devanahalli hospital 
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಆಸ್ಪತ್ರೆಯಲ್ಲಿ ಕಳ್ಳಾಟ ಬಯಲು!

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಉಪವಿಭಾಗಾಧಿಕಾರಿ ಮಂಜುನಾಥ್ ಎದುರು ಆಸ್ಪತ್ರೆಯಲ್ಲಿನ ವೈದ್ಯ ಸಿಬ್ಬಂದಿ ಕಳ್ಳಾಟ ಬಯಲಾಗಿದೆ.
ಆಸ್ಪತ್ರೆಯ ಹಾಜರಾತಿಯಲ್ಲಿ ಸಹಿ ಮಾಡಿದ್ದರೂ ಕರ್ತವ್ಯ ನಾಲ್ವರು ವೈದ್ಯರು ಕರ್ತವ್ಯದಲ್ಲಿ ಇಲ್ಲದಿರುವುದು, ಆಸ್ಪತ್ರೆಯ ಮೆಡಿಕಲ್‌ಶ್ಾ ಬಾಗಿಲು ಹಾಕಿರುವುದು ಕಂಡುಬಂದಿದೆ. ಜತೆಗೆ ಅಧಿಕಾರಿ ಬಂದರೆಂದು ತರಾತುರಿಯಲ್ಲಿ ಆಸ್ಪತ್ರೆ ಸ್ವಚ್ಛತೆಗೆ ಮುಂದಾದ ದೃಶ್ಯಗಳು ಕಂಡುಬಂದಿವೆ. ಇವುಗಳನ್ನು ಗಮನಿಸಿದ ಎಸಿ ಮಂಜುನಾಥ್ ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಬಡಜನರು ಬರುವ ಈ ಆಸ್ಪತ್ರೆಯಲ್ಲಿ ವೈದ್ಯರ ಕೃತಕ ಕೊರತೆ ಸೃಷ್ಟಿಸುತ್ತಿರುವುದು ಏಕೆ? ಮೆಡಿಕಲ್‌ಶಾಪ್ ಬಂದ್ ಮಾಡಿರುವುದೇಕೆ? ತುರ್ತು ಪರಿಸ್ಥಿತಿಯಲ್ಲಿ ಹೆರಿಗೆಗೆ ಬರುವ ಗರ್ಭಿಣಿಯರ ಪಾಡೇನು ಎಂದು ಸಿಬ್ಬಂದಿ ವಿರುದ್ಧ ಗರಂ ಆದರು.
ಡಿಸಿ ನೋಟಿಸ್:
ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿ ತಕ್ಷಣ ಅಸ್ಪತ್ರೆ ಪರಿಸ್ಥಿತಿ ಪರಿಶೀಲಿಸುವಂತೆ ಉಪವಿಭಾಗಾಧಿಕಾರಿಗೆ ಅದೇಶ ನೀಡಿದ್ದರು. ಆಸ್ಪತ್ರೆಯಲ್ಲಿ ಇಬ್ಬರು ಮಹಿಳಾ ವೈದ್ಯರು ಸೇರಿ ನಾಲ್ವರು ವೈದ್ಯರು ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು. ಜಿಲ್ಲಾ ಆರೋಗ್ಯಾಧಿಕಾರಿಯನ್ನು ಕರೆಸಿ ತರಾಟೆ ತೆಗೆದುಕೊಂಡು ಇಂಥ ಪರಿಸ್ಥಿತಿ ಪುನಾವರ್ತನೆಯಾಗದಂತೆ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯ ವೈದ್ಯ ಸಿಬ್ಬಂದಿ ನೇಮಕವಾಗಿದ್ದರೂ ವಿನಾಕಾರಣ ಗೈರಾಗಿರುವುದು ಗಮನಕ್ಕೆ ಬಂದಿದೆ. ಇದು ಪುನಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಆಸ್ಪತ್ರೆ ಶುಚಿತ್ವಕ್ಕೆ ಅದ್ಯತೆ ನೀಡುವಂತೆ ತಾಕೀತು ಮಾಡಲಾಗಿದೆ. ಇಂಥ ಲೋಪಗಳು ಮತ್ತೆ ಆಗದಂತೆ ಎಚ್ಚರ ವಹಿಸಲು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗೆ ಎಚ್ಚರಿಕೆ ನೀಡಲಾಗಿದೆ.
ಮಂಜುನಾಥ್, ಉಪವಿಭಾಗಾಧಿಕಾರಿ ದೇವನಹಳ್ಳಿ
ವರದಿ ಪರಿಣಾಮ:
’ದೇವನಹಳ್ಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವ್ಯವಸ್ಥೆ’ ಶೀರ್ಷಿಕೆಯಡಿ ಜೂ.25 ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ರಿಯಾಲಿಟಿ ಚೆಕ್ ನಡೆಸಿ ಅವ್ಯವಸ್ಥೆಯನ್ನು ಬಯಲಿಗೆಳೆದಿತ್ತು. ವರದಿ ಗಮನಿಸಿದ ಜಿಲ್ಲಾಧಿಕಾರಿ ತಕ್ಷಣ ಕ್ರಮಕ್ಕೆ ಮುಂದಾಗಿದ್ದರಿಂದ ಉಪವಿಭಾಗಾಧಿಕಾರಿ ಎದುರು ಆಸ್ಪತ್ರೆಯಲ್ಲಿನ ಸಿಬ್ಬಂದಿ ಕಳ್ಳಾಟ ಬಯಲಾಗಿದೆ.