ದೊಡ್ಡಬಳ್ಳಾಪುರದ ತಾಲೂಕು ಕಚೇರಿ ಮುಂದೆ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಖಂಡಿಸಿ ಜಿಲ್ಲಾ ವಿಶ್ವ ಹಿಂದು ಪರಿಷದ್​ ಗೋವಿನೊಟ್ಟಿಗೆ ಪ್ರತಿಭಟನೆ ನಡೆಸಿದರು. ವಿಶ್ವ ಹಿಂದು ಪರಿಷದ್​ ಜಿಲ್ಲಾ ಕಾರ್ಯದರ್ಶಿ ರವಿ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್​ ಪವನ್​ ಸ್ವಾಮಿ, ಮುಖಂಡರಾದ ಚಂದನ್​, ನಾಗರಾಜ್​, ನರಸಿಂಹ, ದೀಪಕ್​ ರಾಹುಲ್​, ಕಾರ್ಯಕರ್ತರು ಇದ್ದರು. 
ಬೆಂಗಳೂರು ಗ್ರಾಮಾಂತರ

ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಖಂಡನೆ

ಪ್ರಮುಖ ಮುಖ್ಯಾಂಶಗಳು

  • ದೊಡ್ಡಬಳ್ಳಾಪುರದಲ್ಲಿ ವಿಶ್ವ ಹಿಂದು ಪರಿಷತ್​ ಕಾರ್ಯಕರ್ತರಿಂದ ಪ್ರತಿಭಟನೆ
  • ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ
  • ಅಕ್ರಮ ಮಾಂಸ ಮಾರಾಟ
ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಕಾಂಗ್ರೆಸ್​ ವಿರುದ್ಧ ಜಿಲ್ಲಾ ವಿಶ್ವ ಹಿಂದು ಪರಿಷದ್​ ಗೋರಕ್ಷಾ ವಿಭಾಗದ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ರವಾನಿಸಿದರು.
ಬಜರಂಗದಳ ಜಿಲ್ಲಾ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್​ ಹಿಂದು ಸಂಘಟನೆ ಹಾಗೂ ಕಾರ್ಯಕರ್ತರ ಮೇಲೆ ಸವಾರಿ ಮಾಡುತ್ತಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಗೋವುಗಳನ್ನು ಕದ್ದು ಸಾಗಣೆ ಮತ್ತು ವಧೆ ಮಾಡಿ ಅಕ್ರಮವಾಗಿ ಮಾಂಸ ಮಾರಾಟ ಮಾಡುವ ಮೂಲಕ ಹಿಂದುಗಳ ಭಾವನೆಗಳಿಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೂ ಪ್ರಬಲವಾದ ಗೋಹತ್ಯೆ ಕಾನೂನು ಜಾರಿಯಲ್ಲಿತ್ತು. ಗೋವುಗಳನ್ನು ಕದ್ದು ಸಾಗಾಟ ಮಾಡುವವರನ್ನು ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಬಲ ಕಾನೂನನ್ನು ಬಿಜೆಪಿ ಜಾರಿಗೊಳಿಸಿತ್ತು. ಆದರೆ ಕಾಂಗ್ರೆಸ್​ ಒಂದು ವರ್ಗವನ್ನು ಓಲೈಸುವ ಹಾಗೂ ಗೋ ಕಳ್ಳರಿಗೆ ಸಹಾಯ ಮಾಡುವ ಉದ್ದೇಶದಿಂದ ಕಾನೂನನ್ನು ದುರ್ಬಲಗೊಳಿಸಲು ಮುಂದಾಗಿದೆ. ಇದನ್ನು ಹಿಂದು ಸಮಾಜ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜರಂಗದಳ ಕೋಲಾರ ವಿಭಾಗ ಸಂಯೋಜಕ ನರೇಶ್​ರೆಡ್ಡಿ ಮಾತನಾಡಿ, ಬಿಜೆಪಿ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರದ್ದುಗೊಳಿಸಲು ಮುಂದಾಗಿರುವುದನ್ನು ಕೈ ಬಿಡಬೇಕು. ಹಿಂಸಾತ್ಮಕವಾಗಿ ಕಳ್ಳಸಾಗಾಟ ಮಾಡುವಾಗ ಪೊಲೀಸರು ವಶಪಡಿಸಿದ ಸಾಗಾಟ ವಾಹನಗಳನ್ನು ಸುಲಭದಲ್ಲಿ ಹಿಂತಿರುಗಿಸುವಂತೆ ಮಾಡಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ನ್ನು ಸಡಿಲುಗೊಳಿಸಿ ತಿದ್ದುಪಡಿಗೆ ಮುಂದಾಗಿದ್ದು, ತಕ್ಷಣ ಇದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಗೋವು ಕಳ್ಳ ಸಾಗಾಟ, ಅಕ್ರಮ ವಧೆ, ಮಾಂಸ ಮಾರಾಟ ಹೆಚ್ಚಾಗಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.