ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೃಷಿ ವಲಯ ಮಾಡಲು ನಮ್ಮ ಕಡೆಯಿಂದ ಯಾವುದೇ ರೀತಿ ಅಭ್ಯಂತರ ಇಲ್ಲ. ಇಲ್ಲಿನ ರೈತರಿಗೆ ಕೃಷಿ ಬಿಟ್ಟು ಯಾವುದೇ ಕೆಲಸ ಗೊತ್ತಿಲ್ಲ. ಆದ್ದರಿಂದ ಯಾವುದೇ ನಿರ್ಬಂಧವಿಲ್ಲದೇ, ಕೃಷಿಭೂಮಿಯನ್ನು ನಮಗೆ ಬಿಟ್ಟುಕೊಡಬೇಕು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಹೇಳಿದರು.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ರೈತರು ಹಮ್ಮಿಕೊಂಡಿದ್ದ ಭೂಮಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಚನ್ನರಾಯಪಟ್ಟಣದಲ್ಲಿ 2022ರಲ್ಲಿ ಪ್ರಾರಂಭವಾದ ಹೋರಾಟ ಇಷ್ಟು ಸತತ ನಾಲ್ಕು ವರ್ಷ ನಿರಂತರವಾಗಿ ನಡೆದಿದೆ. ಇದಕ್ಕೆ ರೈತರು, ಸಂಘಟನೆಗಳು, ವಿವಿಧ ಕ್ಷೇತ್ರದ ಪ್ರಮುಖರು ಕಾರಣವಾಗಿದ್ದಾರೆ. ಅವರೆಲ್ಲರ ಸಹಕಾರ ಇಂಥ ಐತಿಹಾಸಿಕ ಹೋರಾಟಕ್ಕೆ ಕಾರಣವಾಗಿದೆ ಅವರೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
2025ರ ಜು.15ರಂದು ಭೂಸ್ವಾಧೀನ ಕೈಬಿಡುವ ಬಗ್ಗೆ ಸರ್ಕಾರ ಘೋಷಣೆ ಮಾಡಿತ್ತು. ಡಿಸೆಂಬರ್‌ನಲಿ ಅಧಿಕೃತವಾಗಿ ರಾಜ್ಯ ಪತ್ರ ಹೊರಡಿಸಿದೆ. ಇಲ್ಲಿನ 1777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದೇವೆ ಎಂದು ವಾಗ್ದಾನ ಮಾಡಿದೆ ಎಂದು ಹೇಳಿದರು.
ಕೈಬಿಟ್ಟ ಹಿನ್ನೆಲೆಯಲ್ಲಿ ಸಂಭ್ರಮ:
ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೃಷಿಭೂಮಿ ಭೂಸ್ವಾಧೀನವನ್ನು ಸರ್ಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ಇಂಥ ಐತಿಹಾಸಿಕ ಕ್ಷಣವನ್ನು ಸ್ಮರಣೀಗೊಳಿಸುವ ನಿಟ್ಟಿನಲ್ಲಿ ಭೂಮಿ ಹಬ್ಬದ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು,
ಚನ್ನರಾಯಪಟ್ಟಣ ಹೋಬಳಿಯ 13ಹಳ್ಳಿಗಳಲ್ಲಿ ಹಬ್ಬದ ವಾತಾವರಣವಿದೆ. ಕಳೆದುಕೊಂಡಿದ್ದ ಭೂಮಿ ಉಳಿಸಿಕೊಂಡಿರುವ ಹಿನ್ನಲೆಯಲ್ಲಿ ರೈತರು ಭೂಮಿ ಹಬ್ಬದ ಮೂಲಕ ಭೂಮಿಗೆ ವಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಚನ್ನರಾಯಪಟ್ಟಣದ ರೈತ ಹೋರಾಟಗಾರರು ಭೂಸ್ವಾಧೀನ ವಿರೋಧಿ ಹೋರಾಟದ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿದರೂ, ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಒಗ್ಗಟ್ಟು ಕೆಲಸ ಮಾಡಿತು ಎಂದುಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಹೋರಾಟಗಾರರನ್ನು ಅಭಿನಂದಿಸಿದರು. ಇಲ್ಲಿನ ಹೋರಾಟ ಐತಿಹಾಸಿಕವೆನಿಸಿದೆ, ರಾಜ್ಯ ಸೇರಿ ದೇಶದ ಎಲ್ಲ ಕಡೆಯಿಂದಲೂ ಈ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ದೊರೆಯಿತು 13 ಹಳ್ಳಿಗಳ ರೈತರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಂಯುಕ್ತಾ ಹೋರಾಟ ಸಮಿತಿಯು ರಾಜ್ಯದ ಮೂಲೆಮೂಲೆಗೂ ಹೋರಾಟವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಯಿತು ಎಂದರು.