ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಾಟ್ಸಾಪ್ ಡಿಪಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಕೆಎ.ನ್.ಅನುರಾಧಾ ಭಾವಚಿತ್ರ ಬಳಸಿದ್ದ ಅನಾಮಿಕನೊಬ್ಬ ಇಲಾಖೆಯ ಹಲವು ಸಿಬ್ಬಂದಿಗೆ ವಾಟ್ಸಾಪ್ ಸಂದೇಶ ಕಳಿಸಿ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿರುವ ಪ್ರಕರಣ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ವಿಶ್ವನಾಥಪುರ ಠಾಣೆಗೆ ಖುದ್ದು ಜಿಲ್ಲಾಧಿಕಾರಿ ದೂರು ನೀಡಿದ್ದು, ಪೊಲೀಸರು ಖದೀಮನ ಹುಕುಕಾಟ ನಡೆಸಿದ್ದಾರೆ.
ನನ್ನ ಖಾತೆ ನಿಷ್ಕ್ರಿಯವಾಗಿದೆ, ತುರ್ತು ಹಣದ ಅವಶ್ಯಕತೆ ಇರುವುದರಿಂದ ತಕ್ಷಣ ಹಣ ಕಳಿಸಿ ನಾನು ವಾಪಸ್ ಕೊಡುತ್ತೇನೆ ಎಂದು ಬ್ಯಾಂಕ್ ಖಾತೆಯೊಂದರ ನಂಬರ್ ಕಳಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಅನುಮಾನಗೊಂಡ ಸಿಬ್ಬಂದಿ ಡಿಸಿ ಗಮನಕ್ಕೆ ತಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅನಾಮಿಕ ನೀಡಿದ್ದ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದು ತನಿಖೆ ಮುಂದುವರೆಸಿದ್ದಾರೆ.
ಇದೇ ವ್ಯಕ್ತಿ ಒಂದೆ ಮೊಬೈಲ್ ಸಂಖ್ಯೆಯಿಂದ ವಿವಿಧ ಇಲಾಖೆಯ ಸಿಬ್ಬಂದಿಗೂ ಸಂದೇಶ ಕಳುಹಿಸಿದ್ದು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಮಾಹಿತಿ ತಿಳಿದ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಯಾರೂ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಶಿವಶಂಕರ್ ಹೆಸರಿನಲ್ಲಿಯೂ ಇದೇ ಮಾದರಿಯಲ್ಲಿ ಮೊಬೈಲ್ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ತುರ್ತು ಮೀಟಿಂಗ್‌ನಲ್ಲಿದ್ದೇನೆ, ತಕ್ಷಣ ಹಣದ ಅವಶ್ಯಕತೆ ಇದೆ ಕೂಡಲೇ ಈ ಖಾತೆಗೆ ಹಣ ಕಳುಹಿಸಿ ಎಂದು ಸಂದೇಶ ರವಾನಿಸಲಾಗಿತ್ತು. ವಿಶೇಷವೆಂದರೆ ಜಿಲ್ಲಾಧಿಕಾರಿ ಡಿಪಿ ಇರುವ ಸಂಖ್ಯೆಯಿಂದ ವಿಶ್ವನಾಥಪುರ ಠಾಣೆ ಇನ್‌ಸ್ೆಕ್ಟರ್ ಸೇರಿ ದೇವನಹಳ್ಳಿಯ ಹಲವು ಪೊಲೀಸ್ ಅಧಿಕಾರಿಗಳಿಗೇ ಖತರ್ನಾಕ್ ಖದೀಮ ಸಂದೇಶ ಕಳುಹಿಸಿದ್ದ.
ಜಿಲ್ಲಾಧಿಕಾರಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟು ವಾಟ್ಸಾಪ್ ಸಂದೇಶ ಹರಿದಾಡುತ್ತಿರುವುದು ಜಿಲ್ಲಾಧಿಕಾರಿ ಆಪ್ತ ಸಹಾಯಕ ಅಭೀಷೇಕ್ ಅವರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ವಿಶ್ವನಾಥಪುರ ಠಾಣೆಯಲ್ಲಿ ಅರೋಪಿ ವಿರುದ್ಧ ದೂರು ದಾಖಲಿಸಿದ್ದರು. ಗ್ರಾಮಾಂತರ ಜಿಲ್ಲೆಯ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ವಾಟ್ಸಾಪ್ ಸಂದೇಶಗಳ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣಗಳು ಸಾಕಷ್ಟು ನಡೆದಿವೆ. ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ಹಣ ಸುಲಿಗೆಗೆ ಸಂಚು ರೂಪಿಸಿರುವ ಪ್ರಕರಣಗಳು ಠಾಣೆ ಮೆಟ್ಟಿಲೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಟ್ಸಾಪ್ ಡಿಪಿಗಳಲ್ಲಿ ಅಧಿಕಾರಿಗಳು, ಸೆಲೆಬ್ರಿಟಿಗಳು ಸೇರಿ ಇನ್ನಿತರರ ಭಾವಚಿತ್ರ ಬಳಸಿ ವಾಟ್ಸಾಪ್ ಸೇರಿ ಇನ್ನಿತರ ಜಾಲತಾಣಗಳ ಮೂಲಕ ಹಣ ಸುಲಿಗೆಗೆ ವಂಚಕರೂ ಸದಾ ಬಲೆ ಬೀಸುತ್ತಿರುತ್ತಾರೆ. ಇಂಥವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಇಂಥವರ ಬಲೆಗೆ ಬೀಳಬಾರದು ಇಂಥ ಸಂದೇಶಗಳು ಹರಿದಾಡಿದರೆ ತಕ್ಷಣ ಪೊಲೀಸರಿಗೆ ದೂರು ನೀಡಬೇಕು.
ಡಾ.ಕೆ.ಎನ್.ಅನುರಾಧಾ ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ