ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಯಿಗಳ ಉಪಟಳ ಮಿತಿಮೀರಿದ್ದು ಸಾರ್ವಜನಿಕರು ಆತಂಕದಲ್ಲಿಯೇ ನಡೆದಾಡುವಂತಾಗಿದೆ.
ಹತ್ತಾರು ನಾಯಿಗಳು ಏಕಕಾಲದಲ್ಲಿ ದಾಳಿ ನಡೆಸುವುದು, ದ್ವಿಚಕ್ರವಾಹನ ಸವಾರರನ್ನು ಓಡಾಡಿಸಿಕೊಂಡು ಹೋಗುವುದು ಆತಂಕದಿಂದ ಆಯತಪ್ಪಿ ಬಿದ್ದರೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುವಂಥ ಪ್ರಕರಣಗಳು ಸಾಮಾನ್ಯವಾಗಿವೆ. ಬೀದಿನಾಯಿಗಳ ನಿಯಂತ್ರಣದ ಬಗ್ಗೆ ನಗರಸಭೆ ಸೇರಿ ಆಯಾ ಪಂಚಾಯಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದೇ ಇಂಥ ದುರ್ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶಸಚಿಕಿತ್ಸೆಯನ್ನು ಕಡೆಗಣಿಸಿದ್ದಾರೆ ಇದಕ್ಕೆ ಮೂಲಸೌಕರ್ಯಗಳ ಕೊರತೆ ಎಂಬ ಮಾತೂ ಕೇಳಿಬರುತ್ತಿದೆ. ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಶಸಚಿಕಿತ್ಸೆ ನಡೆಸಿ ವಾರಗಟ್ಟಲೆ ಅವುಗಳ ಯೋಗಕ್ಷೇಮ ನೋಡಿಕೊಂಡು ಮತ್ತೆ ಹಿಡಿದ ಜಾಗಕ್ಕೆ ಅವುಗಳನ್ನು ಬಿಡುವ ಪ್ರಕ್ರಿಯೆ ಇದೆ ಆದರೆ ಇದಕ್ಕೆಲ್ಲ ವೈದ್ಯಕೀಯ ನೆರವು ಸಿಗುತ್ತಿಲ್ಲ ಜತೆಗೆ ಅನುದಾನದ ಕೊರತೆಯೂ ಇದೆ ಎಂಬುದು ಅಧಿಕಾರಿಗಳ ಅಳಲಾಗಿದೆ. ಇದರಿಂದಾಗಿ ದಿನೆ ದಿನೇ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿನಾಯಿಗಳ ಸಂತತಿ ಹೆಚ್ಚುತ್ತಿದೆ. ಪರಿಣಾಮವಾಗಿ ಸಾರ್ವಜನಿಕರು ಬೀದಿನಾಯಿಗಳ ದಾಳಿ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಪಶುಪಾಲನ ಇಲಾಖೆ ವತಿಯಿಂದ ಬೀದಿನಾಯಿಗಳಿಗೆ ರೇಬಿಸ್ ವಾಕ್ಸಿನ್ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದರೂ ಅದು ನಿರೀಕ್ಷಿತ ಲ ನೀಡಿಲ್ಲ. ಸಾಂಕೇತಿಕವಾಗಿ ಅಲ್ಲಲ್ಲಿ ಬೀದಿನಾಯಿಗಳಿಗೆ ವಾಕ್ಸಿನ್ ಹಾಕುವಷ್ಟರ ಮಟ್ಟಿಗೆ ಅಭಿಯಾನ ಸಮಾರೋಪಗೊಳ್ಳುತ್ತದೆ ಆದರೆ ಭಾಗಶಃ ಬೀದಿನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕಲು ಸಾಧ್ಯವಾಗಿಲ್ಲ ಇದರಿಂದ ಮನುಷ್ಯರ ಮೇಲೆ ದಾಳಿ ನಡೆಸಿದ ನಾಯಿಗಳಿಗೆ ರೇಬಿಸ್ ಹರಡುವ ಭೀತಿ ಕಾಡುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ 15 ಕ್ಕೂ ಹೆಚ್ಚು ಬೀದಿನಾಯಿಗಳು ಮನೆಯ ಮುಂದೆ ಆಟವಾಡುತ್ತಿದ್ದ ಏಳೆಂಟು ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ತಲೆ, ಕೈ ಹಾಗೂ ಕಾಲುಗಳನ್ನು ಕಚ್ಚಿವೆ. ಅದೃಷ್ಟವಶಾತ್ ಸ್ಥಳೀಯರು ನಾಯಿಗಳನ್ನು ಓಡಿಸದಿದ್ದರೆ ಬಾಲಕ ಪ್ರಾಣಾಪಾಯಕ್ಕೆ ತುತ್ತಾಗುತ್ತಿದ್ದ. ಮಂಜುನಾಥ್ ಹಾಗೂ ಮಂಜುಳಾ ದಂಪತಿ ಮಗ ನಿಖಿತ್‌ರಾಜ್ ಬೀದಿನಾಯಿಗಳ ದಾಳಿಗೆ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೇ ರೀತಿ ನಗರದ ಟಿಬಿ ಸರ್ಕಲ್ ಬಳಿ ವೃದ್ದರೊಬ್ಬರ ಮೇಲೆ ಬೀದಿನಾಯಿಗಳ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ್ದವು. ನಗರದ ತಾಲೂಕು ಕಚೇರಿ ಬಳಿ ಇತ್ತೀಚಿಗೆ ದ್ವಿಚಕ್ರ ವಾಹನ ಸವಾರರನ್ನು ಏಕಾಏಕಿ ಓಡಿಸಿಕೊಂಡು ಬಂದ ಬೀದಿನಾಯಿಗಳನ್ನು ಕಂಡು ಆತ ಕೆಳಗೆ ಬಿದ್ದು ಗಾಯಗೊಂಡಿದ್ದ ಪ್ರಕರಣ ನಡೆದಿತ್ತು. ನಗರದಲ್ಲಿ ಇಂಥ ಪ್ರಕರಗಳು ಸಾಮಾನ್ಯವಾಗಿದ್ದು ಬೀದಿನಾಯಿಗಳ ಉಪಟಳಕ್ಕೆ ತಡೆಇಲ್ಲವೇ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬೀದಿನಾಯಿಗಳ ಉಪಟಳ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ಹೆಚ್ಚಾಗಿದೆ. ಕೊಡಿಗೇಹಳ್ಳಿ ಗ್ರಾಮಪಂಚಾಯಿತಿ ಇದರ ಕಡೆ ಗಮನ ಹರಿಸಬೇಕು. ಬೀದಿ ನಾಯಿಗಳನ್ನು ಹಿಡಿದು ನಾಗರಿಕರಿಗೆ ರಕ್ಷಣೆ ನೀಡಬೇಕು. ಪಾಲನಜೋಜಗಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಕೇವಲ ಚುನಾವಣೆ ಸಮಯದಲ್ಲಿ ಕಾಣಿಸುವುದು ಬಿಟ್ಟರೆ ಬೇರೆ ಸಮಯದಲ್ಲಿ ಕಾಣೆ ಆಗಿರುತ್ತಾರೆ. ಈ ಕೂಡಲೇ ಬೀದಿ ನಾಯಿಗಳ ಸ್ಥಳಾಂತರ ಮಾಡಬೇಕು.