dc pressmeet 
ಬೆಂಗಳೂರು ಗ್ರಾಮಾಂತರ

ದೇಗುಲಗಳ ಹುಂಡಿ ಭದ್ರತೆಗೆ ಕ್ಯಾಮರಾ ಕಣ್ಗಾವಲು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ದೇವಾಲಯಗಳ ಹುಂಡಿ ಭದ್ರತೆ ಸೇರಿ ಎಣಿಕೆ ಕಾರ್ಯ, ನಗದು ವಹಿವಾಟುಗಳ ಪಾರದರ್ಶಕತೆ ಕಾಪಾಡಲು ಸಿಸಿಟಿವಿ ವೆಬ್ ಕ್ಯಾಮರಾ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು.
ದೇವನಹಳ್ಳಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಹುಂಡಿಗಳ ಭದ್ರತೆ ಕುರಿತ ಸಭೆಯಲ್ಲಿ ಮಾತನಾಡಿದರು.
ದೇವಾಲಯಗಳಲ್ಲಿ ಹುಂಡಿ ಎಣಿಕೆ ಅಥವಾ ಲೆಕ್ಕಪತ್ರ ನಿರ್ವಹಣೆ ಸಂದರ್ಭದಲ್ಲಿ ಕಳ್ಳತನ ಮತ್ತು ಚಿನ್ನಾಭರಣ, ನಗದು ಇತ್ಯಾದಿಗಳ ದುರುಪಯೋಗವಾಗುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ದೇವಾಲಯದಲ್ಲಿ ಅಳವಡಿಸುವ ಹುಂಡಿಗಳಿಗಳು ನಾಲ್ಕು ದಿಕ್ಕಿನಿಂದ ಕಾಣುವಂತೆ ಅಗತ್ಯವಾದ ಸಿಸಿ ಟಿವಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿ ಧಾರ್ಮಿಕ ದತ್ತಿ ಇಲಾಖೆ ಮೇಲ್ವಿಚಾರಣೆ ನಡೆಸುವುದು.ಜತೆಗೆ ವೆಬ್ ಕ್ಯಾಮರಾ ಭದ್ರತೆ ದೃಷ್ಟಿಯಿಂದ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಪೊಲೀಸ್ ಠಾಣೆಗಳಿಗೆ ದೇವಾಲಯಗಳ ವೆಬ್ ಕ್ಯಾಮರಾ ಸಂಪರ್ಕ ಕಲ್ಪಿಸಿ ವೀಕ್ಷಣೆ ಮಾಡುವುದು ಇದರಲ್ಲಿ ಸೇರಿದೆ ಎಂದು ಮಾಹಿತಿ ನೀಡಿದರು. ನಗದು ಕಳ್ಳತನ ತಪ್ಪಿಸಲು ಡಿಜಿಟಲ್ ಪಾವತಿಗೆ ಹೆಚ್ಚಿನ ಉತ್ತೇಜನ ನೀಡಲು ಕ್ಯೂ ಆರ್‌ಕೋಡ್ ಅಳವಡಿಸಿ ಜತೆಗೆ ಅದರ ಅಡಿಯಲ್ಲಿ ಸಂಬಂಧಪಟ್ಟ ಬ್ಯಾಂಕ್ ವಿವರಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಎಣಿಕೆಗೆ ಸಾರ್ವಜನಿಕರಿಗೆ ಅವಕಾಶವಿಲ್ಲ:
ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆಯನ್ನು ಪಡೆಯುವುದರ ಬದಲಿಗೆ ಕಡ್ಡಾಯವಾಗಿ ಗೃಹ ರಕ್ಷಕದಳ ಸಿಬ್ಬಂದಿ, ಬ್ಯಾಂಕ್‌ಸಿಬ್ಬಂದಿ, ಸರ್ಕಾರಿ ನೌಕರರ ಸೇವೆಯನ್ನು ಪಡೆಯಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ ಖಾಸಗಿ ಅಥವಾ ಸಾರ್ವಜನಿಕರ ಸೇವೆಯನ್ನು ಹುಂಡಿ ಎಣಿಕೆಗೆ ಪಡೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಹುಂಡಿ ಎಣಿಕೆಯನ್ನು ಸಂಬಂಧಪಟ್ಟ ತಹಸೀಲ್ದಾರ್ ಮೇಲ್ವಿಚಾರಣೆ ನಡೆಸುವುದು. ಹುಂಡಿ ಎಣಿಕೆ ಸಂದರ್ಭದಲ್ಲಿ ಸ್ವೀಕೃತವಾಗುವ ಚಿನ್ನ, ಬೆಳ್ಳಿ ಇತರೆ ಬೆಲೆ ಬಾಳುವ ವಸ್ತುಗಳು ಸ್ವೀಕೃತವಾದಾಗ ಅಂತಹ ವಸ್ತುಗಳನ್ನು ಎಣಿಕೆ ದಿನದಂದೇ ಕಡ್ಡಾಯವಾಗಿ ಮೌಲ್ಯಮಾಪನ ಮಾಡಿಸಿ ಅಂದೇ ಸಂಬಂಧಪಟ್ಟ ಜಿಲ್ಲಾಉಪ ಖಜಾನೆಯಲ್ಲಿ ಜಮಾ ಮಾಡಬೇಕು ಎಂದು ಡಿಸಿ ಸೂಚಿಸಿದರು.
ವಿಡಿಯೋ ಚಿತ್ರೀಕರಣ ಕಡ್ಡಾಯ:
ಎಣಿಕೆಗೆ ಹಾಜರಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಖಚಿತ ಪಡಿಸಿಕೊಳ್ಳಲು ಇ ಜ್ಞಿ ಚ್ಞ ಅಳವಡಿಸುವುದು ಮತ್ತು ಸಿಬ್ಬಂದಿ ಮತ್ತು ಅಧಿಕಾರಿಗಳು ಎಣಿಕೆಗೆ ಪ್ರವೇಶಿಸುವ ಸಂದರ್ಭದಲ್ಲಿ ಇ ಜ್ಞಿ ಚ್ಞನ್ನು ಘೋಷಿಸುವುದು. ಹುಂಡಿ ತೆರೆಯುವುದರಿಂದ ಹಿಡಿದು ಹುಂಡಿ ಎಣಿಕೆ ಮಾಡಿ ಬ್ಯಾಂಕ್‌ನವರಿಗೆ ಹಸ್ತಾಂತರಿಸುವವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸಬೇಕು ಎಂದು ಸೂಚನೆ ನೀಡಿದರು. ಕಂದಾಯ, ಪೊಲೀಸ್ ಧಾರ್ಮಿಕ ದತ್ತಿ,, ಸ್ಥಳೀಯ ಪ್ರಾಧಿಕಾರ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ದೇವಾಲಯಗಳಿಗೆ ಜಂಟಿಯಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವ್ಯವಸ್ಥೆಗಳು ಸುವ್ಯವಸ್ಥಿತ ರೀತಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ನ್ಯೂನತೆಗಳಿದ್ದಲ್ಲಿ ಕೂಡಲೇ ಸರಿಪಡಿಸಬೇಕು ಎಂದು ಡಿಸಿ ತಿಳಿಸಿದರು.
ಪ್ರವರ್ಗ ’ಎ’ ದೇವಾಲಯಗಳು
1. ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೊಡ್ಡಬಳ್ಳಾಪುರ ತಾಲೂಕು.
2. ಗಂಗಾಧರೇಶ್ವರಸ್ವಾಮಿ ಮತ್ತು ಶ್ರೀ ಹೊನ್ನಾದೇವಿ ದೇವಾಲಯ ಶಿವಗಂಗೆ ನೆಲಮಂಗಲ ತಾಲೂಕು.
3. ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯ ಬೈರಶೆಟ್ಟಿಹಳ್ಳಿ ನೆಲಮಂಗಲ ತಾಲೂಕು.
ಪ್ರವರ್ಗ ’ಬಿ’ ದೇವಾಲಯಗಳು
1. ವೀರಭದ್ರಸ್ವಾಮಿ ದೇವಾಲಯ ದೇವರಹೊಸಹಳ್ಳಿ ನೆಲಮಂಗಲ ತಾಲೂಕು.
2. ವೆಂಕಟರಮಣಸ್ವಾಮಿ ದೇವಾಲಯ ಮಹಿಮಾಪುರ ನೆಲಮಂಗಲ ತಾಲೂಕು.
3. ಕರಿತಿಮ್ಮರಾಯಸ್ವಾಮಿ ದೇವಾಲಯ ಟಿ.ಬೇಗೂರು ನೆಲಮಂಗಲ ತಾಲೂಕು.
4. ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ತೇರಿನಬೀದಿ ದೊಡ್ಡಬಳ್ಳಾಪುರ ಟೌನ್
5. ಕತ್ತಿಮಾರಮ್ಮ ದೇವಾಲಯ ಕೋಡಗುರ್ಕಿ ದೇವನಹಳ್ಳಿ ತಾಲೂಕು.