budda jayanti 
ಬೆಂಗಳೂರು ಗ್ರಾಮಾಂತರ

ಜ್ಞಾನದ ಬೆಳಕು ಸಾರಿದ ಮಹಾನ್ ಪುರುಷ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜ್ಞಾನದ ಬೆಳಕನ್ನು ಜಗತ್ತಿಗೇ ಸಾರಿದಂತಹ ಮಹಾನ್ ಪುರುಷ ಭಗವಾನ್ ಬುದ್ಧರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಮಾಜ ನಿರ್ಮಿಸಲು ನಾವೆಲ್ಲರೂ ಮುಂದಾಗೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹೇಳಿದರು.
ದೇವನಹಳ್ಳಿ ಟೌನ್‌ನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ’ಭಗವಾನ್ ಬುದ್ಧ’ ಜಯಂತಿಯಲ್ಲಿ ಬುದ್ಧರ ಪ್ರತಿಮೆಗೆ ಮೊಂಬತ್ತಿ ಬೆಳಗುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.ಬುದ್ಧ ಜಯಂತಿ ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ನೆನಪಿಸುವ ಪವಿತ್ರ ದಿನವಾಗಿದೆ. ಗೌತಮ ಬುದ್ಧರು ನಿಜವಾದ ಜೀವನದ ಅರ್ಥ ಹುಡುಕಲು ಸುಖಜೀವನವನ್ನು ತ್ಯಜಿಸಿದರು. ಮಾನವನ ದುಃಖದ ಮೂಲವನ್ನು ಅರಿತುಕೊಳ್ಳಲು ಅವರು ಧ್ಯಾನವನ್ನು ಮಾಡಿ ಬೋಧಿವೃಕ್ಷದ ಕೆಳಗಡೆ ಅವರಿಗೆ ಜ್ಞಾನ ಪಡೆದುಕೊಂಡರು ಎಂದು ಸ್ಮರಿಸಿದರು.
ಆಸೆ ತ್ಯಜಿಸಿದರೆ ನಿಜವಾದ ಸಂತೋಷ:
ಬುದ್ಧರು ನಮಗೆ ಅಹಿಂಸೆ, ಮಧ್ಯಮ ಮಾರ್ಗ, ಸತ್ಯ, ದಯೆ ಎಂಬ ಮಹತ್ವದ ತತ್ವಗಳನ್ನು ಬೋಧಿಸಿದರು. ಅವರು ಹೇಳಿದಂತೆ ದುಃಖಕ್ಕೆ ಕಾರಣವಾದ ಆಸೆಗಳನ್ನು ತ್ಯಜಿಸಿದರೆ ನಿಜವಾದ ಸಂತೋಷವನ್ನು ಪಡೆಯಬಹುದು. ಅವರ ತತ್ವದರ್ಶಗಳು, ಉಪದೇಶಗಳು ಇಂದಿಗೂ ನಮ್ಮ ಜೀವನದಲ್ಲಿ ಪ್ರಸ್ತುತವಾಗಿವೆ. ಇಂದಿನ ಸಮಾಜದಲ್ಲಿ ಹಿಂಸೆ, ದ್ವೇಷ, ಅಸಹಿಷ್ಣುತೆ, ಹೆಚ್ಚುತ್ತಿರುವ ಸಂದರ್ಭದಲ್ಲಿ ಬುದ್ಧನ ಸಂದೇಶ ನಮಗೆ ಮಾರ್ಗದರ್ಶನ ನೀಡುತ್ತದೆ. ನಾವು ಪರಸ್ಪರ ಪ್ರೀತಿ, ಸಹಾನುಭೂತಿ ಮತ್ತು ಶಾಂತಿಯೊಳಗೆ ಬದುಕಬೇಕು ಎಂಬುದನ್ನು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದು ಎಡಿಸಿ ಹೇಳಿದರು.
ಏಷ್ಯಾದ ಬೆಳಕು:
ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಬುದ್ಧರನ್ನು ಏಷ್ಯಾದ ಬೆಳಕು ಎಂದು ಕರೆಯುತ್ತಿದ್ದರು. 2570 ವರ್ಷದ ಹಿಂದೆ ಜನಿಸಿದ ಮಹಾನ್ ವ್ಯಕ್ತಿಯನ್ನು ಇಂದಿಗೂ ನೆನೆಯುತ್ತಿದ್ದೇವೆಂದರೆ ಅವರ ಕೊಡುಗೆ ಅಪಾರವಾದದ್ದು ಎಂಬುದು ತಿಳಿಯುತ್ತದೆ ಎಂದು ಹೇಳಿದರು. ಬುದ್ಧ ಎಂದರೆ ಬೆಳಕು, ಜ್ಯೋತಿ, ಜ್ಞಾನ, ಒಳ್ಳೆಯದು ಎಂದರ್ಥ. ಬೌದ್ಧ ಧರ್ಮ ವಿಶ್ವದಾದ್ಯಂತ ಹರಡುತ್ತದೆ. ಬೌದ್ಧ ಧರ್ಮದ ಪ್ರೇರೆಪಿತನಾದ ಸಾಮ್ರಾಟ ಅಶೋಕನು ಭಾರತದಲ್ಲಿ ಬೌದ್ಧ ಧರ್ಮ ಪ್ರಚಾರ ಮಾಡಿ ಲೋಕ ಕಲ್ಯಾಣ ಕೆಲಸ ಮಾಡಿದ ಎಂಬುದು ಇತಿಹಾಸದಲ್ಲಿದೆ. ಜಗಜ್ಯೋತಿ ಬಸವಣ್ಣನವರ ಆದರ್ಶಗಳಿಗೂ ಸಾಮ್ಯತೆ ಇದೆ. ಡಾ.ಬಿ.ಆರ್. ಅಂಬೇಡ್ಕರ್ ಕೂಡ ಬೌದ್ಧ ಧರ್ಮದ ಪ್ರೇರೆಪಿತರಾಗಿ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಅವರ ಜೀವನವನ್ನು ತೊಡಗಿಸಿಕೊಂಡರು. ಹಾಗಾಗಿ ಈ ಮಹನೀಯರ ಜಯಂತಿಗಳನ್ನು ಆಚರಣೆ ಮಾಡುತ್ತಾ ತತ್ವಾದರ್ಶಗಳನ್ನು ಅನುಸರಿಸಿ ಮುಂದಿನ ಪೀಳಿಗೆಗೆ ತಿಳಿಸೋಣ ಎಂದರು.