Cable thieves 
ಬೆಂಗಳೂರು ಗ್ರಾಮಾಂತರ

ಜಮೀನುಗಳಲ್ಲಿ ಕೇಬಲ್ ಕಳ್ಳರ ಹಾವಳಿ

ಶಿವರಾಜ.ಎಂ
ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಬಿರು ಬೇಸಿಗೆಯ ನಡುವೆಯೇ ಬೆಳೆಗಳ ಸಂರಕ್ಷಣೆ ಪರದಾಡುತ್ತಿರುವ ರೈತರಿಗೆ ಕೇಬಲ್‌ಗಳ ಕಳ್ಳರ ಕಾಟ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು. ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜಮೀನುಗಳಲ್ಲಿ ಕೊಳವೆಬಾವಿಗಳಿಗೆ ಅಳವಡಿಸಿರುವ ಕೇಬಲ್‌ಗಳನ್ನು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚಿವೆ. ಇದರಿಂದ ರೈತರು ಕಂಗಾಲಾಗಿದ್ದು, ಆರ್ಥಿಕ ನಷ್ಟದ ಜತೆಗೆ ಬೆಳೆಗಳಿಗೆ ಸರಿಯಾದ ವೇಳೆ ನೀರು ಹಾಯಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಸ್ಥಳೀಯ ಕಿಡಿಗೇಡಿಗಳು ಇಂಥ ಕೃತ್ಯ ನಡೆಸುತ್ತಿದ್ದರು. ಎಷ್ಟೇ ಪ್ರಕರಣಗಳಲ್ಲಿ ಜಮೀನುಗಳ ಮಾಲೀಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿನ್ನುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇಬಲ್ ಕಳ್ಳರ ತಂಡವೇ ರಚನೆಯಾಗಿದ್ದು, ಹೊರ ಜಿಲ್ಲೆಗಳಿಂದ ಬಂದು ರಾತ್ರಿ ವೇಳೆ ಕೃತ್ಯ ಎಸಗುತ್ತಿದ್ದಾರೆ ಎಂಬುದು ಸ್ಥಳೀಯರ ದೂರಾಗಿದೆ.
ರಾತ್ರೋರಾತ್ರಿ ಕೃತ್ಯ:
ರಾತ್ರೋರಾತ್ರಿ ತೋಟಗಳಿಗೆ ನುಗ್ಗುತ್ತಿರುವ ದುಷ್ಕರ್ಮಿಗಳು ಕೊಳವೆಬಾವಿಗಳ ಕೇಬಲ್‌ಗಳನ್ನು ಕಳವು ಮಾಡುತ್ತಿದ್ದಾರೆ. ಕೇಬಲ್‌ಗಳಲ್ಲಿನ ತಾಮ್ರವನ್ನು ಕದ್ದು ಮಾರುವುದು ಒಂದೆಡೆಯಾದರೆ ಸೆಕೆಂಡ್ಸ್ ಸೇಲ್ಸ್ ರೀತಿಯಲ್ಲೂ ಕೇಬಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಸರಣಿ ಕೇಬಲ್ ಕಳ್ಳತನಗಳಿಂದ ಅನ್ನದಾತರು ಬೆಚ್ಚಿಬಿದ್ದಿದ್ದಾರೆ. ಸಾವಿರಾರು ರೂಪಾಯಿ ವೆಚ್ಚದಲ್ಲಿ ಕೇಬಲ್ ಅಳವಡಿಸಿರುವ ರೈತರು ನಷ್ಟದ ಜತೆಗೆ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದಾರೆ.
ದೂರು ನೀಡಿದರೂ ಕ್ರಮವಿಲ್ಲ:
ಜಿಲ್ಲೆಯಲ್ಲಿ ದೇಗುಲಗಳಲ್ಲಿನ ಕಾಣಿಕೆ ಹುಂಡಿ ಕಳವು ಹಾಗೂ ಜಮೀನುಗಳಲ್ಲಿ ಕೇಬಲ್‌ಗಳ ಕಳವು ಪ್ರಕರಣಗಳು ಸಾಮಾನ್ಯವಾಗಿವೆ. ಈ ಬಗ್ಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗುತ್ತಿವೆ. ಆದರೆ ಕಾಣಿಕೆ ಹುಂಡಿ ಕಳ್ಳರಾಗಲಿ, ಕೇಬಲ್ ಕಳವು ಕಳ್ಳರಾಗಲಿ ಪೊಲೀಸರಿಗೆ ಸಿಕ್ಕಿ ಬೀಳುವುದಿಲ್ಲ.ಇಂಥ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇಂಥ ಪ್ರಕರಣಗಳ ಬಗ್ಗೆ ಠಾಣೆಗಳಲ್ಲಿ ದೂರುಗಳನ್ನೆ ದಾಖಲು ಮಾಡಿಕೊಳ್ಳುವುದಿಲ್ಲ. ಬದಲಿಗೆ ಸಿಸಿ ಕ್ಯಾಮರಾ ಹಾಕಿಸಿ, ನಾಯಿಗಳನ್ನು ಸಾಕಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಕೆಲವು ವೇಳೆ ನಿಮ್ಮ ಜಮೀನು ಕಾಯಲು ಪೊಲೀಸರನ್ನು ನಿಯೋಜಿಸಬೇಕೆ ಎಂಬಂತೆ ಉಡಾೆ ಉತ್ತರ ಸಹ ನೀಡುತ್ತಾರೆ ಎಂಬುದು ರೈತರ ಅಳಲಾಗಿದೆ.
ಸಿಬ್ಬಂದಿಯೂ ಬರುವುದಿಲ್ಲ:
ಒಂದು ಕಡೆ ಕೇಬಲ್ ಕಳ್ಳರ ಕಾಟ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಬಿಸಿಲಿನ ಕಾರಣ ನೀಡಿ ಸಿಬ್ಬಂದಿ ಕೇಬಲ್ ಅಳವಡಿಸಲು ಬರದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ತೋಟಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಕಳ್ಳರ ಹಾವಳಿ ನಿಲ್ಲದೇ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೀನುಗಳು ಇಸ್ಟೀಟ್ ಅಡ್ಡೆ:
ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ವಹಿವಾಟು ಮಿತಿಮೀರಿದೆ, ಪುಂಡರು ಗ್ರಾಮಗಳ ಅಂಗಡಿಗಳಲ್ಲಿ ಮದ್ಯ ಖರೀದಿಸಿ ಜಮೀನುಗಳಲ್ಲಿ ಇಸ್ಪೀಟ್ ಅಡುವ ಕೃತ್ಯಗಳು ನಡೆಯುತ್ತಿವೆ.
ಕೆಲವರು ಇಸ್ಪೀಟ್ ಆಡಲು ಬಂದು ಈ ರೀತಿಯ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂಬ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಬೀಟ್ ಪೊಲೀಸರು ಸೇರಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಕಣ್ಣೀರು ಒರೆಸಿದಂತಾಗುತ್ತದೆ:
ದೇವನಹಳ್ಳಿ ತಾಲೂಕಿನ ಸುತ್ತಮುತ್ತ, ವಿಶೇಷವಾಗಿ ಕೊಯಿರಾ ಗ್ರಾಮದಲ್ಲಿ ಕೇಬಲ್ ಕಳ್ಳರ ಹಾವಳಿ ತೀವ್ರಗೊಂಡಿದೆ. ಈ ಬಗ್ಗೆ ವಿಶ್ವನಾಥಪುರ ಠಾಣೆಗೆ ರೈತರು ದೂರು ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಪೊಲೀಸರು ಕಳ್ಳರ ಹೆಡೆಮುರಿ ಕಟ್ಟಿದರೆ ಅನ್ನದಾತರ ಕಣ್ಣೀರು ಒರೆಸಿದ ಪುಣ್ಯ ಬರುತ್ತದೆ ಎಂಬುದು ರೈತರ ಮನವಿಯಾಗಿದೆ.
ಎಷ್ಟು ಬಾರಿ ಕೇಬಲ್‌ಗಳನ್ನು ಹೊಸದಾಗಿ ಬದಲಾಯಿಸಿದರೂ ಕಳ್ಳರು ಕೇಬಲ್‌ಗಳನ್ನು ಕದ್ದು ಹೋಗುತ್ತಿದ್ದಾರೆ. ಇದರಿಂದ ಜಮೀನುಗಳಲ್ಲಿನ ಬೆಳೆ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಸಿಸಿ ಕ್ಯಾಮರಾ ಇದ್ದರೂ, ಕಳ್ಳರು ಮುಖ ಮರೆಸಿಕೊಂಡು ಬಂದು ಕೇಬಲ್ ಕಟ್ ಮಾಡುತ್ತಾರೆ,. ಅವರ ಗುರುತು ಸಹ ತಿಳಿಯುವುದಿಲ್ಲ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದರೆ ಕಳ್ಳರ ಕಾಟ ತಪ್ಪಬಹುದು.
ಲಿಂಗಪ್ಪ, ಕೊಯಿರಾ ಗ್ರಾಮಸ್ಥ