ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ತನಿಖೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಚಿಕ್ಕಬಳ್ಳಾಪುರ ನಗರದ ಬೆಸ್ಟ್ ಪಿಯುಸಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಶಾಂಕ್ (15) ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪಾಲಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್ ಶವ ಸಾಧು ಮಠ ಗ್ರಾಮದ ರಸ್ತೆ ಬದಿಯ ಮೋರಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಈತನ ಬೈಕ್ ಪಕ್ಕದ ಹಳ್ಳದಲ್ಲಿ ಬಿದ್ದಿದ್ದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ. 15 ರಂದು ಆರೋಗ್ಯ ಸರಿ ಇಲ್ಲದ ಕಾರಣ ಕಾಲೇಜಿಗೆ ರಜೆ ಹಾಕಿದ್ದ ಶಶಾಂಕ್ ಮನೆಯಲ್ಲಿಯೇ ಇದ್ದ. ಅಂದು ಮುಂಜಾನೆ 7.30ರ ಸುಮಾರಿಗೆ ಹೊರಗೆ ಹೋಗಿ ಬರುವುದಾಗಿ ಬೈಕ್ ತೆಗೆದುಕೊಂಡು ಹೊರಟಿದ್ದವನು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಡಿ.15 ರಂದು ಸಂಜೆಯಾದರೂ ಮಗ ಮನೆಗೆ ಮರಳಿರಲಿಲ್ಲ. ಗಾಬರಿಗೊಂಡ ಪಾಲಕರು ಶಶಾಂಕ್ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಪೋನ್ ಸ್ವಿಚ್‌ಆ್ ಆಗಿರುವುದು ಗೊತ್ತಾಗಿದೆ. ಬಳಿಕ ಸಂಬಂಧಿಕರು ಸ್ನೇಹಿತರನ್ನು ವಿಚಾರಿಸಲಾಗಿದೆ ಆದರೆ ಎಲ್ಲಿಯೂ ಮಗನ ಬಗ್ಗೆ ಮಾಹಿತಿ ಸಿಕ್ಕಿಲ್ಲ, ನಂತರ ಡಿ16ರಂದು ಪಾಲಕರು ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಮೇಲ್ನೋಟಕ್ಕೆ ಅಪಘಾತದಂತೆ ಕಂಡುಬಂದಿದೆ ಎನ್ನಲಾಗಿದೆ ಆದರೆ ಇದನ್ನು ನಿರಾಕರಿಸಿರುವ ಪಾಲಕರು ಯಾರೂ ಉದ್ದೇಶಪೂರ್ವಕವಾಗಿ ಮಗನನ್ನು ಕೊಲೆ ಮಾಡಿದ್ದಾರೆ ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ಘಟನಾ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸಹ ಭೇಟಿ ಮಾಡಿ ಪರಿಶೀಲನೆ ನಡೆಸಿದೆ.
ಮಗನ ಸಾವಿನ ಸುದ್ದಿ ತಿಳಿದ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಮಗನನ್ನು ಯಾರೂ ಕೊಲೆ ಮಾಡಿದ್ದಾರೆ ಪಾಪಿಗಳು ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.