buddanele 
ಬೆಂಗಳೂರು ಗ್ರಾಮಾಂತರ

ಬೂದಿಗುಂಡಿಯಲ್ಲಿ ಬೂದಿಮುಚ್ಚಿದ ಕೆಂಡ!

ಶಿವರಾಜ.ಎಂ
ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ರಾಘಘಟ್ಟ ಗ್ರಾಮದ ಬೂದಿಗುಂಡಿಯಲ್ಲಿ ಪುರಾತತ್ವ ಇಲಾಖೆ ಅರಂಭಿಸಿದ್ದ ಉತ್ಖನನ ಕಾರ್ಯ ಮುಕ್ತಾಯಗೊಂಡ ಬಳಿಕ ಸಾಕಷ್ಟು ಗೊಂದಲಗಳು ಉದ್ಭವಗೊಂಡಿದ್ದು ಸ್ಥಳೀಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಹೌದು..! ರಾಜಘಟ್ಟದಲ್ಲಿ ಕುರುಹುಗಳ ಅಧ್ಯಯನ ಹಾಗೂ ರಕ್ಷಣೆಗೆ ಸಮಿತಿ ರಚಿಸುವ ಬಗ್ಗೆ ಖುದ್ದು ಸಿಎಂ ಡಿ.ಕೆ.ಶಿವಕುಮಾರ್ ಇತ್ತೀಚಿಗೆ ಭರವಸೆ ವ್ಯಕ್ತಪಡಿಸಿದ್ದು. ಇದು ಸಹಜವಾಗಿ ಬೌದ್ಧ ಸಮುದಾಯದ ಮುಖಂಡರಲ್ಲಿ ಹರ್ಷ ಮೂಡಿಸಿದ್ದರೆ, ಸ್ಥಳೀಯವಾಗಿ ಈ ಜಾಗವನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂಬ ಆಗ್ರಹ ಕೇಳಿಬರುತ್ತಿದೆ. ಬೌದ್ಧರ ಕುರುಹುಗಳ ಜತೆಗೆ ಚೋಳರು, ಗಂಗರು, ಶಿವಾಜಿ ಸೇರಿ ಕೆಂಪೇಗೌಡರ ಕಾಲದ ಆಳ್ವಿಕೆಯಲ್ಲಿನ ಕುರುಹುಗಳೂ ಇದರಲ್ಲಿ ಹುದುಗಿದ್ದು, ಕೇವಲ ಬೌದ್ಧನೆಲೆ ಎಂಬಂತೆ ಬಿಂಬಿಸಬಾರದು ಎಂಬ ಆಗ್ರಹ ರಾಜಘಟ್ಟ ಜನರಿಂದ ಕೇಳಿಬರುತ್ತಿದೆ.
ಸುಪರ್ದಿಗೆ ನೀಡಬೇಕು:
ಉತ್ಖನನ ನಡೆದ ಜಾಗ ಖಾಸಗಿಯವರಿಗೆ ಸೇರಿದ್ದು, ಮೂರು ತಿಂಗಳ ಕಾಲ ಉತ್ಖನನ ನಡೆಸಲು ಅನುಮತಿ ಪಡೆಯಲಾಗಿತ್ತು. ಉತ್ಖನನ ಬಳಿಕ ಜಾಗವನ್ನು ಯಥಾಸ್ಥಿತಿಗೆ ಮರಳಿಸುವುದು ಸೇರಿ ಯಾವುದೇ ಕಾರಣಕ್ಕೂ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಸ್ತಾವನೆ ಇಲಾಖೆಯ ಮುಂದಿಲ್ಲ. ಉತ್ಖನನ ಬಳಿಕ ಯಥಾವತ್ತಾಗಿ ಜಮೀನನ್ನು ಮಾಲೀಕರ ಸುಪರ್ದಿಗೆ ನೀಡಲಾಗುವುದು ಎಂದು ಪುರಾತತ್ವ ಇಲಾಖೆ ಕರಾರು ಪತ್ರ ನೀಡಿದೆ. ಆದರೆ ಉತ್ಖನನ ಪೂರ್ಣಗೊಂಡು ತಿಂಗಳುಗಳೇ ಕಳೆಯುತ್ತಿದ್ದರೂ ಉತ್ಖನನ ಜಾಗವನ್ನು ಯಥಾಸ್ಥಿತಿಗೆ ತರುವ ಪ್ರಯತ್ನ ಮಾಡಿಲ್ಲ. ಏತನ್ಮಧ್ಯೆ ಕೆಲವು ಬೌದ್ಧ ಸಮುದಾಯದ ಮುಖಂಡರು ಉತ್ಖನನ ಜಾಗವನ್ನು ಹಾಗೇ ಉಳಿಸಿಕೊಳ್ಳಬೇಕು ಯಥಾಸ್ಥಿತಿ ಮಾಡಬಾರದು ಎಂದು ಮನವಿ ಸಲ್ಲಿಸಿರುವುದು ಜಮೀನಿನ ಮಾಲೀಕರು ಸೇರಿ ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಟ್ರಸ್ಟ್ ವಶಕ್ಕೆ ನಿರಾಕರಣೆ:
ಸುಮಾರು 16 ಗುಂಟೆ ವ್ಯಾಪ್ತಿಯಲ್ಲಿ ಉತ್ಖನನ ನಡೆಸಲು ಉದ್ದೇಶಿಸಲಾಗಿತ್ತು. ಪ್ರಸ್ತುತ ನಾಲ್ಕೈದು ಗುಂಟೆ ವಿಸ್ತೀರ್ಣದಲ್ಲಿ ಉತ್ಖನನ ನಡೆಸಿದ್ದು, ಬೌದ್ಧರು ಶವಸಂಸ್ಕಾರದ ವೇಳೆ ಬಳಸುತ್ತಿದ್ದ ಬೂದಿತುಂಬಿದ ಮಡಿಕೆ(ಬೂದಿಗುಂಡಿ), ಮಂದಿರ ನಿರ್ಮಾಣಕ್ಕೆ ಬಳಸುತ್ತಿದ್ದ ಇಟ್ಟಿಗೆಗಳು, ಬಿಕ್ಷಾಪಾತ್ರೆಗಳೂ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ. ಆದರೆ ಇದಕ್ಕೂ ಮುನ್ನ ನಡೆದ ಹಲವು ಸಂಶೋಧನೆಯಲ್ಲಿ ಹಿಂದು ರಾಜವಂಶಸ್ಥರ ಹಲವು ಕುರುಹುಗಳು ಪತ್ತೆಯಾಗಿವೆ, ವೀರಗಲ್ಲುಗಳು, ಕೆಲವು ಶಿಲಾಶಾಸನಗಳು ಹಿಂದು ದೇವತೆಗಳ ವಿಗ್ರಹಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಇಂದಿಗೂ ಈ ಸ್ಥಳದಲ್ಲಿ ಹೊಲದೇಶ್ವರ ಎಂಬ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಕಂಬದ ಮೇಲಿನ ಗಣಪಮೂರ್ತಿ ಸೇರಿ ಪಂಚಲಿಂಗೇಶ್ವರ ವಿಗ್ರಹಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದ್ದು, ಈ ಜಾಗವನ್ನು ಒಟ್ಟುಗೂಡಿ ಐತಿಹಾಸಿಕ ಸ್ಥಳವಾಗಿ ಅಭಿವೃದ್ಧಿಪಡಿಸಬೇಕೆ ಹೊರತು ಯಾವುದೋ ಒಂದು ಧರ್ಮದ ನೆಲೆಯಾಗಿ ಗುರುತಿಸಬಾರದು ಎಂಬುದು ಸ್ಥಳೀಯ ಮುಖಂಡರ ಅಭಿಮತವಾಗಿದೆ.
ಸರ್ಕಾರದಿಂದ ಸ್ಪಷ್ಟತೆ ಬೇಕು:
ಪ್ರಸ್ತುತ ಉತ್ಖನನ ನಡೆಸಿರುವ ಜಾಗ ಸ್ಥಳೀಯ ದಲಿತ ಸಮುದಾಯದ ಕುಟುಂಬಕ್ಕೆ ಸೇರಿದ್ದು ಸುಮಾರು 8 ಮಂದಿ ವಾರಸುದಾರರಿದ್ದಾರೆ. ಉತ್ಖನನ ಬಳಿಕ ಜಾಗವನ್ನು ಯಥಾಸ್ಥಿತಿಗೆ ತರಲು ಮೀನಮೇಷ ಎಣಿಸಲಾಗುತ್ತಿದೆ. ಅಲ್ಲದೆ ಉತ್ಖನನ ಜಾಗದ ಮೇಲ್ಬಾಗದಲ್ಲಿ ತಾತ್ಕಾಲಿಕ ಛಾವಣಿ ನಿರ್ಮಿಸಿ ಅಗೆದ ಜಾಗವನ್ನು ಹಾಗೇ ಸಂರಕ್ಷಣೆ ಮಾಡಿಕೊಳ್ಳುವ ಬಗ್ಗೆ ಕೆಲವು ಬೌದ್ಧ ಸಮುದಾಯ ಮುಖಂಡರು ಮನವಿ ಮಾಡುತ್ತಿರುವ ವಿಷಯ ಜಮೀನು ಮಾಲೀಕರಲ್ಲಿ ಆತಂಕ ಮೂಡಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಬೇಕು. ಸರ್ಕಾರ ಜಮೀನನ್ನು ವಶಕ್ಕೆ ಪಡೆಯುವುದಾದರೆ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಜತೆಗೆ ಈ ಜಾಗವನ್ನು ಸಮುದಾಯವೊಂದಕ್ಕೆ ಸೀಮಿತಗೊಳಿಸಿದ ಐತಿಹಾಸಿಕ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.
ಬೂದಿಗುಂಡಿ ಇದೊಂದು ಐತಿಹಾಸಿಕ ನೆಲೆ ರಾಜಘಟ್ಟ ಗ್ರಾಮದ ಆಸ್ತಿ, ನಾಡಿನ ಸಂಸ್ಕೃತಿಯ ಪ್ರತೀಕ ಇದನ್ನು ಕೇವಲ ಧರ್ಮವೊಂದಕ್ಕೆ, ಸಮುದಾಯವೊಂದಕ್ಕೆ ಸೀಮಿತಗೊಳಿಸಬಾರದು. ಸರ್ಕಾರ ಈ ಬಗ್ಗೆ ಸ್ಪಷ್ಟತೆ ಪ್ರಕಟಿಸಬೇಕು. ಯಾವುದೇ ಟ್ರಸ್ಟ್‌ವೊಂದರ ಸುಪರ್ದಿಗೆ ನೀಡದೆ ಸರ್ಕಾರದ ಸುಪರ್ಧಿಗೆ ಪಡೆದು ಐತಿಹಾಸಿಕ ಸ್ಥಳವಾಗಿ ಅಭಿವೃದ್ಧಿಪಡಿಸಿದರೆ ಯಾರದೂ ಅಭ್ಯಂತರವಿರುವುದಿಲ್ಲ. ಇದಕ್ಕು ಮೊದಲು ಜಮೀನು ಮಾಲೀಕರೊಂದಿಗೆ ಚರ್ಚಿಸಿ ಸ್ಥಳೀಯರ ವಿಶ್ವಾಸ ಪಡೆಯಬೇಕು.
ರಾಜಘಟ್ಟ ರವಿ. ಸ್ಥಳೀಯ ಮುಖಂಡರು
ಬೂದಿಗುಂಡಿಯನ್ನು ಐತಿಹಾಸಿಕ ಸ್ಥಳವಾಗಿ ಅಭಿವೃದ್ಧಿಪಡಿಸಿದರೆ ಯಾರದು ಅಭ್ಯಂತರವಿಲ್ಲ ಆದರೆ ಇದಕ್ಕೂ ಮೊದಲು ಜಮೀನಿನ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ಅವರ ಬದುಕನ್ನು ಬೀದಿಗೆ ತರಬಾರದು ಹಲವು ವರ್ಷಗಳಿಂದ ಈ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಕುಟುಂಬಗಳು ಜೀವನ ನಡೆಸುತ್ತಿವೆ. ಈ ಭೂಮಿಯೊಂದಿಗೆ ಅವರಿಗೆ ಅವಿನಾಭಾವ ಸಂಬಂಧವಿದೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಈ ಸ್ಥಳವನ್ನು ಧರ್ಮವೊಂದಕ್ಕೆ ಸೀಮಿತಗೊಳಿಸಬಾರದು.
ಸಿದ್ದೇಶ್, ರಾಜಘಟ್ಟ ನಿವಾಸಿ