Children's Special City Council
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಕ್ಕಳ ಹಕ್ಕುಗಳಿಗೆ ಚ್ಯುತಿಯಾದಾಗ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆ ಇತ್ಯರ್ಥ್ಯಗೊಳಿಸಲು ಮುಂದಾಗಬೇಕು ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ್ ಕೋಸಂಬೆ ಹೇಳಿದರು.
ದೊಡ್ಡಬಳ್ಳಾಪುರ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಸಹಯೋಗದಡಿ ದೊಡ್ಡಬಳ್ಳಾಪುರ ನಗರಸಭೆ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ವಿಶೇಷ ನಗರಸಭೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಲು ಪೂರಕ ವಾತಾವರಣ ಸೃಷ್ಠಿಯಾಗಬೇಕು. ಸಮಾಜದಲ್ಲಿ ಪ್ರತಿ ಮಗು ಘನತೆಯಿಂದ ಜೀವಿಸುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ರಕ್ಷಣೆ ಹಕ್ಕು ಮತ್ತು ಭಾಗವಹಿಸುವಿಕೆ ಹಕ್ಕುಗಳನ್ನು ಹೊಂದಿರುತ್ತವೆ ಎಂದು ತಿಳಿಸಿದರು. ಮಕ್ಕಳ ಹಕ್ಕುಗಳ ಸಮಸ್ಯೆ ಆಲಿಸಲು ಈ ಮೊದಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರ ಗ್ರಾಮಸಭೆ ಮಾಡಲಾಗುತ್ತಿತ್ತು. ನಗರ ಮಟ್ಟದಲ್ಲಿಯೂ ಮಕ್ಕಳು ಸಮಸ್ಯೆಗಳ ಆಗರದಲ್ಲಿ ಜೀವಿಸುತ್ತಾ ಇರುವುದರಿಂದ ನಗರ ಪ್ರದೇಶಗಳಲ್ಲಿ ಮಕ್ಕಳ ವಿಶೇಷ ನಗರಸಭೆ ವಿನೂತನ ಕಾರ್ಯವಾಗಿದೆ. ಸರ್ಕಾರಕ್ಕೆ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಮಕ್ಕಳ ವಿಶೇಷ ನಗರಸಭೆ ಆಯೋಜನೆಯ ಕುರಿತು ಸುತ್ತೋಲೆ ಹೊರಡಿಸುವಂತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಕ್ಕಳು ಶಾಲೆಗಳಲ್ಲಿನ ಶೌಚಗೃಹ ಸ್ವಚ್ಛತೆ, ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ಕೊರತೆ, ವಿದ್ಯುತ್, ನೀರು ಸರಬರಾಜು ಸೇರಿ ಕೌಟುಂಬಿಕ ಸಮಸ್ಯೆಗಳನ್ನು ಆಯೋಗದ ಮುಂದೆ ತೋಡಿಕೊಂಡಿದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ, ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ನೀಡಿ, ಒಂದು ವಾರದೊಳಗೆ ಅನುಪಾಲನ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೋಸುಂಬೆ ತಿಳಿಸಿದರು.
ಅರಳು ಮಲ್ಲಿಗೆ ಬಾಗಿಲು, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಕಸ ಸಂಗ್ರಹಣೆಯಾಗುತ್ತಿದ್ದು, ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ ಹಾಗೂ ಶಾಲೆ ಪಕ್ಕದಲ್ಲೇ ಚರಂಡಿ ಇದ್ದು, ಕಲುಚಿತ ನೀರು ಶಾಲಾವರಣಕ್ಕೆ ನುಗ್ಗಿ ದುರ್ನಾತ ಬರುತ್ತಿದ್ದು, ತುಂಬಾ ಸಮಸ್ಯೆ ಎದುರಾಗುತ್ತದೆ ಎಂದು ದೂರಿದರು. ಮಕ್ಕಳ ಪ್ರಶ್ನೆ ಪ್ರತ್ಯುತ್ತರ ನೀಡಿದ ಆಯೋಗದ ಅಧ್ಯಕ್ಷರು ನಗರಸಭೆಯ ಪೌರಾಯುಕ್ತರಿಗೆ ತುರ್ತಾಗಿ ಬಿಇಒ ಮತ್ತು ಪಟ್ಟಣದ ಶಾಲೆಯ ಮುಖ್ಯಶಿಕ್ಷಕರೊಂದಿಗೆ ಸಭೆ ಏರ್ಪಡಿಸಿ, ಕಸ ವಿಲೇವಾರಿ, ಶಾಲೆಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಇತರೆ ತೊಂದರೆಗಳ ಕುರಿತು ಚರ್ಚಿಸಿ, ಸಭೆಯ ಅನುಪಾಲನ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ದೊಡ್ಡಬಳ್ಳಾಪುರದ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಶೌಚಗೃಹವಿದ್ದರೂ ಇಲ್ಲದಂತಾಗಿದೆ. ಶುಚಿಯಾದ ಆಹಾರ ಪೂರೈಕೆಯಾಗುತ್ತಿಲ್ಲವೆಂದು ಎಂದು ವಿದ್ಯಾರ್ಥಿಗಳು ದೂರಿದರು. ಇದಕ್ಕೆ ಪ್ರತಿಕ್ರಿಯಿಸ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಸಮಾಲೋಚಿಸಿ, ನಿಮ್ಮ ಶಿಕ್ಷಣ ಇಲಾಖೆಗೆ ಒಳಪಡುವ ಶಾಲೆಗಳಲ್ಲಿನ ಸಮಸ್ಯೆಗಳನ್ನು ಅವಲೋಕಿಸಿ, ಸರ್ಕಾರಿ ಸೌಲಭ್ಯ, ಕೊಠಡಿ, ಶೌಚಗೃಹ, ಶಿಕ್ಷಕರ ಕೊರತೆ, ಶುಚಿಯಾದ ಆಹಾರ ಪೂರೈಕೆ ಸೇರಿ ವಿವಿಧ ಸಮಸ್ಯೆಗಳನ್ನು ಪಟ್ಟಿಮಾಡಿ, ಹಂತ ಹಂತವಾಗಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕ್ರಮವಹಿಸಿ ಎಂದು ನಿರ್ದೇಶನ ನೀಡಿದರು.
ಶಾಲೆ ಮಗು ತಮ್ಮ ಶಾಲೆ ಇಬ್ಬರು ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಬಾಲ್ಯ ವಿವಾಹ ಮಾಡಿದ್ದ ಮಾಹಿತಿ ಪಡೆದ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿ, ಬಾಲ್ಯ ವಿವಾಹ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸದ ಪ್ರತಿಯೊಬ್ಬರೂ ಅಪರಾಧಿಗಳಾಗಿರುತ್ತಾರೆ. ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳಬೇಕು ಎಂದು ಸೂಚಿಸಿದರು. ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಕೋತಿಗಳ ಹಾವಳಿಗೆ ಕಡಿವಾಣ ಹಾಕಿ ಮತ್ತು ವಿದ್ಯಾರ್ಥಿನಿಯರಿಗೆ ವಿತರಿಸುವ ಸ್ಯಾನಿಟರ್ ಪ್ಯಾಡ್ ಸಕಾಲಕ್ಕೆ ಶುಭ್ರತೆಯಿಂದ ನೀಡಿ ಎಂದ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶಿಸಿದರು.