ceo visit 
ಬೆಂಗಳೂರು ಗ್ರಾಮಾಂತರ

ಕೆರೆಗಳಿಗೆ ಕೈಗಾರಿಕಾ ನೀರು ಬಿಡಬಾರದು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ಪ್ರಮುಖ ನೀರಿನ ಸೆಲೆಗಳಾದ ಕೆರೆಗಳ ರಕ್ಷಣೆ ಎಲ್ಲ ಜವಾಬ್ದಾರಿಯಾಗಿದೆ, ಯಾವುದೇ ಕಾರಣಕ್ಕೂ ಕೈಗಾರಿಕೆಗಳ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಕೆರೆಗಳಿಗೆ ಬಿಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ವಾಸಂತಿ ಅಮರ್ ತಾಕೀತು ಮಾಡಿದರು. ದೊದ್ದಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಹಾಗೂ ಕೊಡಿಗೇಹಳ್ಳಿ, ಕಾಡನೂರು ಗ್ರಾಮ ಪಂಚಾಯತಿಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿ ಮಾತನಾಡಿದರು. ಜಿಲ್ಲೆಯಲ್ಲಿನ ಕೆಲವು ಕೆರೆಗಳಿಗೆ ಹಲವು ಕೈಗಾರಿಕೆಗಳು ಸಂಸ್ಕರಣೆ ಮಾಡದೆ ರಾಸಾಯನಿಕಯುಕ್ತ ನೀರನ್ನು ನೇರವಾಗಿ ಹರಿಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಖುದ್ಧು ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು. ಒಂದು ವೇಳೆ ಇಂಥ ಸಂದರ್ಭ ಕಂಡುಬಂದರೆ ತಕ್ಷಣ ಕೈಗಾರಿಕೆಗಳಿಗೆ ನೋಟಿಸ್ ನೀಡಿ ರಾಸಾಯನಿಕ ನೀರು ಹರಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಲೋಪವಾದರೆ ಶಿಸ್ತು ಕ್ರಮ:
ಚಿಕ್ಕತುಮಕೂರು ಗ್ರಾಮದ ಕೆರೆಯಲ್ಲಿ ಕೈಗಾರಿಕೆಯ ತ್ಯಾಜ್ಯ ನೀರು ಹರಿಬಿಡಲಾಗುತ್ತಿದೆ ಎಂಬ ನಿಟ್ಟಿನಲ್ಲಿ ಪರಿಶೀಲನೆ ನಡೆಸಬೇಕು ಎಸ್‌ಟಿಪಿ ್ಲಾಂಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕಾಲಕಾಲಕ್ಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಗ್ರಾಮೀಣ ಜನರಿಗೆ ಶುದ್ಧ ಕುಡಿವ ನೀರು ಪೂರೈಸುವುದು ಅಧಿಕಾರಿಗಳ ಅದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಲೋಪ ಕಂಡುಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಇಒ ಎಚ್ಚರಿಕೆ ನೀಡಿದರು.
ಸಾರ್ವಜನಿಕರೊಂದಿಗೆ ಚರ್ಚೆ:
ಕೊಡಿಗೇಹಳ್ಳಿ ಗ್ರಾಮದ ಕುರುಬರಹಳ್ಳಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯಡಿ ಹೊಸ ಕೊಳವೆಬಾವಿಗಳನ್ನು ಕೊರೆದಿರುವ ಬಗ್ಗೆ ಸಿಇಒ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಶುದ್ಧ ಕುಡಿವ ನೀರು ಪೂರೈಕೆಯಾಗುತ್ತಿದೆಯೇ ಇಲ್ಲವೆ ಎಂಬುದರ ಬಗ್ಗೆ ಸ್ಥಳೀಯರನ್ನು ಮಾತನಾಡಿಸಿ ಮಾಹಿತಿ ಪಡೆದರು.
ವಿದ್ಯಾರ್ಥಿಗಳ ಜತೆ ಸಂವಾದ:
ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಾ..ಬಿ.ಆರ್.ಅಂಬೇಡ್ಕರ್ ಮೆರಿಟ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಡಾ.ವಾಸಂತಿ ಅಮರ್ ವಸತಿ ನಿಲಯದ ವಿದ್ಯಾರ್ಥಿಗಳ ಜತೆ ಸ್ವಚ್ಛತೆ, ಶಿಕ್ಷಣ, ಊಟ ಉಪಹಾರದ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದರು. ವಸತಿನಿಲಯದಲ್ಲಿ ಮೂಲಸೌಕರ್ಯಗಳು ಸಮಪರ್ಕವಾಗಿರಬೇಕು. ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಭದ್ರತಾ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದು ವಸತಿನಿಲಯದ ಸಿಬ್ಬಂದಿಗೆ ಸೂಚನೆ ನೀಡಿದರು.
ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಿಇಒ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊದ್ದಬಳ್ಳಾಪುರ ತಾಲೂಕು ರಾಜಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದಾನಾಯಕಪಾಳ್ಯ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ ಸಾರ್ವಜನಿಕರ ಕುಡಿಯುವ ನೀರು, ಜಲ ಜೀವನ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯ ವಾತಾವರಣ ಪರಿಶೀಲನೆ ನಡೆಸಿದರು ಅಲ್ಲದೆ ಮಕ್ಕಳ ಜತೆ ಬಿಸಿಯೂಟ ಸವಿದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ ಬಗ್ಗೆ ಸಲಹೆಗಳನ್ನು ನೀಡಿದರು. ಶಿಕ್ಷಣದಿಂದ ಎಲ್ಲವನ್ನೂ ಸಾಧಿಸಬಹುದು, ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಬೇಕು ಏಕಾಗ್ರತೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.