ceo visit 
ಬೆಂಗಳೂರು ಗ್ರಾಮಾಂತರ

ವಿಬಿ ಜಿ ರಾಮ್​ ಜಿಯಲ್ಲಿ 318 ಉದ್ಯೋಗ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರದ ಮಹತ್ವಾಕಾಂ ಯೋಜನೆಗಳಲ್ಲೊಂದಾದ ವಿಬಿ ಜಿ ರಾಮ್​ ಜಿ ಯೋಜನೆಯಡಿ ಸುಮಾರು 318 ವಿವಿಧ ರೀತಿ ಉದ್ಯೋಗಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ ಇದನ್ನು ಸದ್ವಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ.ವಾಸಂತಿ ಅಮರ್​ ತಿಳಿಸಿದರು.
ನೆಲಮಂಗಲ ತಾಲೂಕು ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗೇರೆ ಗ್ರಾಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳಿಯರೊಂದಿಗೆ ವಿಚಾರ ವಿನಿಯಮ ನಡೆಸಿ ಮಾತನಾಡಿದರು. ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಗ್ರಾಮದಲ್ಲಿ ವಿಬಿ ಜಿ ರಾಮ್​ ಜಿ ಯೋಜನೆಯಡಿ ಕುರಿ&ಮೇಕೆ ಹಾಗೂ ಹಸು ಶೆಡ್​ಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ ಈ ಬಗ್ಗೆ ಗ್ರಾಮೀಣ ಜನರು ಮಾಹಿತಿ ಪಡೆಯಬೇಕು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸೌಲಬ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಬಿ ಜಿ ರಾಮ್​ ಜಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಕೆಲಸ ಮಾಡುವವರಿಗೆ ದಿನಕ್ಕೆ 382 ರೂಪಾಯಿ ಕೂಲಿ ದೊರೆಯುತ್ತದೆ ಇದನ್ನು ಗ್ರಾಮೀಣ ಕೂಲಿಕಾರ್ಮಿಕರು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ಬೇಡಿಕೆಗೆ ಅನುಗುಣವಾಗಿ ಕಾಮಗಾರಿ:
ಜಿಲ್ಲೆಯ ನಾಲ್ಕೂ ತಾಲೂಕುಗಳ ವ್ಯಾಪ್ತಿಯಲ್ಲಿನ 101 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಕಾಮಗಾರಿಗಳನ್ನು ಪೂರ್ವಭಾವಿಯಾಗಿ ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಿಇಒ, ಉದ್ಯೋಗದ ನಿರಂತರತೆ ಕಾಪಾಡುವಂತೆ ಆದೇಶಿಸಿದರು.
ಹಿರಿಯ ನಾಗರೀಕರು, ಮಹಿಳೆಯರು ಹಾಗೂ ಇನ್ನಿತರ ಕಾರ್ಮಿಕರ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಹಂಚಿಕೆ ಮಾಡಬೇಕು. 60 ವರ್ಷ ಮೇಲ್ಪಟ್ಟ ಹಿರಿಯ ಕಾರ್ಮಿಕರಿಗೆ ನಿಯಮಾನುಸಾರ ಲಭ್ಯವಿರುವ ಶೇ.50 ಕೆಲಸದ ವಿನಾಯಿತಿ ಕುರಿತು ಅರಿವು ಮೂಡಿಸುವಂತೆ ನಿರ್ದೇಶಿಸಿದರು. ಇದೇ ವೇಳೆ ಸ್ಥಳಿಯ ಕಾರ್ಮಿಕರ ಜತೆ ಚರ್ಚೆ ನಡೆಸಿ ಕೂಲಿ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಪಾವತಿಯಾಗುವಂತೆ ಹಾಜರಾತಿ, ದಾಖಲೆ ನಿರ್ವಹಣೆ ಹಾಗೂ ವೇತನ ಪಾವತಿ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
3 ವಾರದೊಳಗೆ ಪೂರ್ಣಗೊಳಿಸಿ:
ಬಳಗೇರೆ ಗ್ರಾಮದಲ್ಲಿ ಪ್ರಸ್ತುತ ನಡೆಯುತ್ತಿರುವ ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಶ್ರೀವಾಗಿ ಪೂರ್ಣಗೊಳಿಸುವಂತೆ ಸಿಇಒ ಸೂಚಿಸಿದರು. ಗರಿಷ್ಟ ಮೂರು ವಾರಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಅನಗತ್ಯವಾಗಿ ವಿಳಂಭ ಮಾಡಬಾರದು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು. ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು. ಕಾಮಗಾರಿ ಪೂರ್ಣಗೊಂಡ ತಕ್ಷಣ ಎಂಬಿ ದಾಖಲಾತಿ ಹಾಗೂ ಬಾಕಿ ಹಣ ಬಿಡುಗಡೆ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಜಲಸಂರಕ್ಷಣೆ, ಕೆರೆ&ಕಾಲುವೆಗಳ ಪುನಶ್ಚೇತನ ಹಾಗೂ ಕೃಷಿ ಭೂಮಿಗೆ ನೀರು ಹರಿಸುವ ವ್ಯವಸ್ಥೆಯಂತಹ ದೀರ್ಘಕಾಲಿಕ ಸಾರ್ವಜನಿಕ ಪ್ರಯೋಜನ ನೀಡುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಗುಣಮಟ್ಟ ಕಾಯ್ದುಕೊಳ್ಳಬೇಕು:
ಕಾಮಗಾರಿಗಳ ಆರಂಭದಿಂದ ಪೂರ್ಣಗೊಳ್ಳುವವರೆಗೆ ನಿರಂತರ ಮೇಲ್ವಿಚಾರಣೆ ನಡೆಸಬೇಕು, ಗುಣಮಟ್ಟ ಹಾಗೂ ಸಮಯಪಾಲನೆ ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಾ.ವಾಸಂತಿ ಅಮರ್​ ಸೂಚಿಸಿದರು. ಯಾವುದೇ ಕಾಮಗಾರಿಗಳಲ್ಲಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಅಂತ ಸನ್ನಿವೇಶ ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದರ ಜತೆಗೆ ಜೆಜೆಎಂ ಕಾಮಗಾರಿಗಳ ಅನುಷ್ಠ್ಠಾನ ಹಾಗೂ ಕುಡಿಯುವ ನೀರು ಸಮರ್ಪಕ ನಿರ್ವಹಣೆ ಪ್ರಕ್ರಿಯೆನ್ನು ಪರಿಶೀಲಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕೈಗೊಂಡಿರುವ ಫಿಲ್ಟರ್​ ನಿಮಾರ್ಣ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂ ಮಾಹಿತಿ ಪಡೆದರು.