13 ಎಎನ್ಕೆ 4 ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಆಯುಕ್ತ ರಾಜೇಂದ್ರ, ಡಿಸಿಪಿ ಎಂ.ನಾರಾಯಣ್ ಭೇಟಿ ನೀಡಿ, ಮನವಿ ಆಲಿಸಿದರು.
- ರಸ್ತೆ ಅಭಿವೃದ್ಧಿ ನೆಪದಲ್ಲಿ ಜೀವಕ್ಕೆ ಕುತ್ತು ತರಬೇಡಿ
ರಸ್ತೆ ಅಭಿವೃದ್ಧಿ ನೆಪದಲ್ಲಿ ಜೀವಕ್ಕೆ ಕುತ್ತು ತರಬೇಡಿ
ಆನೇಕಲ್: ಹದಗೆಟ್ಟ ರಸ್ತೆ, ಅಪೂರ್ಣ ಕಾಮಗಾರಿ ಹಾಗೂ ಸಂಚಾರ ಸಮಸ್ಯೆಗಳ ವಿರುದ್ಧ ಹೆಬ್ಬಗೋಡಿ ಸಮೀಪದ ಅನಂತನಗರ ನಿವಾಸಿಗಳು ಇತ್ತೀಚೆಗೆ ಪ್ರತಿಭಟನೆ ನಡೆದರು. ಅಪಘಾತದಲ್ಲಿ ಕೇರಳ ಮೂಲದ ಮೇಧಾ ಎಂಬುವವರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತಳ ಸಾವಿಗೆ ನ್ಯಾಯ ದೊರಕಿಸಬೇಕು ಹಾಗೂ ಹದಗೆಟ್ಟ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ, ಯುಜಿಡಿ ಸೇರಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆಗಳು ಹದಗೆಟ್ಟಿವೆ. ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗುಂಡಿಬಿದ್ದ ರಸ್ತೆಯಿಂದಾಗಿ ಪದೇಪದೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗಳು ದುರಸ್ತಿಕಾಣದಿದ್ದರೆ ಇನ್ನಷ್ಟು ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಗ್ಯಾರಂಟಿ. ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಾರದೊಳಗೆ ದುರಸ್ತಿ ಭರವಸೆ: ಸ್ಥಳಿಯರ ಆಕ್ರೋಶದ ಹಿನ್ನೆಲೆಯಲ್ಲಿ ಹೆಬ್ಬಗೋಡಿ ನಗರಸಭೆ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರಸ್ತುತ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಜತೆಗೆ ಕಾವೇರಿ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಯೂ ಪ್ರಗತಿಯಲ್ಲಿದೆ. ಕಾಮಗಾರಿ ಕಾರಣ ರಸ್ತೆಗೆ ತಕ್ಷಣ ಸಂಪೂರ್ಣ ಡಾಂಬರೀಕರಣ ಸಾಧ್ಯವಾಗಿಲ್ಲ ಎಂದ ನಗರಸಭೆ ಅಧಿಕಾರಿಗಳು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಗಳನ್ನು ಒಂದು ವಾರದೊಳಗೆ ಸರಿಪಡಿಸಲಾಗುವುದು ಎಂದು ಹೆಬ್ಬಗೋಡಿ ನಗರಸಭೆ ಆಯುಕ್ತ ರಾಜೇಂದ್ರ ಭರವಸೆ ನೀಡಿದ ಬಳಿಕ ಸ್ಥಳಿಯರು ಪ್ರತಿಭಟನೆಯನ್ನು ಕೈಬಿಟ್ಟರು.
ಅಪಘಾತದ ಸ್ಥಳದಲ್ಲಿ ಗುಂಡಿ ಇರಲಿಲ್ಲ: ಮೇಧಾ ಸಾವಿಗೀಡಾದ ಸ್ಥಳದಲ್ಲಿ ಯಾವುದೇ ಗುಂಡಿ ಇರಲಿಲ್ಲ. ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ಕಾಮಗಾರಿ ಸಹ ಪ್ರಗತಿಯಲ್ಲಿರಲಿಲ್ಲ ಎಂದು ಆಯುಕ್ತ ರಾಜೇಂದ್ರ ಸ್ಪಷ್ಟಪಡಿಸಿದರು. ಇದಕ್ಕೆ ಆಕ್ಷೇಪಿಸಿದ ನಿವಾಸಿಗಳು, ಈ ಭಾಗದಲ್ಲಿ ಜೌಗು ಮಣ್ಣಿನ ಸಮಸ್ಯೆ ಹೆಚ್ಚಿದೆ. ಮಳೆ ಅಥವಾ ನೀರು ಸೋರಿಕೆಯಾದಾಗ ರಸ್ತೆಗಳಲ್ಲಿ ವಾಹನಗಳು ಸ್ಕಿಡ್ ಆಗುತ್ತವೆ. ಹಾಗಾಗಿ ಕಾಮಗಾರಿ ನಡೆಸುವಾಗ ರಸ್ತೆ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ವಾಟರ್ ಟ್ಯಾಂಕರ್ ಹಾವಳಿಗೆ ಕಡಿವಾಣ ಹಾಕಿ
ಈ ಭಾಗದಲ್ಲಿ ರಸ್ತೆ ಸಮಸ್ಯೆ ಜತೆಗೆ ವಾಟರ್ ಟ್ಯಾಂಕರ್ಗಳ ಸಂಚಾರವೂ ಸ್ಥಳಿಯರಿಗೆ ತಲೆನೋವಾಗಿ ಪರಿಣಮಿಸಿದೆ ಎಂಬ ಆರೋಪ ಇದೆ. ನಿರಂತರವಾಗಿ ಸಂಚರಿಸುವ ಟ್ಯಾಂಕರ್ಗಳಿಂದ ರಸ್ತೆಗಳಿಗೆ ಹಾನಿಯಾಗುವುದಲ್ಲದೇ ಟ್ರಾಫಿಕ್ ಉಂಟಾಗುತ್ತಿದೆ ಎಂದು ಸ್ಥಳಿಯ ನಿವಾಸಿ ಶಿವಕುಮಾರ್ ಆರೋಪಿಸಿದರು.
ಅನುಮತಿ ಇಲ್ಲದೆ ಪ್ರತಿಭಟನೆ, ಪ್ರಕರಣ ದಾಖಲು
ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದಡಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಮೇಧಾ ಸಾವಿನಿಂದ ಅಸಮಾಧಾನಗೊಂಡ ಸ್ಥಳಿಯರು ಆಕ್ರೋಶವನ್ನು ಪ್ರತಿಭಟನನೆ ಮೂಲಕ ವ್ಯಕ್ತಪಡಿಸಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ಪ್ರಮುಖ ಸಂಪರ್ಕ ರಸ್ತೆಗಳ ಸ್ಥಿತಿ ಉತ್ತಮವಾಗಿರಬೇಕು. ರಸ್ತೆ ಕಾಮಗಾರಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ನಡುವೆ ಸಂಚಾರ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
> ಎಂ.ನಾರಾಯಣ್ ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ