DC visit 
ಬೆಂಗಳೂರು ಗ್ರಾಮಾಂತರ

ಶುದ್ಧ ನೀರು ಪೂರೈಕೆಗೆ ಡಿಸಿ ತಾಕೀತು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಓವರ್‌ಹೆಡ್ ಟ್ಯಾಂಕ್ ಮೂಲಕ ಕಲುಷಿತ ನೀರು ಸರಬರಾಜು ಆಗಿರುವ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ಚಿಕ್ಕಬಳ್ಳಾಪುರ ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಮಾಡುವ ಸಂದರ್ಭದಲ್ಲಿ ನೀರು ಸರಬರಾಜು ಪೈಪ್‌ಗೆ ಹಾನಿಯಾಗಿರುವುದರಿಂದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿರುವುದು ಪರಿಶೀಲನೆ ಸಂದರ್ಭದಲ್ಲಿ ಕಂಡು ಬಂದಿದೆ. ಆದ್ದರಿಂದ ಕೂಡಲೇ ಮಣ್ಣು ಮಿಶ್ರಿತ ನೀರು ಹೊರ ತೆಗೆದು ಟ್ಯಾಂಕ್ ಸ್ವಚ್ಛಗೊಳಿಸಿ ಶುದ್ಧ ನೀರು ಸರಬರಾಜು ಮಾಡಲು ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ಥಳದಲ್ಲೇ ಸೂಚಿಸಿದರು. ನಂತರ ವಿಜಯಪುರ ಪಟ್ಟಣದಲ್ಲಿ ನೀರು ಸರಬರಾಜು ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಸಮರ್ಪಕ ಹಾಗೂ ಶುದ್ಧ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.