ದೊಡ್ಡಬಳ್ಳಾಪುರ ಬಸವಭವನದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜು, ಪುಟ್ಟಬಸವರಾಜು, ಮಂಜುನಾಥ, ಲೋಕೇಶ್​, ಪ್ರಭಾಕರ್​ ಇತರರು ಇದ್ದರು. 
ಬೆಂಗಳೂರು ಗ್ರಾಮಾಂತರ

'ಬಸವ ಮಂಟಪ' ಕೃತಿ ನಿಷೇಧಕ್ಕೆ ಒತ್ತಾಯ

* ಮಂಗಳವಾರ ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆಗೆ ಕರೆ

ದೊಡ್ಡಬಳ್ಳಾಪುರ: ಲೇಖಕ ರವಿ ಹಂಜ್​ ಬರೆದಿರುವ "ಬಸವ ಮಂಟಪ' ಕೃತಿಯಲ್ಲಿ ವಿಶ್ವಗುರು ಬಸವಣ್ಣನ ಕುರಿತು ಅವಹೇಳನ ಮಾಡಲಾಗಿದೆ. ಇದನ್ನು ವೀರಶೈವ ಲಿಂಗಾಯತ ಸಮುದಾಯದಿಂದ ಖಂಡಿಸುತ್ತಿದ್ದೇವೆ. ಕೃತಿಯ ಲೇಖಕ ರವಿ ಹಂಜ್​ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಮುಖಂಡ ಪುಟ್ಟಬಸವರಾಜು ತಿಳಿಸಿದರು.

ನಗರದ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ್​ ಬಿದರಿ ಸಮ್ಮುಖದಲ್ಲಿ ಈ ಕೃತಿ ಬಿಡುಗಡೆಯಾಗಿರುವುದು ವಿಪರ್ಯಾಸ. ಒಂದು ಸಮಾಜದ ವಿರುದ್ಧ ಮತ್ತೊಂದು ಸಮಾಜವನ್ನು ಎತ್ತಿಕಟ್ಟಲಾಗುತ್ತಿದೆ. ಇಂತಹ ಘಟನೆಯನ್ನು ತಡೆಯಲೇಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತವೆ. ಕೃತಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.