ವಿಜಯಪುರ :
ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆಗೆ ಆರ್ಥಿಕ ನೆರವು ನೀಡಿದವರನ್ನು ಸದಾ ನೆನಪಿಸಿಕೊಳ್ಳಬೇಕು. ಶಿಕ್ಷಣದ ಜತೆಗೆ ಕೌಶಲ ಬೆಳೆಸಿಕೊಂಡು ಉನ್ನತ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ, ಶಿಕ್ಷಕ ಬಿ.ವಿನಯ್ ಕುಮಾರ್ ಹೇಳಿದರು.
ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ನಗರ್ತ ಯುವಕ ಸಂಘ ಮತ್ತು ಕೋರಮಂಗಲ ರುದ್ರಪ್ಪ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸೌಲಭ್ಯ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಸಿ.ಭಾಸ್ಕರ್ ಮಾತನಾಡಿ, ಈ ಟ್ರಸ್ಟ್ ಆರಂಭವಾದಾಗಿನಿಂದ ಹೊರಗಿನ ವಿದ್ಯಾರ್ಥಿಗಳಿಗೆ ವಸತಿ, ವಿದ್ಯಾರ್ಥಿವೇತನ, ದೇವಸ್ಥಾನಗಳ ಸೇವೆ ಹಾಗೂ ಜೀವರಾಶಿಗಳ ಪಾಲನೆ ಮಾಡಿಕೊಂಡು ಬಂದಿದೆ ಎಂದರು.
5 ಎಸ್ಸೆಸ್ಸೆಲ್ಸಿ ಹಾಗೂ 8 ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜತೆಗೆ 35 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸೌಲಭ್ಯ ವಿತರಿಸಲಾಯಿತು. ಈ ವೇಳೆ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಆರ್.ವಿಶ್ವಾಸ್, ಸಹ ಕಾರ್ಯದರ್ಶಿ ಸುಮನ್, ಯೋಜನಾ ನಿರ್ದೇಶಕ ವಿ.ಹರ್ಷ, ಮಾಜಿ ಗೌರವಾಧ್ಯಕ್ಷ ಎನ್.ರುದ್ರಮೂರ್ತಿ, ಬಿಸಿ ಸಿದ್ದರಾಜು, ಮಹಾಂತಿನಮಠ ಧರ್ಮ ಸಂಸ್ಥೆ ಅಧ್ಯಕ್ಷ ಪುನೀತ್ ಶಿವಕುಮಾರ್, ಮುಖಂಡರು, ಪದಾಧಿಕಾರಿಗಳು ಇದ್ದರು.