ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೇಂದ್ರ ಸರ್ಕಾರದ ಪುರಸ್ಕೃತ ಹೊಸ ಯೋಜನೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ ಯೋಜನೆ ಜು.1 ರಿಂದ ಜಾರಿಗೆ ಬಂದಿದ್ದು, ಜಿಲ್ಲೆಯಲ್ಲಿಯೂ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಅರ್ಹ ಗ್ರಾಮೀಣ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ 100 ದಿನಗಳ ಬದಲಾಗಿ 125 ಮಾನವ ದಿನಗಳ ಕಡ್ಡಾಯ ಉದ್ಯೋಗ ಅವಕಾಶ ಕಲ್ಪಿಸುವ ಜತೆಗೆ ಗ್ರಾಮೀಣ ಪ್ರದೇಶದ ಸಮಗ್ರ ಮತ್ತು ಸ್ಯಾಚುರೇಷನ್ ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡಲು ಜಿಲ್ಲಾ ಪಂಚಾಯಿತಿ ಮುಂದಡಿ ಇಟ್ಟಿದೆ.
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸೇರಿ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿಗೆ ಈಗಾಗಲೇ ಮಾಸ್ಟರ್ ಟ್ರೇನರ್‌ಗಳಿಂದ ತರಬೇತಿ ನೀಡಲಾಗಿದೆ ಎಂದು ಜಿಪಂ ತಿಳಿಸಿದೆ.
ದಿನಗೂಲಿ 382 ರೂಪಾಯಿಗೆ ಏರಿಕೆ:
ವಿಬಿ-ಜಿ ರಾಮ್-ಜಿ ಯೋಜನೆಯಡಿ ದಿನಗೂಲಿಯನ್ನು 370 ರೂ. ನಿಂದ 382 ರೂ. ಏರಿಕೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಆದೇಶ ಹೊರಡಿಸಿದ್ದು, ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಮುಂದುವರೆಯಲಿದೆ. ಕೂಲಿ ಹಣವನ್ನು ಗರಿಷ್ಠ 15 ದಿನಗಳ ಒಳಗಾಗಿ ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಜಮೆ ಮಾಡಬೇಕು. ವಿಳಂಬವಾದರೆ ದಂಡದ ರೂಪದಲ್ಲಿ ಪರಿಹಾರ ನೀಡಬೇಕಾಗುತ್ತದೆ.
ಉದ್ಯೋಗವಕಾಶದಿಂದ ವಂಚಿತರಾಗಲ್ಲ:
ಇಲ್ಲಿವರೆಗೂ ಮನರೇಗಾ ಯೋಜನೆಯಡಿ ನೀಡಲಾಗಿದ್ದ ಉದ್ಯೋಗ ಚೀಟಿಗಳನ್ನೆ ಮಾನ್ಯ ಮಾಡಿ, ಆಸಕ್ತರಿಗೆ ಕೆಲಸ ಒದಗಿಸಲು ಅವಕಾಶ ಕಲಿಸಲಾಗಿದೆ. ಜೂ. 30ರ ವರೆಗೆ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕಾಮಗಾರಿಗಳಲ್ಲಿ ವಿಬಿ-ಜಿ ರಾಮ್-ಜಿ ಯೋಜನೆ ನಿಯಮಕ್ಕೆ ಒಳಪಟ್ಟ ಕಾಮಗಾರಿಗಳನ್ನು ತಡೆರಹಿತವಾಗಿ ಮುಂದುವರೆಸಲು ಅವಕಾಶವಿದ್ದು, ಯೋಜನೆ ಬದಲಾಗುತ್ತಿರುವ ಕಾರಣಕ್ಕಾಗಿ ಯಾವೊಬ್ಬ ಕೂಲಿಕಾರರು ಒಂದು ದಿನವೂ ಉದ್ಯೋಗ ಅವಕಾಶದಿಂದ ವಂಚಿತರಾಗುವ ಪ್ರಮೇಯ ಎದುರಾಗುವುದಿಲ್ಲ ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ತಿಳಿಸಿದ್ದಾರೆ. ಮಂತ್ರಾಲಯದ ಗ್ರಾಮೀಣಾಭಿವೃದ್ಧಿ ಮಾರ್ಗಸೂಚಿಯಂತೆ ನೋಂದಾಯಿತ ಕೂಲಿಕಾರರಿಗೆ ಶೇ.99.89 ಇ-ಕೆವೈಸಿ ಈಗಾಗಲೇ ಕೈಗೊಳ್ಳಲಾಗಿದೆ. ವಲಸೆ ಹಾಗೂ ತಾಂತ್ರಿಕ ಕಾರಣದಿಂದ ಕೆಲವು ಕೂಲಿಕಾರರ ಇ-ಕೆವೈಸಿ ಬಾಕಿ ಇದ್ದು, ಅದಕ್ಕೂ ಕ್ರಮವಹಿಸಲಾಗುತ್ತಿದೆ. ಇದರಿಂದ ಕೂಲಿಕಾರರ ಇ-ಕೆವೈಸಿ ಕಡ್ಡಾಯವಾಗಿರುವುದರಿಂದ ಬಾಕಿ ಉಳಿದಿರುವ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ಹೊಸ ಕಾಯಿದೆಯಡಿ ನಿಯಮಾನುಸಾರ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ತರಲು ಸೂಚನೆ ನೀಡಲಾಗಿದ್ದು, ಗ್ರಾಮೀಣ ಭಾಗದ ಎಲ್ಲ ಕೂಲಿಕಾರರು ಕೆಲಸ ಅರಸಿ ದೂರದ ಪಟ್ಟಣಗಳಿಗೆ ವಲಸೆ ಹೋಗದೆ ಸ್ವಂತ ಊರಿನಲ್ಲಿಯೇ ಹೊಸ ಯೋಜನೆಯಡಿ ಕೂಲಿಕೆಲಸ ಮತ್ತು ಜೀವನೋಪಾಯ ಸೌಲಭ್ಯ ಪಡೆದುಕೊಳ್ಳಲು ನೆರವಾಗಲಿದೆ. ವಿಜಿಪಿಪಿ ಚಟುವಟಿಕೆಗಳ ಗ್ರಾಮ ಪಂಚಾಯತಿ ಮಟ್ಟದ ಯೋಜನೆ ಸುಗಮಗೊಳಿಸಲು ಉದ್ದೇಶಿಸಲಾದ ಜಿಯೋಸ್ಪೇಷಿಯಲ್ ಯೋಜನಾ ಪೋರ್ಟಲ್ ಆಗಿದೆ. ಮುಕ್ತ ಮೂಲ ಜಿಐಎಸ್ ಪರಿಕರಗಳನ್ನು ಬಳಸಿಕೊಂಡು ಯೋಜನೆಗೆ ಸಮಗ್ರ ವಿಧಾನವನ್ನು ಸಕ್ರಿಯಗೊಳಿಸಲು ಪೋರ್ಟಲ್ ವ್ಯಾಪಕ ಶ್ರೇಣಿಯ ಪ್ರಾದೇಶಿಕ ಮಾಹಿತಿ ವಿಷಯಗಳನ್ನು ಸಂಯೋಜಿಸುತ್ತದೆ. ವಿಜಿಪಿಪಿ ಅಡಿಯಲ್ಲಿ ರಚಿಸಲಾದ ಜಿಯೋ-ಟ್ಯಾಗಿಂಗ್ ಸ್ವತ್ತುಗಳ ಪ್ಯಾನ್ ಇಂಡಿಯನ್ ಉಪಕ್ರಮದ ನಂತರ, ಮುಂಬರುವ ಚಟುವಟಿಕೆಗಳು ಮತ್ತು ಅವುಗಳ ಸ್ಥಳಗಳನ್ನು ಗುರುತಿಸಲು ಜಿಐಎಸ್‌ನ ಬಲವನ್ನು ಬಳಸಿಕೊಳ್ಳುವುದು ನೈಸರ್ಗಿಕ ಪರಿಣಾಮವಾಗಿದೆ.
125 ದಿನಗಳ ಉದ್ಯೋಗಾವಕಾಶದೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕೂಲಿಕಾರರು ಕಡ್ಡಾಯ ಉದ್ಯೋಗವಕಾಶ ದೊರೆಯಲಿದೆ, ಯಾರೂ ಉದ್ಯೋಗವಕಾಶದಿಂದ ವಂಚಿತರಾಗುವುದಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ಸಕಲ ಸಿದ್ದತೆ ಮಾಡಿಕೊಂಡಿದೆ. ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಉದ್ದೇಶದೊಂದಿಗೆ ಕಾರ್ಯೋನ್ಮುಖವಾಗಲಿದ್ದೇವೆ.