ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಎಲ್ಲಿಯಾದರೂ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ ಪ್ರಕರಣ ಕಂಡುಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಎಚ್ಚರಿಕೆ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಕೃಷಿ ಪರಿಕರ ತಯಾರಕರ ಮತ್ತು ಮಾರಾಟಗಾರರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರಗಳ ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಬೇಕು ಎಂದು ರಸಗೊಬ್ಬರ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಾಗೂ ಮಾರಾಟಗಾರರಿಗೆ ಸೂಚಿಸಿದರು. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ರಸಗೊಬ್ಬರ ಮಾರಾಟ ಪ್ರಮಾಣವನ್ನು ಗಮನಿಸಬೇಕು, ಅಗತ್ಯವಿರುವಷ್ಟು ಮುಂಜಾಗ್ರತೆಯಾಗಿ ದಾಸ್ತಾನು ಮಾಡಿಕೊಂಡು ಬೇಡಿಕೆಗೆ ತಕ್ಕಂತೆ ಪೂರೈಸಬೇಕು. ಈ ವಿಷಯದಲ್ಲಿ ರೈತರಿಗೆ ಯಾವುದೇ ತೊಂದರೆ ಅಡೆತಡೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಿದರು. ರೈತರಿಗೆ ರಸಗೊಬ್ಬರ ಲಭ್ಯತೆಯ ಬಗ್ಗೆ ಅರಿವು ಮೂಡಿಸಲು ಮತ್ತು ರಸಗೊಬ್ಬರಗಳಿಗೆ ಪರ್ಯಾವಾಗಿ ಸಾವಯವ ಗೊಬ್ಬರಗಳನ್ನು ಹೆಚ್ಚು ಬಳಕೆ ಮಾಡುವಂತೆ ಅಧಿಕಾರಿಗಳು ಮಾರ್ಗದರ್ಶನ ಮಾಡಬೇಕು. ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ದಾಸ್ತಾನು ಮತ್ತು ಗರಿಷ್ಠ ಮಾರಾಟ ದರ ವಿವರಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು ಜತೆಗೆ ಯೂರಿಯಾ ರಸಗೊಬ್ಬರವನ್ನು ಪಿಒಎಸ್ ಯಂತ್ರದಲ್ಲಿ ಕಡ್ಡಾಯವಾಗಿ ಮಾರಾಟ ಮಾಡಲು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಬಾರದು:
ಜಿಲ್ಲೆಗೆ ಸರಬರಾಜಾಗಿರುವ ರಸಗೊಬ್ಬರಗಳನ್ನು ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಬೇಕು ಮಾರಾಟಗಾರರು ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿ ಅಧಿಕೃತ ರಸಗೊಬ್ಬರ ಮಾರಾಟ ಪರವಾನಗೆ ಇಲ್ಲದೆ ರಸಗೊಬ್ಬರ ದಾಸ್ತಾನು ಮತ್ತು ಮಾರಾಟ ಮಾಡುವುದು ಕಂಡುಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಯೂರಿಯಾವನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ಮಾರಾಟಮಾಡಲು ಪ್ರತಿ ತಾಲೂಕಿನಲ್ಲಿ ಚಿಲ್ಲರೆ ಮಾರಾಟಗಾರರಿಗೆ ಸಹಾಯಕ ಕೃಷಿ ನಿರ್ದೇಶಕರು ತರಬೇತಿಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಸೂಚಿಸಿದರು.
17482 ಮೆಟ್ರಿಕ್ ಟನ್ ದಾಸ್ತಾನು:
ಪ್ರಸಕ್ತ ಮುಂಗಾರು ಹಂಗಾಮಿಗೆ 69291 ಹೆಕ್ಟೇರ್ ಆಹಾರಧಾನ್ಯ ಮತ್ತು 257 ಹೆಕ್ಟೇರ್ ಎಣ್ಣೆಕಾಳು ಸೇರಿ 69548 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆಗೆ ಅನುಗುಣವಾಗಿ ತಿಂಗಳುವಾರು ಈ ಮುಂಗಾರು ಹಂಗಾಮಿಗೆ ಯೂರಿಯಾ-11418 ಮೆಟ್ರಿಕ್ ಟನ್, ಡಿಎಪಿ-7567 ಮೆಟ್ರಿಕ್ ಟನ್, ಎಂಒಪಿ-1354 ಮೆಟ್ರಿಕ್ ಟನ್, ಎಸ್‌ಎಸ್‌ಪಿ -1086 ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳು 14744 ಮೆಟ್ರಿಕ್ ಟನ್ ಸೇರಿ -36169 ಮೆಟ್ರಿಕ್ ಟನ್ ಬೇಡಿಕೆಯಿದೆ ಎಂಬ ಮಾಹಿತಿ ಪಡೆಯಲಾಗಿದೆ. ಪ್ರಸ್ತುತ ತಿಂಗಳಲ್ಲಿ 1732ಮೆಟ್ರಿಕ್ ಟನ್ ಡಿಎಪಿ, 1327ಮೆಟ್ರಿಕ್‌ಟನ್ ಯೂರಿಯಾ ಮತ್ತು 2303 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರಗಳ ಬೇಡಿಕೆಯಿದೆ. ಈ ಬೇಡಿಕೆ ಪೂರೈಸಲು ಪ್ರಸ್ತುತ 17482 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಇರುತ್ತದೆ ಎಂದು ಜಂಟಿ ಕೃಷಿ ನಿದೇಶಕಿ ಕಲಾವತಿ ಸಭೆಗೆ ಮಾಹಿತಿ ನೀಡಿದರು.