devanahahalli fort 
ಬೆಂಗಳೂರು ಗ್ರಾಮಾಂತರ

ಏರ್‌ಪೋರ್ಟ್ ನಗರಿಯಲ್ಲಿ ದೇವನಹಳ್ಳಿ ಕೋಟೆ

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಏರ್‌ಪೋರ್ಟ್‌ನಗರಿಯಾಗಿ ವಿಶ್ವಪ್ರಸಿದ್ಧಿ ಪಡೆದಿರುವ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದೇವನಹಳ್ಳಿಯಲ್ಲಿ ಮೈಸೂರು ಹುಲಿ ಖ್ಯಾತಿಯ ಟಿಪ್ಪು ಜನ್ನಸ್ಥಳ ದೇವನಹಳ್ಳಿಯ ಕೋಟೆ ಜಿಲ್ಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಾಟಿ ಕೆಲವೇ ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಈ ಕಲ್ಲಿನ ಕೋಟೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಬೆಂಗಳೂರಿನಿಂದ ಸುಮಾರು 40ಕಿ.ಮೀ ಅಂತರದಲ್ಲಿ ದೇವನಹಳ್ಳಿ ಟೌನ್‌ನಿಂದ ಕೇವಲ 600 ಮೀಟರ್ ಅಂತರದಲ್ಲಿ ಈ ಐತಿಹಾಸಿಕ ಪ್ರವಾಸಿ ತಾಣವಿದ್ದು, ಇಂದಿಗೂ ತನ್ನ ಗತವೈಭವವನ್ನು ಪ್ರವಾಸಿಗರಿಗೆ ಉಣಬಡಿಸುತ್ತಿದೆ. ವಾರಾಂತ್ಯಗಳಲ್ಲಿ ನೂರಾರು ಪ್ರವಾಸಿಗರು ದಾಂಗುಡಿ ಇಟ್ಟು ಶತಮಾನಗಳ ಇತಿಹಾಸದ ಸಾರುತ್ತಿರುವ ಬಿಸಿಲು, ಮಳೆಗಾಳಿಗೆ ಎದೆಯೊಡ್ಡಿ ನಿಂತಿರುವ ಈ ವಿಸ್ಮಯ ಕೋಟೆಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಅಲಂಕೃತ ಪ್ರವೇಶ ದ್ವಾರಗಳು:
ಈ ಕೋಟೆಯು ಸುಮಾರು 20 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದು ಅಂಡಾಕಾರದ ಆಕಾರದಲ್ಲಿದ್ದು, ಬೃಹತ್ ಬಂಡೆಗಳಿಂದ ನಿರ್ಮಿಸಲ್ಪಟ್ಟಿದೆ. ಮಧ್ಯಂತರದಲ್ಲಿ 12 ಅರ್ಧವೃತ್ತಾಕಾರದ ಬುರುಜುಗಳಿವೆ. ಕೋಟೆಯ ಒಳಭಾಗದಲ್ಲಿ ವಿಶಾಲವಾದ ಪ್ರದೇಶವಿದೆ. ಕೋಟೆಯು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಅಲಂಕರಿಸಲ್ಪಟ್ಟ ಪ್ರವೇಶದ್ವಾರಗಳನ್ನು ಹೊಂದಿದೆ. ಅಂಡಾಕಾರದ ಪೂರ್ವ-ಆಧಾರಿತ ಕೋಟೆ ಕಲ್ಲಿನಿಂದ ಅಲಂಕರಿಸಲ್ಪಟ್ಟಿದ್ದು, ನಿಯಮಿತ ಅಂತರದಲ್ಲಿ 12 ಅರ್ಧವೃತ್ತಾಕಾರದ ಕೊತ್ತಲಗಳನ್ನು ಹೊಂದಿದೆ. ಕೋಟೆಯ ಒಳಭಾಗದಲ್ಲಿ ವಿಶಾಲವಾದ ಕೊತ್ತಲ ಗಮನ ಸೆಳೆಯುತ್ತದೆ.
ಇತಿಹಾಸ:
ದೇವನಹಳ್ಳಿ ಕೋಟೆಯ ಇತಿಹಾಸ 15ನೇ ಶತಮಾನದಷ್ಟು ಹಳೆಯದಾಗಿದ್ದು. ದೇವನಹಳ್ಳಿ ಈ ಹಿಂದೆ ಗಂಗವಾಡಿಯ ಒಂದು ಭಾಗವಾಗಿತ್ತು ನಂತರದಲ್ಲಿ ಅನೇಕ ರಾಜಮನೆಗಳ ಆಳ್ವಿಕೆಗೆ ಒಳಪಟ್ಟಿತ್ತು. ವಿಜಯನಗರ ಆಳ್ವಿಕೆಯ ಕಾಲದಲ್ಲಿ ಮಲ್ಲಬೈರೇಗೌಡರು ಮಣ್ಣಿನ ಕೋಟೆ ನಿರ್ಮಿಸಿದರು. ಕ್ರಿ.ಶ. 1749ರಲ್ಲಿ ನಂಜರಾಜನ ನೇತೃತ್ವದಲ್ಲಿ ಕೋಟೆಯನ್ನು ಮೈಸೂರು ಒಡೆಯರಿಗೆ ಹಸ್ತಾಂತರಿಸಲಾಯಿತು. ನಂತರ ಮರಾಠರು ಇದನ್ನು ಹಲವು ಬಾರಿ ವಶಪಡಿಸಿಕೊಂಡರು. ಬಳಿಕ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ನಿಯಂತ್ರಣಕ್ಕೆ ಬಂತು. 18 ನೇ ಶತಮಾನದ ಉತ್ತರಾರ್ಧದಲ್ಲಿ, ಹೈದರ್ ಅಲಿ ಕೋಟೆಯನ್ನು ಕಲ್ಲಿನಲ್ಲಿ ಪುನರ್ನಿರ್ಮಿಸಿದ ಎನ್ನಲಾಗಿದ್ದು, 1791ರಲ್ಲಿ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರು ಈ ಕೋಟೆ ವಶಪಡಿಸಿಕೊಂಡರು ಎಂಬ ಮಾಹಿತಿ ಇದೆ.
ಸಂರಕ್ಷಿತ ಸ್ಮಾರಕ:
ಕೋಟೆಯ ಹೊರಗೆ ಮತ್ತು ಟಿಪ್ಪು ಸುಲ್ತಾನನ ಜನ್ಮಸ್ಥಳದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಫಲಕವು ಅವುಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸುತ್ತದೆ.
ತಲುಪುವುದು ಹೇಗೆ?
ಬೆಂಗಳೂರಿನಿಂದ 40 ಕಿ.ಮೀ
ರಾಜಧಾನಿ ಬೆಂಗಳೂರಿನಿಂದ ಕೇವಲ 40 ಕಿ.ಮೀ ಅಂತರದಲ್ಲಿ ದೇವನಹಳ್ಳಿ ಕೋಟೆ ಇದೆ, ಕೆಂಪೇಗೌಡ ಏರ್‌ಪೋರ್ಟ್ ದಾರಿ ದಾಟುತ್ತಿದ್ದಂತೆ ಕೋಟೆ ಹೆದ್ದಾರಿಯ ಪಕ್ಕದಲ್ಲೇ ಕಾಣಸಿಗುತ್ತದೆ. ಕೇವಲ 1 ಗಂಟೆ ಅವಧಿಯ ಪ್ರಯಾಣ, ಸಾಕಷ್ಟು ಸಾರಿಗೆ ವ್ಯವಸ್ಥೆ ಇದೆ. ದೇವನಹಳ್ಳಿ ಟೌನ್‌ನಿಂದ ಕೇವಲ 600 ಮೀಟರ್ ಅಂತರದಲ್ಲಿದೆ. ಚಿಕ್ಕಬಳ್ಳಾಪುರದಿಂದ 24 ಕಿ.ಮೀ, ದೊಡ್ಡಬಳ್ಳಾಪುರ ಭಾಗದಿಂದ ಬಂದರೆ ಕೇವಲ 28 ಕಿ.ಮೀ ಅಂತರದಲ್ಲಿ ಕೋಟೆ ಎದುರುಗೊಳ್ಳುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ದೇವನಹಳ್ಳಿ ಕೋಟೆ ವಿಶೇಷವಾಗಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ವಾರಾಂತ್ಯಗಳಲ್ಲಿ ನೂರಾರು ಪ್ರವಾಸಿಗರು ಪಿಕ್‌ನಿಕ್‌ಗಾಗಿ ಬರುತ್ತಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿಯೇ ಕೋಟೆ ಇರುವುದರಿಂದ ಪ್ರವಾಸಿಗರು ಸುಲಭವಾಗಿ ಕೋಟೆ ವೀಕ್ಷಣೆ ಮಾಡಬಹುದಾಗಿದೆ.
ಪ್ರೀತಿ, ಉಪನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ ಬೆಂ.ಗ್ರಾಮಾಂತರ