* ರಸ್ತೆಯ ಮಧ್ಯೆ ಕ್ಯಾಂಡಲ್ ಹಿಡಿದು ಕುಳಿತು ಪ್ರತಿಭಟನೆ ನಡೆಸಿದ ಸ್ಥಳಿಯರು.
- ರಸ್ತೆ ಅಪಘಾತದಲ್ಲಿ ಬಾಲಕ ಬಲಿ
ದೊಡ್ಡಬಳ್ಳಾಪುರ&ನೆಲಮಂಗಲ ಮುಖ್ಯರಸ್ತೆಯ ಕೋಡಿಪಾಳ್ಯ ಬಳಿ ಬುಧವಾರ ಸೈಕಲ್ನಲ್ಲಿ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಕೂಲಿ ಕಾರ್ಮಿಕ ದಂಪತಿ ಪುತ್ರ ಧನು (13) ಮೃತ ದುರ್ದೈವಿ. ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸ್ ಸಿಬ್ಬಂದಿಯೊಂದಿಗೆ ಡಿವೈಎಸ್ಪಿ ಪಾಂಡುರಂಗ ಸ್ಥಳ ಪರಿಶೀಲಿಸಿದರು.
ಇತ್ತೀಚೆಗಷ್ಟೇ ತಂದೆ ತೀರಿಕೊಂಡಿದ್ದ. ಧನು ಒಬ್ಬನೇ ಮಗ. ತಾಯಿ ಸ್ಥಳಿಯ ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡು ಮಗುವಿನೊಂದಿಗೆ ಜೀವನ ನಡೆಸುತ್ತಿದ್ದರು. ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿಯ ದು@ಖ ಮುಗಿಲುಮುಟ್ಟಿತ್ತು. ಮಗುವಿನ ಶವದ ಎದುರು ಕಣ್ಣೀರು ಸುರಿಸುತ್ತಿದ್ದ ದೃಶ್ಯ ಸ್ಥಳಿಯರ ಕಣ್ಣಾಲಿಗಳನ್ನು ತೇವಗೊಳಿಸಿತು.
ಅಪಘಾತ ಪ್ರಕರಣದ ಬೆನ್ನಲ್ಲೆ ಸ್ಥಳದಲ್ಲಿ ಜಮಾಯಿಸಿದ ಸ್ಥಳಿಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಟೋಲ್ ತಪ್ಪಿಸಲು ಬೃಹತ್ ಲಾರಿಗಳು ಹಾಗೂ ಕೈಗಾರಿಕೆಗಳ ವಾಹನಗಳು ಈ ರಸ್ತೆಯಲ್ಲಿ ಸಾಗುತ್ತಿವೆ. ವೇಗಮಿತಿ ಇಲ್ಲ. ಈ ಭಾಗದಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ಸಂಬಂಧಪಟ್ಟ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಸ್ಥಳಕ್ಕೆ ಆಗಮಿಸಿ ಈ ರಸ್ತೆಯಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಭರವಸೆ ನೀಡಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು.
ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಡಿವೈಎಸ್ಪಿ ಪಾಂಡುರಂಗ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಆರ್ಟಿಒ, ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಮಿಟಿ ರಚಿಸಿ ಈ ಭಾಗದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಪ್ಲಾನ್ ಮಾಡಲಾಗುವುದು. ಈ ರಸ್ತೆಯಲ್ಲಿ ಸ್ಪೀಡ್ಗನ್ಗಳನ್ನು ಅಳವಡಿಸಿ ವೇಗಮಿತಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು, ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಜತೆಗೆ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು.
- ಪಾಂಡುರಂಗ, ಡಿವೈಎಸ್ಪಿ ದೊಡ್ಡಬಳ್ಳಾಪುರ
ಟೋಲ್ ತಪ್ಪಿಸಲು ಲಾರಿಗಳು ಸೇರಿದಂತೆ ಈ ಭಾಗದ ಸುತ್ತಮುತ್ತಲಿನ ಕೈಗಾರಿಕೆಗಳ ಬಸ್ಗಳು ಹಾಗೂ ಇನ್ನಿತರ ವಾಹನಗಳು ಈ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತವೆ. ಅವು ವೇಗವಾಗಿ ಚಲಿಸುವುದರಿಂದ ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯವಾಗಿದೆ. ಕೆಲವು ದಿನಗಳ ಹಿಂದಷ್ಟೇ ಅಪಘಾತದಲ್ಲಿ ಇದೇ ರಸ್ತೆಯಲ್ಲಿ ವ್ಯಕ್ತಿ ಬಲಿಯಾಗಿದ್ದರು. ಈಗ ಮಗು. ಇನ್ನೆಷ್ಟು ಬಲಿ ಬೇಕು?.
ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ಬುಧವಾರ ರಸ್ತೆ ಗುಂಡಿಯಿಂದಾಗಿ ದ್ವಿಚಕ್ರ ವಾಹನದಿಂದ ಬಿದ್ದಾಗ ಗೂಡ್ಸ್ ವಾಹನ ಹರಿದು ಮಹಿಳೆ ಮೇಲೆ ದಾರುಣವಾಗಿ ಮೃತಪಟ್ಟಿದ್ದಾಳೆ.
ಕೇರಳ ಮೂಲದ ಮೇಧಾ (32) ಮೃತೆ. ಎಲೆಕ್ಟ್ರಾನಿಕ್ ಸಿಟಿ ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಮೇಧಾ ಸ್ನೇಹಿತನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಮುಂದೆ ಸಾಗುತ್ತಿದ್ದ ಕಾರು ಏಕಾಏಕಿ ಬ್ರೇಕ್ ಹಾಕಿದೆ. ಆಗ ರಸ್ತೆಯಲ್ಲಿನ ಗುಂಡಿಗಳಿಂದಾಗಿ ಬೈಕ್ ನಿಯಂತ್ರಣ ತಪ್ಪಿದೆ. ಹಿಂಬದಿ ಕುಳಿತಿದ್ದ ಮೇಧಾ ರಸ್ತೆಗೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಮೇಧಾ ಅವರ ಮೇಲೆ ಹರಿದಿದೆ. ವಾಹನದ ಚಕ್ರ ಕತ್ತಿನ ಭಾಗದ ಮೇಲೆ ಹರಿದ ಪರಿಣಾಮ ಮೇಧಾ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಧಾ ಸಾವಿಗೆ ಸಂತಾಪ; ಕ್ಯಾಂಡಲ್ ಮಾರ್ಚ್
ಮೇಧಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹೆಬ್ಬಗೋಡಿಯ ಅನಂತನಗರದ ನಿವಾಸಿಗಳು ಆಕ್ರೋಶಗೊಂಡು ಸ್ಥಳದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿ, ಮೇಧಾ ಅವರ ಸಾವಿಗೆ ಸಂತಾಪ ಸೂಚಿಸಿದರು. ರಸ್ತೆಗುಂಡಿಗೆ ಇನ್ನೆಷ್ಟು ಅಮಾಯಕರ ಬಲಿಯಾಗಬೇಕು? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯ ಹಳ್ಳ&ಗುಂಡಿಗಳನ್ನು ಕೂಡಲೇ ಮುಚ್ಚಿ, ಅಪಾಯಕಾರಿ ರಸ್ತೆಗಳನ್ನು ದುರಸ್ತಿ ಮಾಡಬೇಕು. ವಾಹನ ಸವಾರರು ಹಾಗೂ ಸಾರ್ವಜನಿಕರ ಸುರತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ತಣ ಆದ್ಯತೆ ನೀಡಬೇಕು ಎಂದು ನಿವಾಸಿಗಳು ಆಗ್ರಹಿಸಿದರು.