ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಕಡೆಗೂ ಬೌದ್ಧನೆಲೆ ಉತ್ಖನ್ನಕ್ಕೆ ಶುಭಗಳಿಗೆ ಕೂಡಿ ಬಂದಿದ್ದು, ದೊಡ್ಡಬಳ್ಳಾಪುರ ತಾಲೂಕು ರಾಘಘಟ್ಟ ಗ್ರಾಮದ ಬೂದಿಗುಂಡಿಯಲ್ಲಿ ಜ.12ರಿಂದ ಅಧಿಕೃತವಾಗಿ ಉತ್ಖನನ ಆರಂಭಿಸಲು ಪುರಾತತ್ವ ಇಲಾಖೆ ಮುಂದಾಗಿದೆ.
ಕಳೆದ ವರ್ಷ ನವೆಂಬರ್ ಮೊದಲ ವಾರದಿಂದ ಉತ್ಖನ ಆರಂಭಿಸಲು ಸಿದ್ದತೆ ನಡೆಸಿದ್ದ ಇಲಾಖೆ ಕೆಲವೊಂದು ಪ್ರಕ್ರಿಯೆ ಹಿನ್ನೆಲೆಯಲ್ಲಿ ಕಾರ್ಯ ತಡವಾಗಿತ್ತು. ಇದೀಗ ಆರಂಭಿಕ ಪೂರ್ವಸಿದ್ದತೆಗಳು ಮುಗಿದಿದ್ದು ಅಧಿಕೃತವಾಗಿ ಉತ್ಖನನ ಶುರುವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲೇ ವಾಸ್ತವ್ಯ: ಇದೊಂದು ಮಹತ್ವಪೂರ್ಣ ಯೋಜನೆಯಾಗಿದ್ದು, ಉತ್ಖನನದ ಜಾಗದಲ್ಲೇ ಇಲಾಖೆ ಅಧಿಕಾರಿಗಳು ಬೀಡುಬಿಟ್ಟು ಸತತ 3 ತಿಂಗಳ ಕಾಲ ನಿರಂತವಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕಾಗಿ ರಾಜಘಟ್ಟ ಗ್ರಾಮದಲ್ಲಿ ಎರಡು ಬಾಡಿಗೆ ಮನೆ ಪಡೆದಿರುವ ಅಧಿಕಾರಿಗಳು ವಾಸ್ತವ್ಯ ಹೂಡಿದ್ದಾರೆ. ಪುರಾತತ್ವ ವಿಷಯದಲ್ಲಿ ತಜ್ಞರೆನಿಸಿರುವ ಮೈಸೂರಿನ ನಿವೃತ್ತ ಪ್ರೋೆಸರ್ ಎಂ.ಎಸ್.ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಇವರೊಂದಿಗೆ ಸಹಾಯಕಾರಿ ಇಬ್ಬರು ನಿಯೋಜನೆಗೊಂಡಿದ್ದಾರೆ. ಪುರಾತತ್ವ ಇಲಾಖೆ ಸಿಬ್ಬಂದಿ ಇವರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಾರ್ಕಿಂಗ್ ನಡೆಯಲಿದೆ: ಅರಂಭಿಕವಾಗಿ ಉತ್ಖನನ ಜಾಗವನ್ನು ಗುರುತಿಸಲು ಮಾರ್ಕಿಂಗ್ ಮಾಡಲಾಗುತ್ತದೆ, ಎಷ್ಟು ಪ್ರದೇಶದಲ್ಲಿ ಉತ್ಖನನ ಮಾಡಬೇಕು, ಎಷ್ಟು ಪ್ರಮಾಣದಲ್ಲಿ ಭೂಮಿ ಅಗೆಯಬೇಕು ಎಂಬುದನ್ನು ಮಾನಿಟರ್ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಪರಿಕರಗಳನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜು.16ರಂದು ಉದ್ಘಾಟನೆಯಾಗಿತ್ತು: ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಜಂಟಿಯಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಂದಾಗಿದೆ. ಕಳೆದ ಜು.16ರಂದು ಉತ್ಖನನ ಕಾರ್ಯಕ್ರಮ ಉದ್ಘಾಟನೆಯಾಗಿತ್ತು. ಆ ಸಂದರ್ಭದಲ್ಲಿ ಮಳೆ ಕಾರಣದಿಂದ ಉತ್ಖನನ ಕಾರ್ಯ ಮುಂದೂಡಲಾಗಿತ್ತು. ಈಗಾಗಲೇ ಹಲವು ಐತಿಹಾಸಿನ ತಾಣಗಳಿಂದ ದೇಶದ ಗಮನ ಸೆಳೆದಿರುವ ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಬೌದ್ಧರ ಇತಿಹಾಸದ ಗತವೈಭವವನ್ನು ಬೆಳೆಕಿಗೆ ತರುವ ಪ್ರಯತ್ನ ಇದಾಗಿದ್ದು ಇಲಾಖೆಗಳಿಂದ ಉತ್ಖನನದ ನೀಲಿನಕ್ಷೆ ಸಿದ್ದವಾಗಿದೆ. ಯೋಜಿತ ರೂಪದಲ್ಲಿ ಕಾರ್ಯ ಆರಂಭವಾಗಲಿದೆ.
2500 ವರ್ಷಗಳ ಇತಿಹಾಸ: ಸುಮಾರು 2500 ವರ್ಷಗಳ ಹಿಂದಿನ ಇತಿಹಾಸ ಕೆದಕುವ ಪ್ರಯತ್ನ ನಡೆಯಲಿದೆ, 2004ರಲ್ಲಿ ಮೊದಲ ಬಾರಿಗೆ ಉತ್ಖನನಕ್ಕೆ ಚಾಲನೆ ನೀಡಲಾಯಿತು. ಆಗ ಕೆಲವೊಂದು ಭೌದ್ಧ ಪ್ರತಿಮೆಗಳು, ಸ್ಥೂಪಗಳು, ಚಿನ್ನದನಾಣ್ಯ, ಶಿವಲಿಂಗ. ಶಿಲಾಶಾಸನಗಳು ಸೇರಿ ಹಲವು ಪುರಾವೆಗಳು ಪತ್ತೆಯಾಗಿದ್ದವು. ಇಲಾಖೆ ಗುರುತಿಸಿರುವ ಜಾಗದಲ್ಲಿ ಬೌದ್ಧವಿಹಾರವಿರುವ ಬಗ್ಗೆ ಊಹಿಸಲಾಗಿದ್ದು, ಉತ್ಖನನ ಆರಂಭವಾದ ಬಳಿಕ ಹೊಸ ಅಚ್ಚರಿಗಳನ್ನು ಕಾಣಬಹುದು ಎಂಬ ವಿಶ್ವಾಸ ವ್ಯಕ್ತವಾಗಿದೆ.
ಉತ್ಖನನ ಸೂಕ್ಷ್ಮ: ಕೇಂದ್ರ ಸರ್ಕಾರದ ಅನುಮತಿ ಬಳಿಕ ಜು.16ರಂದು ಬೌದ್ಧನೆಲೆ ಉತ್ಖನನ ಕಾರ್ಯಕ್ರಮ ಉದ್ಘಾಟಿಸಲಾಗಿದೆ. ಮಳೆಕಾರಣದಿಂದ ನವೆಂಬರ್ ಮೊದಲ ವಾರದಿಂದ ಅಧಿಕೃತವಾಗಿ ಉತ್ಖನನ ಕಾರ್ಯ ಆರಂಭವಾಗಲಿದೆ. ಸುಮಾರು 2ರಿಂದ 3 ತಿಂಗಳ ಅವಧಿಯಲ್ಲಿ ಉತ್ಖನನ ಕಾರ್ಯವೂ ಸೂಕ್ಷ್ಮ ಕೆಲಸವಾಗಿರುವುದರಿಂದ ಯಾವುದೇ ವಸ್ತುಗಳಿಗೆ ಸಣ್ಣ ಹಾನಿಯಾಗದಂದೆ ಕೆಲಸ ನಿರ್ವಹಿಸಬೇಕಾಗಿದೆ. ಸಣ್ಣದೊಂದು ಇಟ್ಟಿಗೆ ಚೂರು ಸಿಕ್ಕರೂ ಅದನ್ನು ಜೋಪಾನ ಮಾಡಬೇಕಾಗಿದೆ, ಯಾವುದೇ ವಸ್ತುಗಳು ಮುಕ್ಕಾಗದಂತೆ ಎಚ್ಚರಿಕೆ ವಹಿಸಬೇಕಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಪೂರ್ವಸಿದ್ದತೆಯೊಂದಿಗೆ ಕಾರ್ಯೋನ್ಮುಖರಾಗಲಿದ್ದಾರೆ.
2.12ರಿಂದ ಅಧಿಕೃತವಾಗಿ ಉತ್ಖನನ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಆರಂಭಿಕವಾಗಿ ಮಾರ್ಕಿಂಗ್ ಕಾರ್ಯ ನಡೆಯಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸುವ ಸಲುವಾಗಿ ಗ್ರಾಮದಲ್ಲೇ ವಾಸ್ತವ್ಯ ಹೂಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇಂಥಹ ಐತಿಹಾಸಿಕ ಕೆಲಸಕ್ಕೆ ಮುಖ್ಯವಾಗಿ ಗ್ರಾಮಸ್ಥರ ಹಾಗೂ ಸ್ಥಳೀಯರ ಸಹಕಾರ ಅವಶ್ಯಕವಾಗಿದೆ. ಇಲಾಖೆ ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇವೆ.
ಕಾವ್ಯಶ್ರೀ, ಉಪನಿರ್ದೇಶಕಿ ಪುರಾತತ್ವ ಇಲಾಖೆ ಬೆಂ.ಗ್ರಾಮಾಂತರ
ಉತ್ಖನನ ನಡೆಯುತ್ತಿರುವ ಸ್ಥಳವನ್ನು ಈ ಹಿಂದೆ ಬೂದಿಗುಡ್ಡ ಎಂದು ಕರೆಯುತ್ತಿದ್ದರು. ಇಲ್ಲಿನ ಬೂದಿಯನ್ನು ರೈತರು ಹೊಲಗಳಿಗೆ ಹೊಡೆದುಕೊಳ್ಳುತ್ತಿದ್ದರು. ನಮ್ಮ ಗ್ರಾಮದಲ್ಲಿ ಇಂತಹ ಸ್ಥಳವಿರುವುದು ಹೆಮ್ಮೆ. ಈ ಸ್ಥಳವನ್ನು ಸರ್ಕಾರ ಅಭಿವೃದ್ಧಿ ಮಾಡಿ ಬೌದ್ಧ ಪ್ರವಾಸಿ ತಾಣವಾಗಿ ಮಾಡಿದರೆ, ರಾಜಘಟ್ಟ ಗ್ರಾಮ ಪ್ರಮುಖ ಪ್ರವಾಸಿ ತಾಣವಾಗುತ್ತದೆ.
ಶಿವರುದ್ರಪ್ಪ, ದೊಡ್ಡಬಳ್ಳಾುರ