District level Kisan Mela
ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಸಿರಿಧಾನ್ಯ ಪದಾರ್ಥಗಳಲ್ಲಿ ಆರೋಗ್ಯ ವೃದ್ಧಿಸುವಂತಹ ಶಕ್ತಿ ಅಡಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಅರೋಗ್ಯ ವೃದ್ಧಿಯಾಗುತ್ತದೆ ಎಂದು
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಮೆಳೇಕೋಟೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ಹಬ್ಬ ಮತ್ತು ಕಿಸಾನ್ ಮೇಳ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ. ಹಾಗಾಗಿ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಬೆಳೆಯಲು ರೈತರು ಸಾವಯವ ಕೃಷಿ ಪದ್ದತಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಕೊಟ್ಟಿಗೆ ಗೊಬ್ಬರದ ಸಾವಯವ ಪದ್ದತಿ ಬಳಸಿ ಆಹಾರ ಉತ್ಪನ್ನಗಳನ್ನು ಬೆಳೆಯಬೇಕು ಎಂದ ಸಚಿವರು ರಾಸಾಯನಿಕ ಗೊಬ್ಬರ ಬಳಸಿದರೆ ಆಹಾರ ಉತ್ಪನ್ನಗಳಲ್ಲಿ ತಕ್ಷಣಕ್ಕೆ ರುಚಿ ಕೊಟ್ಟು, ಪೌಷ್ಟಿಕತೆ ಕಡಿಮೆ ಜತೆಗೆ ಆರೋಗ್ಯ ಕ್ಷೀಣಿಸಲು ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು. ಸರ್ಕಾರ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ನೀಡಿ, ಉತ್ತಮ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡಬೇಕು. ನಮ್ಮ ರೈತರು ಗುಣಮಟ್ಟದ ಬೆಳೆಗಳು ಬೆಳೆಯುತ್ತಿದ್ದು, ವಿದೇಶಗಳಿಗೆ ಆಹಾರ ಪದಾರ್ಥಗಳು ಹಾಗೂ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಪ್ತು ಆಗುತ್ತಿದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಜಿ ಕಲಾವತಿ ಮಾತನಾಡಿ, ಕೃಷಿ ಇಲಾಖೆಯಿಂದ ಜಿಲ್ಲೆಯ ರೈತರಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆ ಬೆಳೆಯಲು ಸಾಕಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ವರ್ಷ ’ಸಿರಿಧಾನ್ಯ ಹಬ್ಬ ಹಾಗೂ ಕಿಸಾನ್ ಮೇಳ’ದಂತಹ ಕೃಷಿ ಕಾರ್ಯಕ್ರಮಗಳು ಆಯೋಜಿಸಿ, ಇಲಾಖೆಯ ಯೋಜನೆಗಳು ಹಾಗೂ ಹೊಸ ಕೃಷಿ ಸಂಬಂಧಿ ಪರಿಕರಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಜಿಲ್ಲೆಯ ವಿವಿಧ ಭಾಗದ 45 ಜನ ಸ್ಪರ್ಧೆಯಲ್ಲಿ ಭಾಗಿ:
ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾನಾ ಭಾಗಗಳಿಂದ 45 ಮಹಿಳೆಯರು ಭಾಗವಹಿಸಿ, ಪಾಕ ಸ್ಪರ್ಧೆಯಲ್ಲಿ ತಮ್ಮ ಕೈಚಳಕದಿಂದ ತಯಾರಿಸಿದ ರಾಗಿ ಉಪ್ಪಿಟ್ಟು, ಕರದಂಟು, ನವಣೆ ಪಲಾವ್, ಸಜ್ಜೆ ಲಾಡು, ಅಗಸೆ ಮಜ್ಜಿಗೆ, ಮೆಂತ್ಯೆ ಕಡುಬು ಮತ್ತು ಸಿರಿಧಾನ್ಯಗಳ ಪಾಯಸ ಸೇರಿ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದರು.
ಗಮನ ಸೆಳೆದ ಹಳೆಯ ಹಾಗೂ ಆಧುನಿಕ ವಸ್ತು ಪ್ರದರ್ಶನ:
ಕಿಸಾನ್ ಮೇಳದಲ್ಲಿ ಹಿಂದಿನ ಕಾಲದಲ್ಲಿ ಪೂರ್ವಿಕರು ದಿನಬಳಕೆ ಮಾಡುತ್ತಿದ್ದ ಪಾರಂಪರೀಕ ವಸ್ತುಗಳು, ಲೋಹಗಳು, ಯಂತ್ರಗಳು ಸೇರಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆಗಳು ಇಲಾಖಾ ಯೋಜನೆಗಳ ಕುರಿತು ಮಾಹಿತಿಯನ್ನೊಳಗೊಂಡ ವಸ್ತು ಪ್ರದರ್ಶನವನ್ನು ಗಮನ ಸೆಳೆಯಿತು. ಸಿರಿಧಾನ್ಯ ಹಬ್ಬ ಹಾಗೂ ಕಿಸಾನ್ ಮೇಳದಲ್ಲಿ ಸಿರಿಧಾನ್ಯಗಳಿಂದ ಅಲಂಕರಿಸಲ್ಪಟ ರಂಗೋಲಿಗಳು ಆಕರ್ಷಣಿಯವೆನಿಸಿತು.ಇದೇ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಲಾಯಿತು.