ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ
ಮಕ್ಕಳು ಈ ದೇಶದ ಭವಿಷ್ಯ ಜತೆಗೆ ಅತ್ಯಮೂಲ್ಯ ಆಸ್ತಿಯಾಗಿದ್ದಾರೆ ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಜತೆಗೆ ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿಯಲ್ಲಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು. ಭವ್ಯ ಭಾರತ ನಿರ್ಮಾಣ ಮಕ್ಕಳಿಂದ ಸಾಧ್ಯ, ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಮಕ್ಕಳು ಈ ದೇಶವನ್ನು ಮುಂದೆ ನಡೆಸುತ್ತಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರ ಭವಿಷ್ಯ ರೂಪಿಸುವುದು ನಮ್ಮ ಕೈಯಲ್ಲಿದೆ ಎಂದರು.
ನೆಹರು ಜನ್ಮದಿನದಂದು ದಿನಾಚರಣೆ:
ಈ ದಿನ ಬಹಳ ಪವಿತ್ರ ದಿನ ರಾಷ್ಟ್ರಕ್ಕೆ ಸ್ವತಂತ್ರ ತರಲು ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಹಲವು ಮಹನೀಯರು ಹೋರಾಟ ನಡೆಸಿದ್ದಾರೆ. ಅತಿ ಹೆಚ್ಚು ಜೈಲುವಾಸ ಅನುಭವಿಸಿದ್ದರಲ್ಲಿ ಪಂಡಿತ್ ಜವಾಹರ್‌ಲಾಲ್ ನೆಹರು ಅವರು ಒಬ್ಬರು. ನಿರಂತರ ಹೋರಾಟದ ಫಲವಾಗಿ ಗಾಂಧೀಜಿ ಅವರ ನೇತೃತ್ವದಲ್ಲಿ ನಮಗೆಲ್ಲ ಸ್ವತಂತ್ರ ಸಿಕ್ಕಿತು. ಸ್ವಾತಂತ್ರ್ಯ ನಂತರ ನೆಹರು ಮೊದಲ ಪ್ರಧಾನ ಮಂತ್ರಿ ಆಗುತ್ತಾರೆ ಇವರು ಪಂಚ ವಾರ್ಷಿಕ ಯೋಜನೆ ಜಾರಿಗೆ ತಂದ ನಂತರ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡಿ ಜಗತ್ತಿನ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಯಶ ಕಾಣುತ್ತಾರೆ ಹಾಗಾಗಿ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆ ಆಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮಕ್ಕಳ ಆರೋಗ್ಯ ಬಹಳ ಮುಖ್ಯ, ಬಾಲ್ಯದಲ್ಲಿಯೇ ಮಕ್ಕಳ ಆರೋಗ್ಯ ಸರಿಪಡಿಸಿದರೆ ಮಕ್ಕಳು ಮುಂದೆ ಕಾಯಿಲೆ ಬೀಳುವುದು ಕಡಿಮೆ ಆಗುತ್ತದೆ. ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣಾ ಶಿಬಿರ ಆಯೋಜಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕ ಆಹಾರ, ಸಮತೋಲನ ಆಹಾರ ಅವಶ್ಯಕ ಎಂದು ಸಚಿವರು ಹೇಳಿದರು.
ಮಕ್ಕಳಿಗೆ ದೇಶವನ್ನು ರೂಪಿಸುವ ಶಕ್ತಿ ಇರುತ್ತದೆ. ಜಿಲ್ಲೆಯ ಮಕ್ಕಳು ಜಿಲ್ಲ ಮಟ್ಟದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಾಲ ಭವನ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದು ಸಂತಸದ ವಿಷಯವಾಗಿದೆ ಎಂದು ಸಚಿವರು ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಿ ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು. ಮಕ್ಕಳ ಭವಿಷ್ಯಕ್ಕೆ ಶಿಕ್ಷಕರೆ ಮೂಲ. ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರಲು ಒತ್ತು ನೀಡಿ. ಪಾಲಕರೂ ಮಕ್ಕಳ ಮೇಲೆ ಗಮನಹರಿಸಿ ಮಾರ್ಗದರ್ಶನದ ಜತೆಗೆ ಮಕ್ಕಳೊಟ್ಟಿಗೆ ಸಮಯ ಕಳೆಯುವುದನ್ನು ಮರೆಯದಿರಿ ಎಂದು ಕಿವಿ ಮಾತು ಹೇಳಿದರು.
ಓದುವ, ಆಡುವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಕೊಡುವುದು ಬಹಳ ಅಪಾಯಕಾರಿ, ಇತ್ತಿಚಿನ ದಿನಗಳಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಡುವುದು ಹೆಚ್ಚಾಗಿದೆ. ಮೊಬೈಲ್ ಬಳಕೆಯಿಂದ ಮಕ್ಕಳ ಜ್ಞಾಪಕ ಶಕ್ತಿ ಕುಂಠಿತವಾಗುತ್ತದೆ, ಕಣ್ಣಿಗೂ ಅಪಾಯಕಾರಿ. ಇದರ ಬಗ್ಗೆ ಪಾಲಕರು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ ಹೇಳಿದರು.