ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಪಂ ವ್ಯಾಪ್ತಿಯ ಎಸ್.ವಡ್ಡಹಳ್ಳಿಯ ರೈತ ಎನ್.ರವೀಂದ್ರ ಅವರ ಅವಕಾಡೊ ತೋಟದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವದಲ್ಲಿ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಯೋಜನಾ ಸಂಯೋಜಕ ಡಾ.ಪ್ರಕಾಶ್ ಪಾಟೀಲ, ಕೊಡಗಿನ ಚಟ್ರಳ್ಳಿ ವಿಜ್ಞಾನಿ ಡಾ.ಜಿ.ನಯನ್ ದೀಪಕ್ ಇತರರು ಇದ್ದರು.
- ಅವಕಾಡೊ ದೇಸಿ ತಳಿಗಳ ಅಭಿವೃದ್ಧಿ
ನಂದಗುಡಿ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಬಹುಬೇಡಿಕೆಯ ಅವಕಾಡೊ ಹಣ್ಣಿ(ಬೆಣ್ಣೆಹಣ್ಣು)ನ ಐಐಎಚ್ಆರ್ "ಅರ್ಕಾ ಸುಪ್ರಿಂ' ಮತ್ತು "ಅರ್ಕಾ ಕೂರ್ಗ್ ರವಿ' ಎಂಬ ಹೆಸರಿನ ಎರಡು ನೂತನ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ರೈತರು ಬೆಳೆದು ಲಾಭಗಳಿಸಬಹುದು ಎಂದು ಎಂದು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ.ತುಷಾರ್ ಕಾಂತಿ ಬೆಹೆರಾ ತಿಳಿಸಿದರು.
ಎಸ್.ವಡ್ಡಹಳ್ಳಿಯ ರೈತ ಎನ್.ರವೀಂದ್ರ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ ಬೆಣ್ಣೆ ಹಣ್ಣು ತಳಿಗಳ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ಬೇಡಿಕೆಯುಳ್ಳ ಅವಕಾಡೊ ವಿದೇಶಿ ತಳಿಯಾಗಿದ್ದು, ಇದಕ್ಕೆ ಪರ್ಯಾಯವಾಗಿ ದೇಸಿ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅರ್ಕಾ ಕೂರ್ಗ್ ರವಿ ತಳಿಯು ಪ್ರತಿ ವರ್ಷವೂ ನಿಯಮಿತವಾಗಿ ಹಣ್ಣು ನೀಡುತ್ತದೆ. ಹೆಚ್ಚಿನ ಇಳುವರಿ ಮತ್ತು ಪ್ರತಿ ಹಣ್ಣಿನ ತೂಕ 400&600 ಗ್ರಾಂ ಇರಲಿದೆ. ಶೇ.80ರಷ್ಟು ತಿರುಳಿನ ಅಂಶವಿರುತ್ತದೆ. ಪ್ರತಿ ಗಿಡಕ್ಕೆ 185 ಕೆಜಿಯಷ್ಟು ಹಣ್ಣುಗಳನ್ನು ನೀಡುತ್ತದೆ. ಇದು ದುಂಡಾಗಿದ್ದು, ಶೇ.14&16 ತೈಲಾಂಶ ಹೊಂದಿರುತ್ತದೆ. ಅದೇ ರೀತಿ "ಅರ್ಕಾ ಸುಪ್ರಿಂ' ತಳಿಯ ಹಣ್ಣುಗಳು ಉದ್ದವಾಗಿರಲಿದ್ದು, ಶೇ.70 ತಿರುಳನ್ನು ಹೊಂದಿರುತ್ತವೆ. ಆದರೆ ಈ ಹಣ್ಣುಗಳು ಶೇ.16&18 ತೈಲಾಂಶ ಹೊಂದಿರುತ್ತವೆ. ಎರಡೂ ತಳಿಗಳು ನಾಟಿ ಮಾಡಿದ ಎರಡು ವರ್ಷಕ್ಕೆ ಲಬಿಡಲು ಆರಂಭವಾದರೂ ಐದು ವರ್ಷಗಳ ನಂತರ ಪ್ರತಿ ಸಸಿಯು 200&250 ಕೆ.ಜಿ.ಯಷ್ಟು ಫಸಲು ನೀಡುತ್ತದೆ.
ಉಪ್ಪು ನೀರಿಗೆ ಈ ಬೆಳೆ ಸೂಕ್ತವಲ್ಲ. ಹೆಕ್ಟೇರ್ಗೆ 400-&600 ಸಸಿಗಳು ಬೇಕಾಗುತ್ತವೆ. (5-5 ಮೀಟರ್ ಅಥವಾ ಇನ್ನೂ ಹತ್ತಿರದ ಅಂತರದಲ್ಲಿ ಸಸಿಗಳನ್ನು ನೆಡಬಹುದು.) ಈ ಸಸಿಗಳಿಗೆ ನೀರು ನಿಲ್ಲುವಂತಿರಬಾರದು. ನೀರು ನಿಂತರೆ ಕೊಳೆ ರೋಗ ಬಾಧಿಸುತ್ತದೆ. ಒಮ್ಮೆ ರೈತರು ನಾಟಿ ಮಾಡಿದರೆ 25 ವರ್ಷಗಳವರೆಗೂ ಫಲ ನೀಡುತ್ತವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತದೆ ಎಂದರು.
ಬೆಂಗಳೂರಿನ ಹೆಸರಘಟ್ಟ ಕೇಂದ್ರೀಯ ತೋಟಗಾರಿಕಾ ಪ್ರಧಾನ ಕೃಷಿ ವಿಜ್ಞಾನಿ, ಡಾ.ಬಿ.ಎಲ್.ಮಂಜುನಾಥ್ ಮಾತನಾಡಿ, ಅವಕಾಡೊ ವಾಣಿಜ್ಯ ಬೆಳೆಯಾಗಿದ್ದು, ಎಲ್ಲ ಭಾಗದ ರೈತರೂ ಬೆಳೆಯಬಹುದು. ಮಳೆಗಾಲದಲ್ಲಿ ನಾಟಿ ಮಾಡುವುದು ಹೆಚ್ಚು ಸೂಕ್ತ ಎಂದರು. ಬೆಣ್ಣೆ ಹಣ್ಣು ಮತ್ತು ಡ್ರ್ಯಾಗನ್ ಹಣ್ಣುಗಳ ವಿವಿಧ ತಳಿಗಳ ಬಗ್ಗೆ, ವಾತಾವರಣ, ಮಣ್ಣು, ಪೋಷಕಾಂಶ ಮತ್ತು ನೀರಿನ ನಿರ್ವಹಣೆ, ಅಂತರ ಬೆಳೆ ಹಾಗೂ ಮೌಲ್ಯವರ್ಧನೆ ಕುರಿತು ಕೊಡಗಿನ ಚಟ್ಲಳ್ಳಿ ಹಿರಿಯ ವಿಜ್ಞಾನಿ ಡಾ.ಬಿ.ಎಂ.ಮುರಳಿಧರ ಮಾಹಿತಿ ನೀಡಿ, ಕಪು$್ಪಮಣ್ಣು ಈ ಬೆಳೆಗೆ ಸೂಕ್ತವಲ್ಲ ಎಂದರು.
ಬೆಂಗಳೂರು ಕೇಂದ್ರೀಯ ತೋಟಗಾರಿಕಾ ಕೇಂದ್ರದ ವಿಜ್ಞಾನಿಗಳಾದ ಡಾ.ಎ.ಟಿ.ರಾಣಿ, ಈಡಾ ರಾಜೇಂದ್ರ, ಡಾ.ಜಿ.ಎಸ್.ಮಧು, ಡಾ.ಡಿ.ಟಿ.ಶಿವರಾಜ್, ನಂದಗುಡಿ ಕೃಷಿ ಇಲಾಖೆ ಪ್ರಶಾಂತ್, ರೈತರ ಕೆ.ರಮೇಶ್, ಲಕ್ಷ$್ಮಣ್ ಇತರರು ಇದ್ದರು.
ಆರೋಗ್ಯಕ್ಕೆ ಅತ್ಯುತ್ತಮ: ಅವಕಾಡೊ ಸೇವನೆಯಿಂದ ದೇಹ ತೂಕ ಕಡಿಮೆಯಾಗುತ್ತದೆ. ಇದರಲ್ಲಿರುವ ಕಾರ್ಬೊಹೈಡ್ರೇಟ್ ಮತ್ತು ಕೊಬ್ಬಿನಾಂಶ ದೇಹಕ್ಕೆ ಶಕ್ತಿ ನೀಡುತ್ತದೆ. ಸ್ನಾಯುಗಳನ್ನು ಬಲಪಡಿಸುವಲ್ಲಿಯೂ ಪ್ರಯೋಜನಕಾರಿ. ವಿಟಮಿನ್ ಎ, ಬಿ ಮತ್ತು ಇ ಅಂಶಗಳು ಹೇರಳವಾಗಿವೆ. ಪ್ರೋಟಿನ್, ಫೈಬರ್ ಮತ್ತು ಖನಿಜಾಂಶಗಳೂ ಇವೆ. ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆಗೊಳಿಸಬಹುದು. ಹಾಗೆಯೇ ಹೃದಯದ ಆರೋಗ್ಯಕ್ಕೂ ಹಣ್ಣು ಪೂರಕ. ಅವಕಾಡೊದಿಂದ ತೈಲವನ್ನೂ ತಯಾರಿಸಲಾಗುತ್ತದೆ. ಚರ್ಮ ಮೃದುಗೊಳಿಸುವಲ್ಲಿ ಈ ತೈಲ ಸಹಕಾರಿಯಾಗಲಿದೆ ಎಂದು ಡಾ.ತುಷಾರ್ ಹೇಳಿದರು.
ಹೀಗಿರಲಿ ನಿರ್ವಹಣೆ: ಬೆಂಗಳೂರಿನ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಬೆಳೆಗಳ ವಿಭಾಗದ ಮುಖ್ಯ ವಿಜ್ಞಾನಿ ಡಾ.ಜೆ.ಕರುಣಾಕರನ್ ಮಾತನಾಡಿ, ಆವಕಾಡೊಗಳಿಗೆ ಅಜೈವಿಕ ಮತ್ತು ಸಾವಯವ ಗೊಬ್ಬರಗಳೊಂದಿಗೆ ಭಾರಿ ಗೊಬ್ಬರ ಮತ್ತು ಸಮಗ್ರ ಪೋಷಕಾಂಶದ ಅಗತ್ಯವಿದೆ. ಸಾಮಾನ್ಯವಾಗಿ ಪ್ರತಿ ಮರಕ್ಕೆ ವಾರ್ಷಿಕವಾಗಿ 40&60 ಕೆಜಿ ಕೊಟ್ಟಿಗೆ ಗೊಬ್ಬರ, 500&800 ಗ್ರಾಂ ಸಾರಜನಕ, 150&250 ಗ್ರಾಂ ರಂಜಕ ಮತ್ತು 300&400 ಗ್ರಾಂ ಪೊಟ್ಯಾಷ್ ಬೇಕಾಗುತ್ತದೆ. ಸೂಕ್ಷ$್ಮ ಪೋಷಕಾಂಶ ಪ್ರಯೋಜನಕಾರಿ. ದಕ್ಷಿಣ ಭಾರತದ ಅರ್ಧ ಉಷ್ಣವಲಯ ಪ್ರದೇಶಗಳಲ್ಲಿ ರಸಗೊಬ್ಬರಗಳನ್ನು ಮೇ&-ಜೂನ್ ಮತ್ತು ಸೆಪ್ಟೆಂಬರ್&ಅಕ್ಟೋಬರ್ನಲ್ಲಿ ಹಾಕಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಅವುಗಳನ್ನು ಮಾರ್ಚ್&ಏಪ್ರಿಲ್ ಮತ್ತು ಸೆಪ್ಟೆಂಬರ್&ಅಕ್ಟೋಬರ್ ಅಥವಾ ಮಾನ್ಸೂನ್ನಲ್ಲಿ ಹಾಕಲಾಗುತ್ತದೆ. ರಸಗೊಬ್ಬರವನ್ನು ಕಾಂಡದಿಂದ ದೂರ ಇಡಬೇಕು. ಮರದ ವಯಸ್ಸು ಮತ್ತು ಛಾವಣಿ ಹರಡುವಿಕೆಗೆ ಸರಿ ಹೊಂದಿಸಬೇಕು ಮತ್ತು ಮಣ್ಣಿನಿಂದ ಮುಚ್ಚಬೇಕು. ಮಳೆಯಿಲ್ಲದಿದ್ದರೆ ನೀರಾವರಿ ಅಗತ್ಯ ಎಂದರು.
ಜಮೀನಿಗೆ ಬಂದು ಖರೀದಿಸುತ್ತಾರೆ...
ರೈತ ಎನ್.ರವೀಂದ್ರ ಮಾತನಾಡಿ, ಬೆಂಗಳೂರಿನ ಹೆಸರಘಟ್ಟ ಕೇಂದ್ರೀಯ ತೋಟಗಾರಿಕಾ ಮಾಹಿತಿ ಸಂಗ್ರಹಿಸಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಒಂದು ಎಕರೆ ಜಮೀನಿನಲ್ಲಿ ಬೆಣ್ಣೆಹಣ್ಣು ನಾಟಿ ಮಾಡಿದ್ದು, ಉತ್ತಮ ಫಸಲು ಬಂದಿದೆ. ಸ್ಥಳಕ್ಕೆ ವ್ಯಾಪಾರಸ್ಥರು ಬಂದು ಹಣ್ಣು ಖರೀದಿಸುತ್ತಾರೆ. ತಾಲೂಕಿನಲ್ಲಿರುವ ರೈತರು ಮುಂದಿನ ದಿನಗಳಲ್ಲಿ ಈ ತಳಿ ನಾಟಿ ಮಾಡಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.