District level industrial dialogue meeting 
ಬೆಂಗಳೂರು ಗ್ರಾಮಾಂತರ

ಉದ್ಯೋಗಾವಕಾಶದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು

ಶಿವರಾಜ.ಎಂ
ಬೆಂಗಳೂರು ಗ್ರಾಮಾಂತರ
ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಕಂಪನಿ ಮುಖ್ಯಸ್ಥರು ಉಸ್ತುವಾರಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕೈಗಾರಿಕೆ ಕೇಂದ್ರ ಸಹಯೋಗದಲ್ಲಿ ದೇವನಹಳ್ಳಿ ಜಿಲ್ಲಾಡಳಿತಭವನದಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೈಗಾರಿಕಾ ಸಂವಾದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ನಂತರ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹೆಚ್ಚಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಕೈಗಾರಿಕಾ ಪ್ರದೇಶ ಇದೆ. ಹಲವು ಕುಟುಂಬಗಳು ಕೈಗಾರಿಕೆಗಳಿಗೆ ಭೂಮಿ ನೀಡಿದ್ದಾರೆ. ಅಂತಹ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಂಪನಿಗಳ ಮುಖ್ಯಸ್ಥರಿಗೆ ಸರಿಯಾದ ಮಾಹಿತಿ ನೀಡಬೇಕು. ಹಾಗೆಯೇ ಕಂಪನಿಗಳ ಮುಖ್ಯಸ್ಥರಿಗೆ ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸರ್ಕಾರದ ನಿಯಮಗಳನ್ನು ಪಾಲಿಸಬೇಕು:
ಸರ್ಕಾರವು ಕಂಪನಿಗಳಿಗೆ ಅಗತ್ಯ ಮೂಲ ಸೌಕರ್ಯಗಳ ಜತೆಗೆ ಎಲ್ಲ ಬಗೆಯ ಸಹಕಾರ ನೀಡುತ್ತಾ ಬಂದಿದೆ. ಕಂಪನಿಗಳು ಕೂಡ ಅದೇ ರೀತಿ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದ ಉಸ್ತುವಾರಿ ಸಚಿವರು ಸಾಕಷ್ಟು ಕುಟುಂಬಗಳಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳು ಇದ್ದಾರೆ. ಅಂತಹವರ ಆಯ್ಕೆ ಮೊದಲಿರಲಿ, ಅವರ ಕೌಶಲ, ವಿದ್ಯಾರ್ಹತೆಗಳ ಆಧಾರದ ಮೇಲೆ ಸೂಕ್ತ ಉದ್ಯೋಗವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಅಧಿಕಾರಿಗಳು ವರದಿ ನೀಡಬೇಕು:
ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ ಇರುವ ಕಂಪನಿಗಳು ಸ್ವಂತ ತರಬೇತಿ ಸಂಸ್ಥೆ ಪ್ರಾರಂಭಿಸಿ ಕೌಶಲಾಧರಿತ ತರಬೇತಿ ನೀಡಿ ಆಯ್ಕೆ ಮಾಡಿಕೊಂಡರೆ ಉತ್ತಮವಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಇನ್ನುಳಿದಂತೆ ಸರ್ಕಾರದ ವತಿಯಿಂದ ವಿವಿಧ ಸರ್ಕಾರಿ ತರಬೇತಿ ಸಂಸ್ಥೆಗಳ ಮೂಲಕ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಲು ಚಿಂತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುತ್ತಿಲ್ಲ ಎಂದು ಹಲವರು ತಿಳಿಸಿದ್ದಾರೆ,. ಈ ರೀತಿಯ ದೂರುಗಳು ಸಾಕಷ್ಟು ಬರುತ್ತಿವೆ ಈ ರೀತಿಯ ಘಟನೆಗಳು ಆಗಬಾರದು ಎಂದು ಎಚ್ಚರಿಕೆ ನೀಡಿದ ಸಚಿವರು, ಯಾವ ಕಂಪನಿಗಳಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗ ಲಭಿಸಿದೆ, ಕಂಪನಿಗಳಲ್ಲಿ ಎಷ್ಟು ಉದ್ಯೋಗ ಖಾಲಿ ಇದೆ, ಎಂತಹ ಅಭ್ಯರ್ಥಿಗಳ ಅವಶ್ಯಕತೆ ಇದೆ ಎಂಬುದರ ಬಗ್ಗೆ ಕಂಪನಿಗಳಿಂದ ಮಾಹಿತಿ ಪಡೆದು ಸಂಪೂರ್ಣ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಸಿಎಸ್‌ಆರ್ ಅನುದಾನದಡಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ:
ಕಂಪನಿಗಳು ತಮ್ಮ ಆರ್ಥಿಕ ವಹಿವಾಟಿನಲ್ಲಿ ಶೇ.2ರಷ್ಟು ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್) ಹಣವನ್ನು ಕಡ್ಡಾಯವಾಗಿ ವಿವಿಧ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳ ಶಿಕ್ಷಣ ಮುಂದಿನ ಪೀಳಿಗೆಗೆ ಸಹಕಾರ ಆಗಲಿದೆ. ಗುಣಮಟ್ಟದ ಶಿಕ್ಷಣಕ್ಕೆ ನಾವು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಿಎಸ್‌ಆರ್ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಬಳಸಲು ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು.