ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಆರ್ಥಿಕವಾಗಿ ಹಿಂದುಳಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯದಿಂದ ಅನುಕೂಲವಾಗಲಿದೆ, ವಿದ್ಯಾರ್ಥಿ ನಿಲಯದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 3.96 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ನೂತನ ವಿದ್ಯಾರ್ಥಿ ನಿಲಯ(ಪರಿವರ್ತಿತ) ಕಟ್ಟಡದ ಉದ್ಘಾಟನೆ ಹಾಗೂ 3.96 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಸ್ಟೆಲ್ ಮಕ್ಕಳಿಗೆ ಓದಲು ಹೆಚ್ಚಿನ ಸಮಯ ಸಿಗುತ್ತದೆ. ಒಳ್ಳೆಯ ಅವಕಾಶ ಪಡೆದು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು. ವೈದ್ಯ ವೃತ್ತಿ, ಐಎಎಸ್, ಐಪಿಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಾಸ್ಟೆಲ್ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು, ಇದರಿಂದ ಮಕ್ಕಳ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ. ಮಕ್ಕಳು ಹೆಚ್ಚಿನ ಸಮಯ ಹಾಸ್ಟೆಲ್ ಗಳಲ್ಲಿ ಕಳೆಯುವುದರಿಂದ ನಿಮ್ಮ ಮಕ್ಕಳಂತೆ ಅವರ ಮೇಲೆ ಅದೇ ಕಾಳಜಿ ವಹಿಸಿ ಎಂದು ವಾರ್ಡನ್‌ಗಳಿಗೆ ಸಚಿವರು ತಿಳಿಸಿದರು. ಪ್ರತಿ ವಾರ ಹಾಸ್ಟೆಲ್ ಭೇಟಿ ಮಾಡಿ ಅಲ್ಲೇ ಊಟ ಮಾಡಿ, ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿ, ಏನು ಸೌಲಭ್ಯ ಬೇಕು ಎನ್ನುವ ಬಗ್ಗೆ ನಮ್ಮ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಾಸ್ಟೆಲ್‌ನಲ್ಲಿ 30 ಕೊಠಡಿಗಳು:
ದೇವನಹಳ್ಳಿ ಪಟ್ಟಣದಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ನೂತನ ವಿದ್ಯಾರ್ಥಿ ನಿಲಯ(ಪರಿವರ್ತಿತ) ಕಟ್ಟಡದ ವಿಸ್ತೀರ್ಣ 1535 ಚ.ಮೀ, 3.96 ಕೋಟಿ ರೂ.ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದ್ದು 3.3 ಅಂತಸ್ತಿನ ಕಟ್ಟಡವಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗಾಗಿ ವಿಶಾಲವಾದ ಡೈನಿಂಗ್ ಹಾಲ್, ಅಡುಗೆ ಕೊಠಡಿ, ವಿದ್ಯಾರ್ಥಿಗಳ ವಾಸಕ್ಕೆ 30 ಕೊಠಡಿಗಳು ನಿರ್ಮಿಸಲಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ ಮಾಹಿತಿ ನೀಡಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿದ್ದು 1535 ಚ.ಮೀ ಕಟ್ಟಡದ ವಿಸ್ತೀರ್ಣದಲ್ಲಿ 3.96 ಕೋಟಿ ರೂ.ವೆಚ್ಚದಲ್ಲಿ 3. 3 ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಇದರಲ್ಲಿ ವಿದ್ಯಾರ್ಥಿಗಳಿಗಾಗಿ ವಿಶಾಲವಾದ ಡೈನಿಂಗ್ ಹಾಲ್, ಅಡುಗೆ ಕೊಠಡಿ, ವಿದ್ಯಾರ್ಥಿಗಳ ವಾಸಕ್ಕೆ 30 ಕೊಠಡಿಗಳು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.