ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಆಸ್ತಿ ದಾಖಲೆ ತಿದ್ದುವ ಮೂಲಕ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿದ ದಾಖಲೆಗಳ ಡಿಜಿಟಲೀಕರಣ ಕ್ರಮಕ್ಕೆ ಗ್ರಾಮಾಂತರ ಜಿಲ್ಲೆಯಲ್ಲಿ ವೇಗ ದೊರೆತಿದ್ದು ಇದುವರೆಗೆ 76,79,286 ಲಕ್ಷ ದಾಖಲೆಗಳು ಡಿಜಿಟಲೀಕರಣಗೊಂಡಿವೆ.
ರಾಜ್ಯ ಸರ್ಕಾರ ರೂಪಿಸಿದ ಭೂಸುರಕ್ಷಾ ಯೋಜನೆಗೆ ಜಿಲ್ಲೆಯಲ್ಲಿ ವೇಗ ದೊರೆತಿದ್ದು, ದೇವನಹಳ್ಳಿಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ತೆಗೆದುಕೊಳ್ಳಲಾಗಿದೆ, ಪ್ರತಿ ತಾಲೂಕಿನಲ್ಲಿ ಪ್ರತಿ ದಿನ ಕನಿಷ್ಟ 10 ಸಾವಿರ ಪ್ರತಿಗಳನ್ನು ಸ್ಕಾೃನಿಂಗ್ ಮಾಡುವ ಗುರಿ ನಿಗಧಿಪಡಿಸಲಾಗಿದ್ದು, ಭಾಗಶಃ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ, ಒತ್ತಡವನ್ನು ಕಡಿಮೆ ಮಾಡಲು ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸಿ ಕಚೇರಿಯಲ್ಲೂ ದಾಖಲೆಗಳ ಡಿಜಟಲೀಕರಣ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯಲ್ಲಿ ಹೆಚ್ಚಿದ್ದ ವಂಚನೆ ಪ್ರಕರಣ:
ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣ ಸ್ಥಾಪನೆ ಬಳಿಕ ಜಿಲ್ಲೆಯಲ್ಲಿ ಭೂಮಿ ದರ ದಿಢೀರ್ ಗಗನಕ್ಕೇರತೊಡಗಿತು. ಜತೆಗೆ ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ, ನೆಲಮಂಗಲದ ದಾಬಸ್‌ಪೇಟೆ, ಹೊಸಕೋಟೆಯ ಪಿಳ್ಳಗುಂಪ ಕೈಗಾರಿಕವಲಯಗಳು ವಿಸ್ತರಿಸತೊಡಗಿದವು. ಇದರೊಂದಿಗೆ ಭೂ ಮಾಫಿಯಾವೂ ಎಡೆಬಿಚ್ಚತೊಡಗಿತ್ತು. ಈ ಹಿಂದಿನ ಕೈ ಬಹರಗಳ ದಾಖಲೆಗಳನ್ನು ತಿದ್ದುವುದು, ಒಂದೇ ಆಸ್ತಿಯನ್ನು ಹಲವರಿಗೆ ಪರಭಾರೆ ಮಾಡುವುದು, ಕಡತಗಳನ್ನೇ ನಾಪತ್ತೆ ಮಾಡುವುದು ಮತ್ತಿತರ ವಂಚನೆ ಪ್ರಕರಣಗಳು ಹೆಚ್ಚಾಗಿ ಭೂ ಮಾಲೀಕರು ತೀವ್ರ ಆತಂಕಕ್ಕೆ ಸಿಲುಕುವಂತಾಗಿತ್ತು. ರಾಜ್ಯ ಸರ್ಕಾರ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಮುಂದಾಗುತ್ತಿದ್ದಂತೆ ಭೂ ಮಾಲೀಕರು ಕಚೇರಿಗಳ ಮುಖ ಮಾಡಿದ್ದು ಆಸ್ತಿಗಳ ಡಿಜಟಲೀಕರಣಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಕಂಡುಬರುತ್ತಿದೆ. ಇದರಿಂದ ಕಂದಾಯ ಇಲಾಖೆಯಲ್ಲಿ ದಾಖಲೆಗಳ ಸ್ಕಾೃನಿಂಗ್ ಕಾರ್ಯವೂ ಚುರುಕುಪಡೆದಿದ್ದು ಕೆಲವೇ ತಿಂಗಳಲ್ಲಿ ಜಿಲ್ಲೆಯಲ್ಲಿನ ಎಲ್ಲ ಆಸ್ತಿಯನ್ನು ಡಿಜಿಟಲೀಕರಣ ಮಾಡಲಾಗುವುದು ಎಂದು ಜಿಲ್ಲಾಡಳಿತ ವಿಶ್ವಾಸ ವ್ಯಕ್ತಪಡಿಸಿದೆ.
ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೊಸಕೋಟೆಯಲ್ಲಿ ಹೆಚ್ಚು ಆಸ್ತಿಗಳ ಡಿಜಿಟಲೀಕರಣ ಕಾರ್ಯ ನಡೆದಿದ್ದು ಇದುವರೆಗೆ 21254 ಡಿಜಿಟಲ್ ಪ್ರತಿಗಳನ್ನು ವಿತರಿಸಲಾಗಿದೆ, ದೇವನಹಳ್ಳಿಯಲ್ಲಿ 8216 ಸಾವಿರ ಪ್ರತಿಗಳು, ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ 9186 ಹಾಗೂ ನೆಲಮಂಗಲ ತಾಲೂಕಿನಲ್ಲಿ 8671 ಸೇರಿ ಒಟ್ಟು 47,327 ಡಿಜಿಟಲ್ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ದೇವನಹಳ್ಳಿ ತಾಲೂಕನ್ನು ಭೂ ಸುರಕ್ಷಾ ಯೋಜನೆಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡಿದ್ದು ತಾಲೂಕಿನಲ್ಲಿ ಆಸ್ತಿಗಳ ಡಿಜಟಲೀಕರಣಕ್ಕೆ ವೇಗ ದೊರಕಿಸಿಕೊಡುವ ಕಸರತ್ತು ನಡೆಯುತ್ತಿದೆ. ಪ್ರಸ್ತುತ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ದೇವನಹಳ್ಳಿ ಮೂರನೇ ಸ್ಥಾನದಲ್ಲಿದ್ದು ಮುಂದಿನ ದಿನಗಳಲ್ಲಿ ಮೊದಲ ಸ್ಥಾನದ ಜತೆಗೆ ಅತೀ ಶೀಘ್ರದಲ್ಲಿ ತಾಲೂಕಿನ ಎಲ್ಲ ಆಸ್ತಿಗಳ ಡಿಜಟಲೀಕರಣದ ಗುರಿ ಮುಟ್ಟಲು ಅಧಿಕಾರಿಗಳು ಹರಸಾಹಸ ನಡೆಸುತ್ತಿದ್ದಾರೆ.
ತಾಲೂಕುವಾರು ಡಿಜಟಲೀಕರಣಗೊಂಡ ಮಾಹಿತಿ
ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಭೂ ಸುರಕ್ಷಾ ಯೋಜನೆಯಡಿ ಆಸ್ತಿಗಳ ಸುರಕ್ಷತೆಗೆ ಜಿಲ್ಲಾಡಳಿತ ಒತ್ತು ನೀಡಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಭೂಸುರಕ್ಷಾ ಯೋಜನೆಗೆ ವೇಗ ದೊರಕಿಸಿಕೊಡಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇನ್ನು ಆರೇಳು ತಿಂಗಳ ಅವಧಿಯೊಳಗೆ ಜಿಲ್ಲೆಯಲ್ಲಿನ ಎಲ್ಲ ಆಸ್ತಿಗಳ ಡಿಜಟಲೀಕರಣಗಳಿಸುವ ಗುರಿ ಹೊಂದಲಾಗಿದೆ.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ
ಭೂಮಿಗೆ ಸಂಬಂಧಿಸಿದ ಮ್ಯುಟೇಷನ್, ಸಿಆರ್ ದಾಖಲೆ, ಗ್ಯಾರಂಟಿ ಕಾಪಿ ಹೀಗೆ ಹಲವಾರು ಭೂ ಸಂಬಂಧಿ ದಾಖಲೆಗಳನ್ನು ಆನ್ ಲೈನ್‌ನಲ್ಲೇ ಪಡೆಯಬಹುದಾಗಿದ್ದು, ದಾಖಲೆಗಳ ಸಂರಕ್ಷಣೆ ಹಾಗೂ ಪಾರದರ್ಶಕತೆಗೆ ಇದು ಸಹಕಾರಿಯಾಗಿದೆ. ಕಂದಾಯ ಇಲಾಖೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸುವ ಮೂಲಕ ಆನ್‌ಲೈನ್‌ನಲ್ಲಿ ಭೂ ದಾಖಲೆಗಳನ್ನು ಪಡೆಯಲು ಅನುವು ಮಾಡಿಕೊಟ್ಟಿರುವುದು ಜಿಲ್ಲೆಯ ಭೂ ಮಾಲೀಕರಿಗೆ ವರದಾನವಾಗಿದೆ.
ಗೋಪಾಲಕೃಷ್ಣ, ರೈತ ದೇವನಹಳ್ಳಿ