ವಾಮಾಚಾರಕ್ಕೆ ಮಗು ಬಲಿ ಯತ್ನ ಪ್ರಕರಣ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ತಾಲೂಕು ಸೂಲಿಬೆಲೆಯಲ್ಲಿ ವಾಮಾಚಾರಕ್ಕೆ ಮಗು ಬಲಿ ಯತ್ನ ಪ್ರಕರಣ ಸಂಬಂಧ ಪ್ರಥಮ ವರ್ತಮಾನ ವರದಿ ಆಧರಿಸಿ ಆರೋಪಿ ಸೈಯದ್ ಇಮ್ರಾನ್ ಮತ್ತು ಮಂಜುಳಾ ಎಂಬುವರನ್ನು ಕಾನೂನು ಕ್ರಮಕ್ಕೆ ಒಳಪಡಿಸಿರುವ ಬೆನ್ನಲ್ಲೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಮತ್ತು ಪ್ರಕರಣದಲ್ಲಿ ಮಗುವಿನ ನೈಜ ತಂದೆ ರಾಮಪ್ಪ, ಮಗುವಿನ ಜನನ ಪತ್ರ ನೀಡಲು ಸಹಕರಿಸಿದ ಸೂಲಿಬೆಲೆ ಶ್ರೀರಂಗ ಆಸ್ಪತ್ರೆ ಸಿಬ್ಬಂದಿ, ಹೊಸಕೋಟೆ ಮುಖ್ಯ ನೋಂದಣಾಧಿಕಾರಿ, ದತ್ತು ಪತ್ರಕ್ಕೆ ಸಹಿ ಹಾಕಿರುವ ವಕೀಲ ಅಂಬರೀಶ್ ಎಂಬುವರ ವಿರುದ್ಧ ಹೊಸಕೋಟೆ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ದೂರಿನ ಆಧಾರದ ಮೇಲೆ ಎ್ಐಆರ್ ದಾಖಲಿಸಲಾಗಿದೆ.
ದತ್ತು ಪಕ್ರಿಯೆ ಕುರಿತು ಪರಿಶೀಲಿಸಲಾಗಿ ಮಗುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳವಡಿಸದೆ ಕಾನೂನು ಬಾಹಿರವಾಗಿ ದತ್ತು ಪಡೆದಿರುವುದು ಕಂಡುಬಂದಿರುತ್ತದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರಿ ಶಿಶು ಮಂದಿರಕ್ಕೆ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿ ನಿಯಮಾನುಸಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಗುವಿನ ರಕ್ಷಣೆ ಮತ್ತು ಪೋಷಣೆಗೆ ಅಗತ್ಯ ಕ್ರಮವಹಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲು ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿರುತ್ತಾರೆ.
ಅವಳಿ ಮಕ್ಕಳಲ್ಲಿ ಒಂದು ಮಾರಾಟ:
ಮಗುವಿನ ನೈಜ ತಂದೆ-ತಾಯಿ ರಾಮಪ್ಪ ಹಾಗೂ ಮಂಜುಳಾ ದಂಪತಿ ವಿಚಾರಣೆಯಲ್ಲಿ 2025ರ ಏಪ್ರಿಲ್‌ನಲ್ಲಿ ಜಾಲಪ್ಪ ಆಸ್ಪತ್ರೆಯಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಇದರಲ್ಲಿ ಗಂಡು ಮಗುವನ್ನು ಕಾನೂನು ಬಾಹಿರವಾಗಿ ಸೈಯದ್ ಇಮ್ರಾನ್ ಮತ್ತು ನಜಾ ಕೌಸರ್ ದಂಪತಿಗಳಿಗೆ ನೀಡಿರುವುದು ಕಂಡುಬಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ಸಹಾಯವಾಣಿಯುಲ್ಲಿ ಜ. 3ರಂದು ಮಗುವನ್ನು ವಾಮಾಚಾರಕ್ಕೆ ಬಲಿ ಕೂಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅನಾಮಧೇಯವಾಗಿ ದೂರು ಸ್ವೀಕೃತವಾಗಿತ್ತು. ದೂರನ್ನಾಧರಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳದಲ್ಲಿ ಸೈಯದ್ ಇಮ್ರಾನ್ ಮತ್ತು ನಜ್ಜಾ ಕೌಸರ್ ದಂಪತಿ ವಾಸವಾಗಿರುವುದು ಕಂಡು ಬಂದಿತ್ತು. ಮನೆಯ ನೆಲ ಮಹಡಿ ಕೊಠಡಿಯಲ್ಲಿ ಗುಂಡಿ ಆಗೆದು ಪೂಜೆಗೆ ತಯಾರಿ ಮಾಡಿಕೊಂಡಿರುವುದು ಗಮನಿಸಲಾಗಿತ್ತು. ಮಗುವು ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮಗು ಕರೆತರುವಂತೆ ದಂಪತಿಗೆ ತಿಳಿಸಿದರೂ ಮಗುವನ್ನು ಕರೆತರಲು ಹಿಂದೇಟು ಹಾಕಿರುತ್ತಾರೆ. ನಂತರ ಕುಟುಂಬದ ಸದಸ್ಯರೊಬ್ಬರು ಮಗುವನ್ನು ಕರೆತಂದರು. ಕೂಡಲೇ ಮಗುವನ್ನು ವಶಕ್ಕೆ ಪಡೆದು ಸರ್ಕಾರಿ ಶಿಶು ಮಂದಿರದ ವಶಕ್ಕೆ ನೀಡಲಾಗಿದೆ. ಮಗುವನ್ನು 8 ತಿಂಗಳ ಹಿಂದೆ ದತ್ತು ಪಡೆಯಲಾಗಿದೆ ಎಂದು ತಿಳಿಸಿರುತ್ತಾರೆ.
ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ಹಾಗೂ ಮಕ್ಕಳ ದತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ-1098, ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಮತೆಯ ತೊಟ್ಟಿಲನ್ನು ಸಾರ್ವಜನಿಕರು ಸಂಪರ್ಕಿಸುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಮನವಿ ಮಾಡಿದ್ದಾರೆ.