುದಕ್ಕೆ ಸಮಸ್ಯೆ ಆಗುತ್ತದೆ ಮಳೆ ನಿಂತ ಮೇಲೆ ಕೆಲಸಗಳು ಆರಂಭವಾಗುತ್ತದೆ ಎಂದರು.ಈ ವೇಳೆ ಮಂಡಲ ಅಧ್ಯಕ್ಷ ಮುನೇಗೌಡ, ಮುಖಂಡರಾದ ಕಲ್ಕೆರೆ ಮಾದೇಶಣ್ಣ, ಹೊರಮಾವು ಪ್ರಕಾಶ್, ವಿಡಿಎಸ್ ಪ್ರದೀಪ್, ಕೃಷ್ಣಮೂರ್ತಿ, ಜಿಬಿಎ ಅಧಿಕಾರಿಗಳಾದ ವೆಂಕಟ್ ಅರ್ಪಿತ, ಜಾದವ್, ಮತ್ತಿತರರಿದ್ದರು.