bike weeling 
ಬೆಂಗಳೂರು ಗ್ರಾಮಾಂತರ

ವೀಲಿಂಗ್ ತಡೆಗೆ ನೂರೆಂಟು ಸವಾಲು

ಶಿವರಾಜ.ಎಂ

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್ ವಿಲೀಂಗ್ ಪುಂಡಾಟಿಕೆಗೆ ಸಂಪೂರ್ಣ ಕಡಿವಾಣ ಹಾಕುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಇತ್ತೀಚಿನ ದಿನಗಳಲ್ಲಿ ಬೈಕ್‌ಗಳ ಜತೆಗೆ ಆಟೋ, ಕಾರುಗಳ ವೀಲಿಂಗ್‌ಗೂ ಮುಂದಾಗಿರುವ ಕಿಡಿಗೇಡಿಗಳ ಕೃತ್ಯಗಳನ್ನು ಮಟ್ಟಹಾಕಲು ಕಾನೂನು ಬಲ ಸಾಲುತ್ತಿಲ್ಲ ಎಂದು ಪೊಲೀಸರೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿಗಳು ವೀಲಿಂಗ್ ಪುಂಡರಿಗೆ ರತ್ನಗಂಬಳಿ ಹಾಸಿದಂತಾಗಿದೆ. ವಾರಾಂತ್ಯಗಳಲ್ಲಂತು ಇಂಥ ಪುಂಡಾಟಿಕೆಗಳು ಮಿತಿ ಮೀರಿರುತ್ತವೆ. ಪೊಲೀಸರು ವಿಶೇಷ ಕಾರ್ಯಾಚರಣೆ, ಪೊಲೀಸ್ ಗಸ್ತು, ಸಿಸಿ ಟಿವಿ ಕ್ಯಾಮರಾಗಳ ನಿಗಾ ಸೇರಿ ಹಲವು ಕಸರತ್ತು ನಡೆಸುತ್ತಿದ್ದರೂ ಪುಂಡಾಟಿಕೆಗೆ ಪೂರ್ಣ ವಿರಾಮ ಬೀಳುತ್ತಿಲ್ಲ. ವೀಲಿಂಗ್ ಶೂರರನ್ನು ಶಿಕ್ಷಿಸಲು ಕಠಿಣ ಕಾನೂನು ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬ ಮಾತು ಪೊಲೀಸ್ ವಲಯದಲ್ಲೇ ಕೇಳಿಬರುತ್ತಿದೆ.
ಅಪಾಯವಾದರೆ ಪೊಲೀಸರ ತಲೆಗೆ:
ಗುಂಪುಗುಂಪಾಗಿ ಸುಮಾರು 50-60 ಬೈಕ್‌ಗಳಲ್ಲಿ ಒಮ್ಮೆಲೆ ರಸ್ತೆಗಿಳಿಯುವ ಪುಂಡರು ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಾ, ರಸ್ತೆಯಲ್ಲಿ ಜೋರಾಗಿ ಕಿರುಚಾಡುತ್ತಾ ಅಕ್ಕಪಕ್ಕದ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸುತ್ತಾರೆ. ಈ ಬಗ್ಗೆ ಮಾಹಿತಿ ತಿಳಿದು ಅಂಥವರನ್ನು ಹಿಡಿಯಲು ಪೊಲೀಸರು ಹಿಂಬಾಲಿಸಿದರೆ ಅಂಥ ಸಂದರ್ಭದಲ್ಲಿ ಪುಂಡರ ಪೈಕಿ ಯಾರಾದರು ಬಿದ್ದು ಗಾಯಗೊಂಡರೆ ಅಥವಾ ಪ್ರಾಣಾಪಾಯ ತಂದುಕೊಂಡರೆ ಅದಕ್ಕೆ ಪೊಲೀಸರನ್ನೇ ಹೊಣೆ ಮಾಡಲಾಗುತ್ತದೆ. ಇದರಿಂದ ಸಿನಿಮಾ ಮಾದರಿಯಲ್ಲಿ ಚೇಸಿಂಗ್ ಮಾಡಲು ಪೊಲೀಸರು ಹಿಂದೇಟು ಹಾಕುತ್ತಾರೆ. ಬ್ಯಾರಿಕೇಡ್‌ಗಳನ್ನು ಹಾಕಿ ಅಂಥವರನ್ನು ತಡೆಯುವ ಪ್ರಯತ್ನ ಮಾಡಬಹುದಷ್ಟೇ ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕಿಡಿಕೇಡಿಗಳು ಲೀಲಾಜಾಲವಾಗಿ ಕೃತ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕೇವಲ ದಂಡದಿಂದ ತಡೆ ಸಾಧ್ಯ:
ಬೈಕ್ ವೀಲಿಂಗ್ ಮಾಡುವ ಕಿಡಿಗೇಡಿಗಳನ್ನು ವಶಕ್ಕೆ ಪಡೆಯುವ ಪೊಲೀಸರು ಅವರ ವಾಹನಗಳನ್ನು ಜಫ್ತಿ ಮಾಡಿ ದಂಡ ವಿಧಿಸುತ್ತಾರೆ. ಸವಾರರಿಗೆ ಎಚ್ಚರಿಕೆ ನೀಡುತ್ತಾರೆ, ಆದರೆ ಅವರಿಗೆ ಯಾವುದೇ ಕಾರಗೃಹ ಶಿಕ್ಷೆ ವಿಧಿಸಲು ಆಗುತ್ತಿಲ್ಲ. ಚಾಲನ ಪರವಾನಗಿ ಇಲ್ಲದಿದ್ದರೆ, ವಾಹನಕ್ಕೆ ವಿಮೆ ಇಲ್ಲದಿದ್ದರೆ ಮತ್ತಿತರ ದಾಖಲೆಗಳ ಪರಿಶೀಲನೆ ನಡೆಸಿ ದಂಡ ಹಾಕಬಹುದಷ್ಟೇ, ಜತೆಗೆ ಅವರ ಪಾಲಕರನ್ನು ಸಂಪರ್ಕಿಸಿ ವಾರ್ನಿಂಗ್ ಮಾಡಬಹುದಷ್ಟೇ ಅದಕ್ಕೂ ಒಂದು ಹೆಜ್ಜೆ ಮುಂದೆ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಪೊಲೀಸರ ಅಳಲಾಗಿದೆ.
ದಂಡಕ್ಕಿಂತ ವಾಹನದ ಬೆಲೆಯೇ ಕಡಿಮೆ!
ಬೈಕ್ ವಿಲೀಂಗ್‌ಗೆ ಸಂಬಂಧಪಟ್ಟಂತೆ ದಾಖಲಾತಿ ಪರಿಶೀಲಿಸಿ ಅವುಗಳ ಆಧಾರದ ಮೇಲೆ 10 ರಿಂದ 25 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ವಾಹನವನ್ನು ಜಪ್ತಿ ಮಾಡಿ ಠಾಣೆ ಆವರಣದಲ್ಲಿ ನಿಲುಗಡೆ ಮಾಡಲಾಗುತ್ತದೆ. ಅವುಗಳನ್ನು ನ್ಯಾಯಾಲಯದಲ್ಲಿ ದಂಡ ಕಟ್ಟಿ ಬಿಡಿಸಿಕೊಳ್ಳಬೇಕಾಗುತ್ತದೆ. ದುರಂತವೆಂದರೆ ವಾಹನಗಳ ಮೌಲ್ಯಕ್ಕಿಂತ ದಂಡದ ಮೊತ್ತವೇ ಹೆಚ್ಚಿರುತ್ತದೆ, ಅಲ್ಲದೆ ವಕೀಲರ ಶುಲ್ಕ ಕಟ್ಟಬೇಕು ಇದಕ್ಕೆ ಹೋಲಿಸಿದರೆ ವಾಹನಗಳ ಮೌಲ್ಯವೇ ಕಡಿಮೆ ಇರುತ್ತದೆ, ಅಲ್ಲದೆ ವಿಲೀಂಗ್‌ಗೆ ಬಳಸುವ ವಾಹನಗಳು ಸಾಕಷ್ಟು ಹಳೆಯದಾಗಿರುತ್ತವೆ ಮರುಮಾರಾಟ ಮಾಡಿದರೆ ಹತ್ತಿಪ್ಪತ್ತು ಸಾವಿರ ರೂಪಾಯಿ ಬಾಳುವುದು ಕಷ್ಟ ಎಂಬಂತಿರುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ಇಂಥ ಪ್ರಕರಣಗಳಲ್ಲಿ ವಾಹನಗಳನ್ನು ಬಿಡಿಸಿಕೊಂಡು ಹೋಗುವುದಿಲ್ಲ. ಅವುಗಳು ಠಾಣೆಗಳ ಆವರಣದಲ್ಲಿಯೇ ವರ್ಷಾನುಗಟ್ಟಲೆ ನಿಂತು ಕೊಳೆಯುತ್ತಿರುತ್ತವೆ. ವಿಶೇಷವೆಂದರೆ ಪುಂಡರು ವಿಲೀಂಗ್‌ಗೆ ಬಳಸುವ ವಾಹನಗಳು ಇಂಥವೇ ಇರುತ್ತವೆ ಪೊಲೀಸರು ಹಿಡಿದರೂ ಅವುಗಳನ್ನು ಬಿಟ್ಟು ಬರಬಹುದು ಎಂಬುದು ಪುಂಡರ ಲೆಕ್ಕಾಚಾರವಾಗಿದೆ ಎಂಬುದು ಪೊಲೀಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಪ್ರಾಣಾಪಾಯವಾದರಷ್ಟೇ ಶಿಕ್ಷೆ:
ವಿಲೀಂಗ್ ಪ್ರಕರಣಗಳಲ್ಲಿ ಯಾರಿಗಾದರೂ ಪ್ರಾಣಾಪಾಯವಾದರೆ ಮಾತ್ರ ಕಾರಾಗೃಹ ಶಿಕ್ಷೆಯಾಗುತ್ತದೆ. ಯಾರಾದರೂ ಗಾಯಗೊಂಡರೆ ಅದು ವಿಲೀಂಗ್ (ಅಜಾಗರೂಕ ಚಾಲನೆ) ಎಂದು ಸಾಬೀತಾಗಬೇಕಾಗತ್ತದೆ. ವಿಲೀಂಗ್ ಮಾಡಿ ಸಿಕ್ಕಿಬಿದ್ದವರು ಮದ್ಯಪಾನ ಮಾಡಿರಬೇಕು ಇಲ್ಲವೇ ಯಾವುದೇ ಮಾದಕ ವಸ್ತು ಸೇವಿಸಿರುವುದು ಸಾಬೀತಾಗಬೇಕು ಇಂಥ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಗೆ ಅವಕಾಶವಿದೆ, ಇಲ್ಲವಾದರೆ ದಂಡ ಪ್ರಯೋಗಕಕ್ಕೆ ಸೀಮಿತವಾಗುತ್ತದೆ. ಇವೆಲ್ಲ ಸವಾಲುಗಳಿಂದಾಗಿ ಹೆದ್ದಾರಿಗಳಲ್ಲಿ ಪುಂಡಾಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು ಸಾಧ್ಯವಾಗುತ್ತಿಲ್ಲ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಮತವಾಗಿದೆ.
ಹೆದ್ದಾರಿಗಳಲ್ಲಿ ಬೈಕ್ ವಿಲೀಂಗ್ ತಡೆಗೆ ಸಾಕಷ್ಟು ಕ್ರಮಕೈಗೊಳ್ಳಲಾಗಿದೆ, ವಿಶೇಷ ಕಾರ್ಯಾಚರಣೆ ಮೂಲಕವೂ ಇಂಥ ಕೃತ್ಯಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿದೆ. ವಾಹನಗಳನ್ನು ಜಪ್ತಿ ಮಾಡಿ, ದಂಡ ವಿಧಿಸಲಾಗುತ್ತಿದೆ. ಸವಾರರ ಪಾಲಕರಿಗೂ ಮಾಹಿತಿ ನೀಡಿ ಎಚ್ಚರಿಕೆ ನೀಡಲಾಗುತ್ತಿದೆ, ಒಂದು ವೇಳೆ ಇಂಥ ಪ್ರಕರಣಗಳಲ್ಲಿ ಸವಾರ ಅಪ್ರಾಪ್ತನಾಗಿದ್ದರ ಬೈಕ್ ಸವಾರ ಅಥವಾ ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ಮುರುಳೀಧರ್, ಇನ್‌ಸ್ೆಕ್ಟರ್, ಸಂಚಾರ ಠಾಣೆ ದೇವನಹಳ್ಳಿ