District Animal Husbandry Department: Virtually Empty!
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ನಾಲ್ಕೂ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಂದ ಕೂಡಿದ ಗ್ರಾಮಾಂತರ ಜಿಲ್ಲೆ ಪಶುವೈದ್ಯರ ಕೊರತೆ ಎದುರಿಸುತ್ತಿದೆ. ಹಿರಿಯ ಪಶುವೈದ್ಯ ನಿರೀಕ್ಷಕರು, ಪಶುವೈದ್ಯ ನಿರೀಕ್ಷಕರು ಹಾಗೂ ಡಿ ಗ್ರೂಪ್ ನೌಕರರ ಕೊರತೆಯಿಂದಾಗಿ ಜಿಲ್ಲಾ ಪಶುಪಾಲನ ಇಲಾಖೆ ಖಾಲಿ ಹೊಡೆಯುತ್ತಿದೆ.
ಹೌದು..! ಜಿಲ್ಲಾ ಪಶುಪಾಲನ ಇಲಾಖೆಯಲ್ಲಿ 58 ಹಿರಿಯ ಪಶುವೈದ್ಯ ನಿರೀಕ್ಷಕರ ಜಾಗದಲ್ಲಿ 46 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು 12 ವೈದ್ಯರ ಕೊರತೆ ಇದೆ. ಅದೇ ರೀತಿ ಪಶುವೈದ್ಯ ನಿರೀಕರ 32 ಹುದ್ದೆಗಳ ಪೈಕಿ 14 ಖಾಲಿ ಇದೆ. 62 ಕಿರಿಯ ಪಶುವೈದ್ಯಾಧಿಕಾರಿ ಹುದ್ದೆಯಲ್ಲಿ 30 ಹುದ್ದೆಗಳು ಖಾಲಿ ಇವೆ. ಇನ್ನು ಡಿ.ಗ್ರೂಪ್ನಲ್ಲಿ 158 ಮಂದಿ ಇರುವ ಜಾಗದಲ್ಲಿ ಕೇವಲ 23 ಮಂದಿಯಷ್ಟೇ ಕರ್ತವ್ಯದಲ್ಲಿದ್ದು 135 ಹುದ್ದೆಗಳು ಖಾಲಿ ಹೊಡೆಯುತ್ತಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಶು ವೈದ್ಯರು ಹಾಗೂ ನೌಕರರ ಕೊರತೆಯಿಂದಾಗಿ ಜಿಲ್ಲಾ ಪಶುಪಾಲನ ಇಲಾಖೆಯಲ್ಲಿನ ಬೆರಳೇಣಿಕೆ ಅಧಿಕಾರಿಗಳ ಪರಿಸ್ಥಿತಿ ಮುಳ್ಳಿನ ಮೇಲಿನ ನಡಿಗೆಯಂತಾಗಿದೆ.
1.41 ಲಕ್ಷ ಜಾನುವಾರುಗಳಿಗೆ ಬೆರಳೇಣಿಗೆ ವೈದ್ಯರು:
ಗ್ರಾಮಾಂತರ ಜಿಲ್ಲೆಯಲ್ಲಿನ ಕೃಷಿ ಚಟುವಟಿಕೆಯಲ್ಲಿ ರಾಗಿ ಪ್ರಧಾನವಾಗಿದ್ದರೂ ಇದರೊಂದಿಗೆ ಹೈನುಗಾರಿಕೆಯಲ್ಲೂ ಜಿಲ್ಲೆ ಮುಂಚೂಣಿಯಲ್ಲಿದೆ. ಕೃಷಿ ಚಟುವಟಿಕೆಗಳೊಂದಿಗೆ ರೈತರು ಹೈನುಗಾರಿಯನ್ನೂ ಪ್ರಮುಖ ಕಸುಬಾಗಿ ಮಾಡಿಕೊಂಡಿದ್ದಾರೆ. ಹಸು, ಎಮ್ಮೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕುರಿ&ಮೇಕೆ ಸಾಕಾಣಿಕೆಯೂ ನಡೆಯುತ್ತಿದೆ. ಪ್ರಸಕ್ತ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ 1.4137 ಜಾನುವಾರುಗಳಿವೆ. ಅದೇ ರೀತಿ 2,72,367 ಕುರಿ ಹಾಗೂ ಮೇಕೆಗಳಿವೆ ಎಂದು ಅಂದಾಜಿಸಲಾಗಿದೆ, ಗ್ರಾಮೀಣ ಪ್ರದೇಶದಲ್ಲಿನ ಶೇ.70 ಭಾಗ ರೈತಾಪಿ ಜನರು ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ ಹಾಗೂ ಕುರಿ&ಮೇಕೆ ಸಾಕಾಣಿಕೆಯನ್ನು ಅವಲಂಬಿಸಿದ್ದಾರೆ. ಇಂಥ ಜಿಲ್ಲೆಯಲ್ಲಿ ಪಶುವೈದ್ಯ ಸಿಬ್ಬಂದಿ ಕೊರತೆ ಗಂಭೀರ ಪರಿಣಾಮ ಬೀರುತ್ತಿದ್ದು, ರೈತಾಪಿ ಜನರು ಕಂಗಾಲಾಗುವಂತಾಗಿದೆ.
ಇರುವ ಬೆರಳೇಣಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಸೇವೆ ನೀಡಬೇಕಿದೆ. ಪಶುಪಾಲನಾ ಇಲಾಖೆಯಲ್ಲಿ ಶೇ.50 ಸಿಬ್ಬಂದಿ ಕೊರತೆಯಿರುವುದು ಉಳಿಕೆ ಸಿಬ್ಬಂದಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ತುರ್ತು ರಜೆ ತೆಗೆದುಕೊಳ್ಳುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇದೆ. ಸರ್ಕಾರಿ ರಜೆ ದಿನಗಳಲ್ಲೂ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಅಲ್ಲದೆ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಲಾನುಭವಿಗಳಿಗೆ ತಲುಪಿಸುವುದು ಸವಾಲಿನ ಕೆಲಸವಾಗಿದ್ದು ರೈತಾಪಿ ಜನರ ಆಕ್ರೋಶ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ವೈದ್ಯರ ದಾರಿ ಕಾಯುವುದೇ ಕೆಲಸ:
ತಾಲೂಕುವಾರು ಹಲವು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಒಬ್ಬರೆ ವೈದ್ಯಾಧಿಕಾರಿಗಳು ನೋಡಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು ಕೆಲಸದ ಒತ್ತಡ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಂಪ್ಲೆಂಟ್ ಅಟೆಂಡ್ ಮಾಡಲು ಹೋದರೆ ಆಸ್ಪತ್ರೆ ಬಾಗಿಲು ಹಾಕಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಇನ್ನಿತರ ಜಾನುವಾರು ಕರೆದುಕೊಂಡು ಬಂದ ರೈತರು ವೈದ್ಯರ ದಾರಿ ಕಾಯುತ್ತಾ ಕೂರಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಒಂದೆ ದಿನ ಹಲವು ಕಡೆಗಳಲ್ಲಿ ಜಾನುವಾರುಗಳ ಆರೋಗ್ಯ ತಪಾಸಣೆ ತೆರಳಬೇಕಾದ ಸಂದರ್ಭ ಎದುರಾಗುತ್ತದೆ, ಎಲ್ಲ ಕಡೆಗಳಿಗೆ ಹೋಗುವಷ್ಟರಲ್ಲಿ ಅನೇಕ ಬಾರಿ ಜಾನುವಾರುಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೆ ಸಾವನ್ನಪು$್ಪವ ಪ್ರಕರಣಗಳು ಎದುರಾಗುತ್ತವೆ. ಇದರಿಂದ ಸಿಬ್ಬಂದಿ ಹೈನುಗಾರರ ಆಕ್ರೋಶಕ್ಕೆ ತುತ್ತಾಗುವಂತಾಗುತ್ತಿದೆ.
ಗ್ರಾಮಾಂತರ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿನ ಎಲ್ಲ ಜಿಲ್ಲೆಗಳಲ್ಲಿನ ಪಶುಪಾಲನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಅನೇಕ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದು ಒಂದು ಕಾರಣವಾಗಿದೆ. ಇತ್ತೀಚಿಗೆ ಕೆಪಿಎಸ್ಸಿ ಹಗರಣದಿಂದ ನೇಮಕಾತಿ ಪ್ರಕ್ರಿಯೆಗೆ ಮತ್ತಷ್ಟು ಜಟಿಲವಾಗಿದೆ. ಇದು ಸರ್ಕಾರದ ಗಮನದಲ್ಲೂ ಇದೆ ಆದರೆ ಯಾವುದೇ ಕ್ರಮಕೈಗೊಳ್ಳದಿರುವುದು ಇಂಥ ಅವ್ಯವಸ್ಥೆಗೆ ಕಾರಣವಾಗಿದೆ.
ಹೆಸರೇಳಲಿಚ್ಚಿಸದ ಪಶುವೈದ್ಯ ಸಿಬ್ಬಂದಿ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ಪಶುವೈದ್ಯಕಿಯ ಆಸ್ಪತ್ರೆಗಳು ಸದಾಕಾಲ ಬಾಗಿಲು ಹಾಕಿಕೊಂಡಿರುತ್ತವೆ, ಪ್ರಶ್ನಿದರೆ ಡಾಕ್ಟರ್ ಹಾಗೂ ಸಿಬ್ಬಂದಿ ಕಂಪ್ಲೆಂಟ್ ಅಡೆಂಡ್ ಮಾಡಲು ಹೋಗಿದ್ದಾರೆ ಎನ್ನುವ ಸಿದ್ದ ಉತ್ತರ ಬರುತ್ತದೆ. ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರೂ ಸಿಬ್ಬಂದಿ ಪ್ರತಿಕ್ರಿಯಿಸುವುದಿಲ್ಲ. ಜಿಲ್ಲೆಯಲ್ಲಿನ ಸಿಬ್ಬಂದಿ ಕೊರತೆಯಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.