Disinterest in the crop insurance scheme! 
ಬೆಂಗಳೂರು ಗ್ರಾಮಾಂತರ

ಫಸಲ್ ಭೀಮಾ ಯೋಜನೆಗೆ ನಿರಾಸಕ್ತಿ!

ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸದ್ಭಳಕೆಯಲ್ಲಿ ಗ್ರಾಮಾಂತರ ಜಿಲ್ಲಾ ರೈತರು ಹಿಂದುಳಿದಿದ್ದಾರೆ. ಈ ಯೋಜನೆ ಬಗ್ಗೆ ಕೃಷಿ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ..!
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ಪರಿಹಾರ ಒದಗಿಸಿಕೊಡುವ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸಹಕಾರಿಯಾಗಿದೆ. ರೈತರಿಗೆ ಪ್ರಕೃತಿ ವಿಕೋಪಗಳಾದ ಬರ, ಪ್ರವಾಹ, ಗಾಳಿ ಮಳೆ, ಕೀಟ ಬಾಧೆಗಳಿಂದ ಉಂಟಾಗುವ ಬೆಳೆ ನಷ್ಟ ಕ್ಕೆ ಆರ್ಥಿಕ ರಕ್ಷಣೆ ಒದಗಿಸುವುದು ಅವರ ಆದಾಯವನ್ನು ಸ್ಥಿರಗೊಳಿಸುವುದು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಆದರೆ ಜಿಲ್ಲೆಯಲ್ಲಿ ಸಾಕಷ್ಟು ರೈತರಿಗೆ ಈ ಯೋಜನೆ ಬಗ್ಗೆ ಅರಿವಿನ ಕೊರತೆ ಇದೆ, ಅರಿವಿದ್ದರೂ ನಿರಾಸಕ್ತಿ ಕಾರಣದಿಂದ ಯೋಜನೆ ಸದ್ಭಳಕೆಯಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ನೋಂದಣಿಗೆ ನಿರಾಸಕ್ತಿ:
ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ರೈತರು ಈ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮುಂಗಾರು ಸಮಯದಲ್ಲಿ ಹೆಚ್ಚು ರಾಗಿ ಬೆಳೆ ಬೆಳೆಯಲಾಗುತ್ತದೆ. ಇದರೊಂದಿಗೆ ತೊಗರಿ, ಅಲಸಂದಿ, ಮುಸುಕಿನ ಜೋಳ, ಹುರುಳಿ, ನೆಲಗಡಲೆ ಬೆಳೆಗಳನ್ನು ನೀರಾವರಿಯಾಶ್ರಿತ ಜಮೀನುಗಳಲ್ಲಿ ಬೆಳೆಯಲಾಗುತ್ತಿದೆ. ಆದರೆ ಪ್ರಕೃತಿ ವಿಕೋಪ ಮತ್ತಿತರ ಕಾರಣಗಳಿಂದ ಬೆಳೆ ನಷ್ಟವಾದರೆ ಇದಕ್ಕೆ ಪರಿಹಾರ ಪಡೆಯುವ ನಿಟ್ಟಿನಲ್ಲಿ ರೈತರೇ ಆಸಕ್ತಿ ತೋರಿಸುತ್ತಿಲ್ಲ ಎಂಬ ಮಾತು ಅಧಿಕಾರಿ ವಲಯಗಳಲ್ಲಿ ಕೇಳಿಬರುತ್ತಿದೆ.
6053 ರೈತರು ನೋಂದಣಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1.92 ಲಕ್ಷ ಮಂದಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 65 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗುತ್ತಿದೆ. ಫಸಲ್ ಭೀಮಾ ಯೋಜನೆ ಅಡಿಯಲ್ಲಿ ದೇವನಹಳ್ಳಿಯಲ್ಲಿ 1449, ಹೊಸಕೋಟೆ ಯಲ್ಲಿ 960, ದೊಡ್ಡಬಳ್ಳಾಪುರದಲ್ಲಿ 2966, ನೆಲಮಂಗಲದಲ್ಲಿ 669 ರೈತರು ನೋಂದಣಿ ಮಾಡಿಕೊಂಡಿದ್ದಾರೆ. 6053 ಮಂದಿ ರೈತರು ಕಳೆದ ಸಾಲಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಈ ವರ್ಷ ನೋಂದಣಿ ಹೆಚ್ಚುವ ನಿರೀಕ್ಷೆ:
ಕಡಿಮೆ ಬೆಲೆ ಪ್ರೀಮಿಯಂ ಪಾವತಿ ಮಾಡಿದರೆ ವಿಮೆ ಸೌಲಭ್ಯ ದೊರೆಯುತ್ತದೆ. ಈ ಯೋಜನೆಯ ಬಗ್ಗೆ ಅರಿವು ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಕೈಗೊಳ್ಳುವ ಮೂಲಕ ಯೋಜನೆಯ ಸೌಲಭ್ಯದ ಬಗ್ಗೆ ತಿಳಿಸುವ ಕೆಲಸವನ್ನುಮಾಡಬೇಕು ಎಂದು ಇತ್ತೀಚಿನ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ. ಈ ವರ್ಷ ಹೆಚ್ಚಿನ ನೋಂದಣಿಯಾಗುವ ನಿರೀಕ್ಷೆ ಇದೆ. ಕೃಷಿಯೊಂದಿಗೆ ತೋಟಗಾರಿಕೆ ಬೆಳೆಗಳಾದ ಮಾವು, ಟೊಮೇಟೊ ಒಳಗೊಂಡಂತೆ ವಿವಿಧ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿದೆ. ವರ್ಷದಿಂದ ವರ್ಷಕ್ಕೆ ಕನಿಷ್ಠ ಸಂಖ್ಯೆಯಲ್ಲಿ ನೋಂದಾಯಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಜಿಲ್ಲೆಯಲ್ಲಿ 2023-24ರಲ್ಲಿ 705 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. 2024-25ರಲ್ಲಿ 772 ಮಂದಿ ನೋಂದಾಯಿಸಿಕೊಂಡಿದ್ದಾರೆ. 2025 26 ನೇ ಸಾಲಿನಲ್ಲಿ 801 ಮಂದಿ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಹೊಸಕೋಟೆ 39, ದೇವನಹಳ್ಳಿ 615, ದೊಡ್ಡಬಳ್ಳಾಪುರ 145, ನೆಲಮಂಗಲದಲ್ಲಿ ಇಬ್ಬರು ಮಾತ್ರ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಹೆಸರು ನೋಂದಾಯಿಸಿಕೊಂಡಿದ್ದು. ಯೋಜನೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1.92 ಲಕ್ಷ ಮಂದಿ ರೈತರಿದ್ದಾರೆ. ಅದರಲ್ಲಿ ಸುಮಾರು 6 ಸಾವಿರ ಮಂದಿ ರೈತರು ಫಸಲ್ ಭೀಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.
ಕಲಾವತಿ ಜಂಟಿ ಕೃಷಿ ನಿರ್ದೇಶಕಿ ಬೆಂ.ಗ್ರಾಮಾಂತರ ಜಿಲ್ಲೆ