ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಸೋಮವಾರ ಜಿಲ್ಲಾಡಳಿತಭವನದ ವಿವಿಧ ಇಲಾಖಾ ಕಚೇರಿಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಸಿಬ್ಬಂದಿಯ ಕಾರ್ಯಕ್ಷಮತೆ ಪರಿಕ್ಷೀಸಿದರು. ಸಿಬ್ಬಂದಿ ಹಾಜರಾತಿ ಖಚಿತಪಡಿಸಿಕೊಳ್ಳಲು ಡಿಸಿ ನಡೆಸಿದ ರಿಯಾಲಿಟಿ ಚೆಕ್‌ನಿಂದ ಜಿಲ್ಲಾಡಳಿತ ಸಿಬ್ಬಂದಿ ಕೆಲಕಾಲ ಶಾಕ್ ಎದುರಿಸುವಂತಾಯಿತು. ಹಲವು ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಯ ಕಚೇರಿ ಸಮಯವಾದರೂ ಹಲವು ಸಿಬ್ಬಂದಿ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಡಿಸಿ ಗರಂ ಆದರು.
ಸೋಮವಾರ ಎಂದಿನಂತೆ ಅಧಿಕಾರಿಗಳು ಕಚೇರಿಗಳಿಗೆ ಬರತೊಡಗಿದ್ದರು, ಅಷ್ಟರಲ್ಲೇ ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಅವರನ್ನು ಎದುರುಗೊಂಡ ಸಿಬ್ಬಂದಿ ಕೆಲಕಾಲ ಅವಕ್ಕಾದರು. ನಮಸ್ತೆ ಮೇಡಂ ಎನ್ನುತ್ತಾ ತಮ್ಮ ತಮ್ಮ ಕಚೇರಿಗಳ ಕಡೆಗೆ ಹೆಜ್ಜೆ ಹಾಕತೊಡಗಿದರು. ಜಿಲ್ಲಾಡಳಿತಭವನದ ಮೂರು ಅಂತಸ್ತಿನ 32 ಇಲಾಖೆಗಳ ಕಚೇರಿಗೂ ಡಿಸಿ ಭೇಟಿ ನೀಡುತ್ತಿರುವ ವಿಷಯ ಹರಡುತ್ತಿದ್ದಂತೆ ಸಿಬ್ಬಂದಿ ತರಾತುರಿಯಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಆರಂಭಿಸಿದ ದೃಶ್ಯ ಕಂಡುಬಂತು.
ಇತ್ತೀಚೆಗೆ ಸರ್ಕಾರ ಎಲ್ಲ ಸರ್ಕಾರಿ ನೌಕರರಿಗೆ ಆನ್‌ಲೈನ್ ಮೂಲಕ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ತವ್ಯ ಆ್ಯಪ್ ಬಿಡುಗಡೆಗೊಳಿಸಿದೆ. ಈ ಆ್ಯಪ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳು ಲಾಗಿನ್ ಆಗಬೇಕು, ಸಂಜೆ 5.30 ಕ್ಕೆ ಲಾಗ್ ಔಟ್ ಆಗಬೇಕು ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಖುದ್ದು ಪರಿಶೀಲನೆ ನಡೆಸಲು ಡಿಸಿ ದಿಢೀರ್ ಭೇಟಿ ನೀಡಿದ್ದರು.ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ ಇಲಾಖೆ, ಭೂ ದಾಖಲೆಗಳ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳಿಗೆ ಡಿಸಿ ಭೇಟಿ ನೀಡಿದ್ದರು.
ಅಧಿಕಾರಿಗಳ ಕರ್ತವ್ಯದ ಬಗೆಗಿನ ರಿಯಾಲಿಟಿ ಚೆಕ್:
ಜಿಲ್ಲಾಧಿಕಾರಿ ಅನುರಾಧಾ ಸೋಮವಾರ ಬೆಳಗ್ಗೆ 10ರಿಂದ ರಿಂದ 11 ಗಂಟೆ ಸಮಯದಲ್ಲಿ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಕುರ್ಚಿಯಲ್ಲಿ ಕುಳಿತಿದ್ದಾರೆಯೇ?, ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಯೇ?, ಸಮಯಕ್ಕೆ ಸರಿಯಾಗಿ ಏಕೆ ಇನ್ನೂ ಬಂದಿಲ್ಲ? ಅಥವಾ ಅಧಿಕಾರಿಗಳು ಕ್ಷೇತ್ರ ಭೇಟಿ(ಫೀಲ್ಡ್ ವರ್ಕ್) ಹೋಗಿದ್ದರೇ ಅದರ ಬಗ್ಗೆ ಕರ್ತವ್ಯ ಆ್ಯಪ್‌ನಲ್ಲಿ ದಾಖಲಿಸಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಸಮಜಾಯಿಷಿ ಪಡೆದರು.
ಹಲವು ಕಚೇರಿಗಳಲ್ಲಿ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಅನುರಾಧಾ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು, ಸೂಕ್ತ ಕಾರಣ ನೀಡುವಂತೆ ಸೂಚಿಸಿ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದರು. ಕರ್ತವ್ಯ ಆ್ಯಪ್‌ನಲ್ಲಿ ಕಡ್ಡಾಯವಾಗಿ ಎಲ್ಲರೂ ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸಬೇಕು ಇಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನ ಆರಂಭವಾದ ದಿನದಿಂದ ಇದುವರೆಗೆ ಏಳೆಂಟು ಡಿಸಿಗಳು ಬಂದು ಹೋಗಿದ್ದಾರೆ. ಆದರೆ ಇದುವರೆಗೆ ಯಾರೊಬ್ಬರೂ ಈ ರೀತಿ ಜಿಲ್ಲಾಡಳಿತಭವನದಲ್ಲಿ ರಿಯಾಲಿಟಿ ಚೆಕ್ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಾವ ಅಧಿಕಾರಿ ಸಿಬ್ಬಂದಿಯೂ ಡಿಸಿ ದಿಢೀರ್ ಭೇಟಿ ನೀಡುವ ಬಗ್ಗೆ ಊಹೆ ಮಾಡಿರಲಿಲ್ಲ. ಎಂದಿನಂತೆ ಕಚೇರಿ ಸಿಬ್ಬಂದಿ ಒಬ್ಬೊಬ್ಬರಾಗಿ ಕಚೇರಿಗೆ ಬರುತ್ತಿದ್ದರು, ಕೆಲವರು 11 ಗಂಟೆಯಾದರೂ ಬರುತ್ತಲೇ ಇದ್ದರು. ಇವರನ್ನು ಎದುರುಗೊಂಡ ಜಿಲ್ಲಾಧಿಕಾರಿಗಳನ್ನು ಕಂಡು ಸಿಬ್ಬಂದಿ ಕೆಲಕಾಲ ಗಡಿಬಿಡಿಗೊಂಡರು. ಬೆಳಗ್ಗೆಯೇ ಜಿಲ್ಲಾಧಿಕಾರಿ ನಮ್ಮ ಕಚೇರಿಗೇಕೆ ಬಂದಿದ್ದಾರೆ ಎಂದು ಸಿಬ್ಬಂದಿ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿ ಪ್ರಶ್ನಾರ್ಥಕ ಭಾವನೆ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು.
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ವರ್ಗ ಸರಿಯಾದ ವೇಳೆಗೆ ಬರುವುದಿಲ್ಲ. ಸಂಜೆ ಕಚೇರಿ ಸಮಯಕ್ಕೂ ಮುನ್ನವೇ ಜಾಗ ಖಾಲಿ ಮಾಡಿರುತ್ತಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಹೀಗೆ ನಾನಾ ಆರೋಪಗಳು ಸಾಮಾನ್ಯ. ಈ ನಿಟ್ಟಿನಲ್ಲಿ ಡಿಸಿ ನಡೆಸಿದ ರಿಯಾಲಿಟಿ ಚೆಕ್‌ನಿಂದ ಆಡಳಿತ ಯಂತ್ರ ಚುರುಕುಗೊಳ್ಳಲು ಸಹಕಾರಿಯಾಗಲಿದೆ. ಅಧಿಕಾರಿಗಳ ಕಾರ್ಯ ಕ್ಷಮತೆ ಹೆಚ್ಚಾಗಲಿದೆ. ಅಧಿಕಾರಿಗಳು ನಿಗದಿತ ಸಮಯಕ್ಕೆ ಕಚೇರಿಗಳಿಗೆ ಬಂದು ಜನರ ಸಮಸ್ಯೆ ಆಲಿಸಲು ಸಹಕಾರಿ ಆಗಲಿದೆ ಎಂಬ ಆಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸರ್ಕಾರ ಸರ್ಕಾರಿ ನೌಕರರಿಗೆ ಆನ್‌ಲೈನ್ ಮೂಲಕ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿದೆ. ಬೆಳಗ್ಗೆ 10 ಗಂಟೆಗೆ ಲಾಗಿನ್ ಆಗಬೇಕು, ಸಂಜೆ 5.30 ಕ್ಕೆ ಲಾಗ್ ಔಟ್ ಆಗಬೇಕು ಎಂದು ಸೂಚಿಸಲಾಗಿದೆ. ಇದರನ್ವಯ ಜಿಲ್ಲಾಡಳಿತದ ಅಧಿಕಾರಿ ವರ್ಗ ಇದನ್ನು ಅನುಸರಿಸುತ್ತಿದ್ದಾರೆಯೋ ಇಲ್ಲವೋ ಎಂಬುದನ್ನು ಖುದ್ದು ಖಚಿತಪಡಿಸಿಕೊಳ್ಳಲು ರಿಯಾಲಿಟಿ ಚೆಕ್ ನಡೆಸಲಾಯಿತು. ಆಡಳಿತ ಯಂತ್ರ ಚುರುಕುಗಾಗಿರಬೇಕು ಸಾರ್ವಜನಿಕ ಕೆಲಸಗಳು ಸುಲಭವಾಗಿ ತ್ವರಿತವಾಗಿ ಮುಗಿಯಬೇಕು ಎಂಬುದು ನಮ್ಮ ಆಶಯ.
ಡಾ.ಕೆ.ಎನ್.ಅನುರಾಧಾ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ