ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಜು.13 ರ ಸೋಮವಾರ ಜಿಲ್ಲಾಡಳಿತಭವನದ ವಿವಿಧ ಇಲಾಖಾ ಕಚೇರಿಗಳಿಗೆ ದಿಢೀರ್ ಭೇಟಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಅಧಿಕಾರಿ ವರ್ಗ ಸಮಯಪಾಲನೆಯಲ್ಲಿ ತೋರಿಸುತ್ತಿರುವ ನಿರ್ಲಕ್ಷ್ಯ ಬಯಲಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಹಲವು ಕಚೇರಿಗಳಲ್ಲಿ ಬೆಳಗ್ಗೆ 10 ಗಂಟೆಯ ಕಚೇರಿ ಸಮಯವಾದರೂ ಹಲವು ಸಿಬ್ಬಂದಿ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಡಿಸಿ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿದ್ದು ಸೂಕ್ತ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ವಿವರಣೆ ಸೂಕ್ತವಾಗಿಲ್ಲದಿದ್ದರೆ ಆ ದಿನದ ವೇತನ ಕಡಿತಗೊಳ್ಳಲಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ಇಲಾಖೆಯ 6 ಅಧಿಕಾರಿಗಳು ಹಾಗೂ 14 ನೌಕರರಿಗೆ ನೋಟಿಸ್ ಜಾರಿಯಾಗಿದೆ. ಇದೇ ಪುನಾವರ್ತನೆಯಾದರೆ ಅಮಾನತು ಶಿಕ್ಷೆ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನೆಯಾಗಿದೆ.
ಅಧಿಕಾರಿ ವರ್ಗಕ್ಕೆ ನೋಟಿಸ್ ಬಿಸಿ:
ಇತ್ತೀಚೆಗೆ ಸರ್ಕಾರ ಎಲ್ಲ ಸರ್ಕಾರಿ ನೌಕರರಿಗೆ ಆನ್‌ಲೈನ್ ಮೂಲಕ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ತವ್ಯ ಆ್ಯಪ್ ಬಿಡುಗಡೆಗೊಳಿಸಿದೆ. ಈ ಆ್ಯಪ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳು ಲಾಗಿನ್ ಆಗಬೇಕು, ಸಂಜೆ 5.30 ಕ್ಕೆ ಲಾಗ್ ಔಟ್ ಆಗಬೇಕು ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಖುದ್ದು ಪರಿಶೀಲನೆ ನಡೆಸಲು ಡಿಸಿ ದಿಢೀರ್ ಭೇಟಿ ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ವೇಳೆ ಹಲವು ಸಿಬ್ಬಂದಿ ಆ್ಯಪ್ ಬಳಕೆಯಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದು ಕಂಡುಬಂದಿದ್ದು, ಅಂಥ ಅಧಿಕಾರಿ ವರ್ಗಕ್ಕೂ ನೋಟಿಸ್ ಬಿಸಿ ಮುಟ್ಟಿಸಲಾಗಿದೆ.
ಜಿಲ್ಲಾಧಿಕಾರಿಯಾಗಿ ಡಾ.ಕೆ.ಎನ್.ಅನುರಾಧಾ ಅಧಿಕಾರ ವಹಿಸಿಕೊಂಡ ಬಳಿಕ ರೊಟಿನ್‌ನಂತೆ ಜಿಲ್ಲಾಡಳಿತ ಸಿಬ್ಬಂದಿಯ ಕರ್ತವ್ಯ ಪಾಲನೆಯನ್ನು ಗಮನಿಸುತ್ತಲೇ ಬಂದಿದ್ದಾರೆ. ಆಗಾಗ ಈ ರೀತಿ ದಿಢೀರ್ ಭೇಟಿ ನೀಡಿ ಇಲಾಖೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಬಾರಿ ಏಕಕಾಲಕ್ಕೆ ಹಲವು ಇಲಾಖೆಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಅಧಿಕಾರಿ ಸಿಬ್ಬಂದಿಗೆ ಛಳಿ ಬಿಡಿಸಿದ್ದಾರೆ. ಈ ರಿಯಾಲಿಟಿ ಚೆಕ್ ದೊಡ್ಡಮಟ್ಟದಲ್ಲಿ ಎೆಕ್ಟ್ ಆಗಿದ್ದು, ಜಿಲ್ಲಾಡಳಿತ ಸಿಬ್ಬಂದಿ ಅಲರ್ಟ್ ಆಗುವಂತಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಮಾಮೂಲಿ:
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆ ಈ ಹಿಂದಿನಿಂದಲೂ ಇದೆ, ಕಚೇರಿ ಸಮಯಕ್ಕೆ ಸರಿಯಾಗಿ ಬರದಿರುವುದು, ಕಾಫಿ ಬ್ರೇಕ್, ಲಂಚ್ ಬ್ರೇಕ್ ಕಾರಣವೊಡ್ಡಿ ಗಂಟೆಗಟ್ಟಲೆ ಕಚೇರಿಯತ್ತ ಸುಳಿಯದೇ ಇರುವುದು, ಸಂಜೆ ಕಚೇರಿ ಸಮಯಕ್ಕೂ ಮುನ್ನವೇ ಕುರ್ಚಿ ಖಾಲಿ ಮಾಡುವುದು ಸಾಮಾನ್ಯ ಎನ್ನುವಂತ ಪರಿಸ್ಥಿತಿ ಇರುತ್ತದೆ. ಗ್ರಾಮಾಂತರ ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತ ಭವನವೂ ಇದಕ್ಕೆ ಹೊರತಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳು ಕೇಳಿಬರುತ್ತಿರುವ ನಡುವೆಯೇ ಜಿಲ್ಲಾಧಿಕಾರಿ ನಡೆಸಿದ ರಿಯಾಲಿಟಿ ಚೆಕ್ ಸಾಕಷ್ಟು ಪರಿಣಾಮ ಬೀರಿದೆ. ಅಧಿಕಾರಿ ವರ್ಗಕ್ಕೂ ಕರ್ತವ್ಯ ಪಾಲನೆಯ ಅಲರ್ಟ್ ರವಾನೆಯಾಗಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ. ಇದೇ ರೀತಿ ನಾಲ್ಕೂ ತಾಲೂಕುಗಳಲ್ಲಿನ ತಾಲೂಕು ಕಚೇರಿಗಳಲ್ಲಿ ತಹಸೀಲ್ದಾರ್ ರಿಯಾಲಿಟಿ ಚೆಕ್ ನಡೆಸಿ ಸಿಬ್ಬಂದಿ ವರ್ಗವನ್ನು ಎಚ್ಚರಿಸದಿದ್ದರೆ ಆಡಳಿತ ಯಂತ್ರ ನಿದ್ರಾವಸ್ಥೆಯಲ್ಲೇ ಇರಲಿದೆ ಇಂತ ಪ್ರಯತ್ನಗಳು ಎಲ್ಲ ಕಡೆ ಆಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ಜಿಲ್ಲಾಡಳಿತಭವನದಲ್ಲಿನ ವಿವಿಧ ಇಲಾಖೆಗಳಲ್ಲಿ ಅಧಿಕಾರಿ ವರ್ಗ ಹೇಗೆ ಸಮಯ ಪಾಲನೆ ಮಾಡುತ್ತಾರೆ? ಕರ್ತವ್ಯ ವೈಖರಿ ಹೇಗಿದೆ ಎಂಬ ಬಗ್ಗೆ ಪ್ರತ್ಯಕ್ಷ ದರ್ಶನ ಮಾಡುವ ಸಲುವಾಗಿ ರಿಯಾಲಿಟಿಚೆಕ್ ನಡೆಸಲಾಗಿತ್ತು. ಈ ರೀತಿ ಮಾಡಿರುವುದು ಇದೇ ಮೊದಲಲ್ಲ. ಈ ರೀತಿ ಆಗಾಗ ಪರಿಶೀಲನೆ ನಡೆಸಲಾಗುತ್ತಿರುತ್ತದೆ. ಸೋಮವಾರ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ 6 ಅಧಿಕಾರಿಗಳು ಹಾಗೂ 14 ನೌಕರರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ಡಾ.ಕೆ.ಎನ್.ಅನುರಾಧಾ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ