boat trip 
ಬೆಂಗಳೂರು ಗ್ರಾಮಾಂತರ

ಸಣ್ಣಕೆರೆಯಲ್ಲಿ ದೋಣಿ ವಿಹಾರದ ಮೋಜು

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಪ್ರವಾಸಿ ತಾಣಗಳು ಹೊಸ ರೂಪ ಪಡೆಯುತ್ತಿರುವ ಹೊತ್ತಿನಲ್ಲಿ ದೇವನಹಳ್ಳಿಯಲ್ಲಿ ನೂತನವಾಗಿ ದೋಣಿ ವಿಹಾರ ಆರಂಭವಾಗಿರುವುದು ಜಿಲ್ಲೆಯ ಪ್ರವಾಸಿತಾಣಗಳ ಹಿರಿಮೆಯ ಪಟ್ಟಿಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ.
ದೇವನಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಕೋಟೆ ಸಮೀಪ ಇರುವ ಸಣ್ಣ ಕೆರೆಯಲ್ಲಿ ಪುರಸಭೆ ವತಿಯಿಂದ ನೂತನವಾಗಿ ಆರಂಭಿಸಿರುವ ದೋಣಿ ವಿಹಾರ ಪ್ರವಾಸಿಗರನ್ನು ಸೆಳೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದೇವನಹಳ್ಳಿ ಭಾಗದತ್ತ ಹೆಜ್ಜೆ ಹಾಕಲಾಗಿದ್ದಾರೆ ಎಂಬ ನಿರೀಕ್ಷೆ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ 25 ಪ್ರವಾಸಿ ತಾಣಗಳನ್ನು ಕರ್ನಾಟಕ ಪ್ರವಾಸೋದ್ಯಮ ನೀತಿ 2024-25 ರಡಿ ಸರ್ಕಾರ ಅನುಮೋದನೆ ನೀಡಿ ಆದೇಶಿಸಿರುವ ಹೊತ್ತಿನಲ್ಲಿ ದೋಣಿ ವಿಹಾರ ಆರಂಭವಾಗಿರುವುದು ಪ್ರವಾಸಿ ತಾಣಗಳಿಗೆ ಹೊಸತನ ನೀಡುವ ಕೆಲಸ ಚುರುಕುಕೊಳ್ಳುತ್ತಿವೆ ಎಂಬ ಆಶಾಭಾವ ಮೂಡಿಸುತ್ತಿದೆ.
ಪುರಸಭೆ ಉಸ್ತುವಾರಿ:
ದೇವನಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಕೋಟೆ ಸಮೀಪ ಇರುವ ಸಣ್ಣ ಕೆರೆಯಲ್ಲಿ ಪುರಸಭೆ ವತಿಯಿಂದ ನೂತನವಾಗಿ ದೋಣಿ ವಿಹಾರ ಆರಂಭಿಸಿದೆ. ಇದರ ನಿರ್ವಹಣೆಗೆ 5 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿದ್ದು, ಈ ಅವಧಿಯಲ್ಲಿ ದೋಣಿವಿಹಾರದ ಸಂಪೂರ್ಣ ನಿರ್ವಹಣೆ ಮಾಡಲಿದ್ದಾರೆ. ಪ್ರಸ್ತುತ ಎರಡು ದೋಣಿಗಳನ್ನು ಪ್ರಾಯೋಗಿವಾಗಿ ಆರಂಭಿಸಿದ್ದು ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಮತ್ತಷ್ಟು ದೋಣಿಗಳನ್ನು ಕೆರೆಗೆ ಇಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
150 ರೂ ದರ ನಿಗಧಿ:
ಪ್ರಸ್ತುತ ದೋಣಿವಿಹಾರಕ್ಕೆ ಒಬ್ಬರಿಗೆ 150 ರೂಪಾಯಿ ದರ ನಿಗಧಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ದರ ಏರಿಗೆ ಅಥವಾ ಇಳಿಗೆ ಬಗ್ಗೆ ನಿರ್ಧರಿಸಲಾಗುತ್ತದೆ. ಪ್ರತಿ ದೋಣಿವಿಹಾರಿಗಳಿಗೂ ಕಡ್ಡಾಯವಾಗಿ ಲ್ೈಜಾಕೆಟ್ ನೀಡಲಾಗುತ್ತದ. ನುರಿತ ದೋಣಿ ನಡೆಸುವವರನ್ನು ನಿಯೋಜಿಸಲಾಗಿದೆ, ಕೆರೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಪುರಸಭೆ ತಿಳಿಸಿದೆ.
ಶೌಚಗೃಹ ನಿರ್ಮಾಣ:
ಪ್ರಾಯೋಗಿಕವಾಗಿ ದೋಣಿವಿಹಾರಕ್ಕೆ ಚಾಲನೆ ನೀಡಲಾಗಿದ್ದು, ಕೆರೆ ಆವರಣದಲ್ಲಿ ಸಾರ್ವಜನಿಕ ಶೌಚಗೃಹ ಜತೆಗೆ ವಾಹನಗಳ ನಿಲುಗಡೆ ಸ್ಥಳ ನಿರ್ಮಾಣ ಮಾಡಲಾಗುವುದು. ಇದೂ ಸೇರಿ ಗುತ್ತಿಗೆ ಕರೆಯಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವನಹಳ್ಳಿ ಐತಿಹಾಸಿಕ ಕೋಟೆ ಸಮೀಪದ ಸಣ್ಣಕೆರೆಯಲ್ಲಿ ದೋಣಿ ವಿಹಾರ ಆರಂಭಿಸಿರುವುದು ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಈ ವಿನೂತನ ಯೋಜನೆ ಆರಂಭವಾಗಿದೆ. ಸಾರ್ವಜನಿಕರ ಬಹಳ ದಿನಗಳ ಬೇಡಿಕೆಯನ್ನು ಸಚಿವರು ಈಡೇರಿಸಿದ್ದಾರೆ. ಬೆಂಗಳೂರಿಗೆ ಸಮೀಪದಲ್ಲೇ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಅನುಕೂಲವಾಗಲಿದೆ.
--------------
ಪುರಸಭೆ ವತಿಯಿಂದ ಸಣ್ಣಕೆರೆಯಲ್ಲಿ ದೋಣಿ ವಿಹಾರ ಆರಂಭಿಸಲಾಗಿದೆ 5 ವರ್ಷದ ಗುತ್ತಿಗೆ ನೀಡಿದ್ದು, ಪ್ರಸ್ತುತ ಎರಡು ದೋಣಿಗಳು ವಿಹಾರ ಆರಂಭಿಸಿವೆ. ಈ ಭಾಗದಲ್ಲಿ ಸಾರ್ವಜನಿಕ ಶೌಚಗೃಹ ಹಾಗೂ ವಾಹನ ನಿಲುಗಡೆ ಸ್ಥಳ ನಿರ್ಮಾಣ ಮಾಡಲಾಗುವುದು, ಪ್ರವಾಸಿಗರಿಗೆ ದೋಣಿವಿಹಾರದ ಮೋಜು ಅನುಭವಿಸುವವರಿಗೆ ಇದು ಬಹಳ ಮೆಚ್ಚುಗೆಯಾಗಲಿದೆ.
ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ದೇವನಹಳ್ಳಿ
ಜಲ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಬೋಟಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ದೋಣಿ ವಿಹಾರಿಗಳಿಗೆ ಲೈಫ್ ಜಾಕೆಟ್ ಸೇರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಬೋಟಿಂಗ್ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬಹುದು.
ಕೆ.ಎಚ್.ಮುನಿಯಪ್ಪ, ಉಸ್ತುವಾರಿ ಸಚಿವ