college campus is full of thugs 
ಬೆಂಗಳೂರು ಗ್ರಾಮಾಂತರ

ಪುಂಡರ ಅಡ್ಡೆಯಾದ ಕಾಲೇಜು ಆವರಣ!

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಹೊಸಕೋಟೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ ರಾತ್ರಿ ವೇಳೆ ಪುಂಡರ ಅಡ್ಡೆಯಾಗಿ ಬಳಕೆಯಾಗುತ್ತಿದೆ. ಬೀಡಿ-ಸಿಗರೇಟ್, ಮದ್ಯರಾಧನೆಯ ತಾಣವಾಗಿ ರೂಪುಗೊಂಡಿದೆ.
ಕಾಲೇಜು ತಡೆಗೋಡೆ ಬಳಿ ಬೀಳುವ ಮದ್ಯದ ಬಾಟಲಿಗಳು, ಬೀಡಿ ಸಿಗರೇಟಿನ ತುಂಡುಗಳು ಇಲ್ಲಿನ ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿ ನೀಡುತ್ತಿವೆ.
ಬಾಲಕರೇ ಹೆಚ್ಚು:
ಡಿಗ್ರಿ ಕಾಲೇಜು ಹಾಗೂ ಪಿಯು ಕಾಲೇಜಿನ ಹಿಂಭಾಗದ ಮೈದಾನದಲ್ಲಿ ನಡೆಯುತ್ತಿರುವ ಮದ್ಯ ಸೇವನೆ, ಬೀಡಿ-ಸಿಗರೇಟ್‌ನಂತ ವ್ಯಸನಗಳಿಗೆ ಬಾಲಕರೇ ಹೆಚ್ಚು ದಾಸರಾಗುತ್ತಿದ್ದಾರೆ. ಹೊಸಕೋಟೆ ನಗರದಲ್ಲಿ ಬಾಲಕರಿಗೆ ಸುಲಭವಾಗಿ ಮದ್ಯ ದೊರೆಯುತ್ತಿದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮದ್ಯ, ತಂಬಾಕು ಮಾರಾಟ ನಿಷೇಧವಿದ್ದರೂ ಹೊಸಕೋಟೆ ನಗರದಲ್ಲಿ ಇವೆಲ್ಲ ನಿಯಮಗಳಿಗೆ ಎಳ್ಳುನೀರು ಬಿಡಲಾಗಿದೆ. ರಾಜಾರೋಷವಾಗಿ ಬಾಲಕರು ಮದ್ಯದಂಗಡಿಗಳಿಂದ ಮದ್ಯ ಖರೀದಿಸುವ ದೃಶ್ಯ ಕಂಡುಬರುತ್ತಿದೆ.
ಪಾರ್ಟಿಗಳ ಹೆಸರಲ್ಲಿ ಮೋಜು:
ಸ್ಥಳೀಯ ಪುಂಡರು ಕಾಲೇಜು ಆವರಣವನ್ನು ಹುಟ್ಟುಹಬ್ಬ ಆಚರಣೆ ಮತ್ತಿತರ ಸಮಾರಂಭಗಳಿಗೆ ರಾತ್ರಿ ವೇಳೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೊರಗಡೆಯಿಂದ ಮದ್ಯ, ತಂಬಾಕು ಉತ್ಪನ್ನಗಳನ್ನು ಖರೀದಿಸಿ ತರುತ್ತಾರೆ. ಬೀದಿ ಬದಿಗಳಲ್ಲಿ ತಿಂಡಿಪೊಟ್ಟಗಳನ್ನು ಕಟ್ಟಿಸಿಕೊಂಡು ಕಾಲೇಜು ಆವರಣದಲ್ಲಿ ಬೀಡು ಬಿಡುತ್ತಾರೆ. ಪುಂಡರೊಂದಿಗೆ ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿದ್ದಾರೆ ಎಂಬ ಆತಂಕ ಎದುರಾಗಿದೆ. ತಡರಾತ್ರಿವರೆಗೆ ಪಾರ್ಟಿ ಮಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಹಿಂದೆ ಇದೇ ಸ್ಥಳದಲ್ಲಿ ಸಿರಿಂಜುಗಳು ಪತ್ತೆಯಾಗಿದ್ದವು, ಗಾಂಜಾ ಮತ್ತಿತರ ಡ್ರಗ್ಸ್ ಪಾರ್ಟಿಗಳೂ ನಡೆಯುತ್ತಿವೆ ಎಂಬ ಅನುಮಾನ ಮೂಡಿಸಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಪೊಲೀಸರ ಸುಳಿವಿಲ್ಲ:
ಹೊಸಕೋಟೆ ನಗರದಲ್ಲಿ ಪೊಲೀಸ್ ಬೀಟ್ ಕಡಿಮೆಯಾಗಿದೆ, ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಪುಂಡರ ಹಾವಳಿ ಮಿತಿಮೀರಿದೆ, ಕಾಲೇಜು ಆವರಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಗಸ್ತು ತಿರುಗಿದರೆ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಲಿದೆ, ಡಿಗ್ರಿ ಕಾಲೇಜಿನ ಮೈದಾನ ಹಾಗೂ ಪಿಯು ಕಾಲೇಜಿನ ಹಿಂಭಾಗದ ಮೈದಾನವನ್ನು ಎಜುಕೇಷನ್ ರೆನ್ ಎಂದು ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂಬುದು ಸ್ಥಳೀಯರ ಮನವಿಯಾಗಿದೆ.
ಈ ಸ್ಥಳವನ್ನು ಎಜುಕೇಷನ್ ಜೋನ್ ಎಂದು ೋಷಿಸಿ ನಿಯಮಗಳನ್ನು ರೂಪಿಸಬೇಕು, ಪೊಲೀಸ್ ಗಸ್ತು ಹೆಚ್ಚಿಸಬೇಕು. ನಗರದಲ್ಲಿ ಸಣ್ಣ ಹುಡುಗರಿಗೆ ಸುಲಭವಾಗಿ ಮದ್ಯ, ತಂಬಾಕು ದೊರೆಯುತ್ತಿದೆ, ಇವುಗಳಿಗೆ ಕಡಿವಾಣ ಬೀಳಬೇಕು. ಶಿಕ್ಷಣ ಇಲಾಖೆ, ಪೊಲೀಸರ ಸಹಕಾರದೊಂದಿಗೆ ಇಂಥ ಕೃತ್ಯಗಳಿಗೆ ಬ್ರೇಕ್ ಹಾಕುವ ಪ್ರಯತ್ನ ನಡೆಯಬೇಕು.
ಸುರೇಶ್, ಕಾಲೇಜು ಸಿಡಿಪಿ ಹೊಸಕೋಟೆ
ಹೊಸಕೋಟೆ ನಗರದಲ್ಲಿ ಸಣ್ಣ ವಯಸ್ಸಿನ ಬಾಲಕರು ಮದ್ಯ ಹಾಗೂ ತಂಬಾಕು ಸೇವನೆಯ ದಾಸರಾಗುತ್ತಿದ್ದಾರೆ. ಕಾಲೇಜು ಮೈದಾನದಲ್ಲಿ ತಡ ರಾತ್ರಿ ವೇಳೆ ಹುಟ್ಟು ಹಬ್ಬದ ಆಚರಣೆಗಳು ಮತ್ತಿತರ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಡ ರಾತ್ರಿ ಕುಡಿದು ಬಾಟಲಿಗಳನ್ನು ಕಾಲೇಜಿನ ಗೇಟ್ ಬಳಿ ಎಸೆದು ಹೋಗುತ್ತಾರೆ. ಸಂಬಂಧ ಪಟ್ಟ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಬಳಿ ಈ ರೀತಿ ಚಟುವಟಿಕೆ ನಡೆಯದ ಹಾಗೆ ಕ್ರಮ ಕೈಗೊಳ್ಳಬೇಕು.
ಸತೀಶ್‌ಕುಮಾರ್, ಹೊಸಕೋಟೆ ನಿವಾಸಿ