bharath jodo 
ಬೆಂಗಳೂರು ಗ್ರಾಮಾಂತರ

ಭಾರತ್​ಜೋಡೋಗೆ ಗ್ರಾಮೀಣರ ಬಲ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯುವ ಸಬಲೀಕರಣದೊಂದಿಗೆ ವಿವಿಧ ಸಮಾಜಪರ ಚಟುವಟಿಕೆಗಳಲ್ಲಿ ಯುವ ಶಕ್ತಿಯನ್ನು ಸಕ್ರಿಯವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ಭಾರತ್​ ಜೋಡೊ ಯುವ ಸಂಘ' ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಗುರಿ ಮೀರಿ ಯುವ ಜನತೆ ನೋಂದಣಿಯಾಗುವ ಮೂಲಕ ಯೋಜನೆಗೆ ಬಲ ತುಂಬಿದ್ದಾರೆ.
ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕುಗಳಲ್ಲಿ 101 ಪಂಚಾಯಿತಿಗಳ ಪೈಕಿ ಪ್ರತಿ ಗ್ರಾಪಂನಲ್ಲೂ 100 ಮಂದಿ ನೋಂದಣಿ ಗುರಿ ನೀಡಲಾಗಿತ್ತು. ಆದರೆ 150 ರಿಂದ 180 ಮಂದಿ ಯುವಜನತೆ ನೋಂದಣಿ ಮಾಡಿಕೊಳ್ಳುವ ಮೂಲಕ ಯುವ ಶಕ್ತಿ ಪ್ರದರ್ಶಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನಿಗದಿಪಡಿಸಿದ್ದ ಗುರಿಯನ್ನೂ ಮೀರಿ ಸಂಘಗಳ ರಚನೆ ಮತ್ತು ಸದಸ್ಯರ ನೋಂದಣಿ ಪ್ರಕ್ರಿಯೆ ದಾಖಲೆ ಮಟ್ಟದಲ್ಲಿ ಯಶಸ್ವಿಯಾಗಿದೆ. ಆದರೆ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಶೇ.60 ನೋಂದಣಿಯಾಗಿದೆ. ನಗರ ಪ್ರದೇಶಗಳಲ್ಲಿ ಈ ಕಾರ್ಯ ಪ್ರಗತಿಯಲ್ಲಿದ್ದರೂ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಆನ್​ಲೈನ್​ ನೋಂದಣಿ ಕಾರ್ಯ ಪೂರ್ಣಗೊಂಡಿದ್ದು, ಆಫ್​ಲೈನ್​ ಮೂಲಕ ಮತ್ತೆ ನೋಂದಣಿ ಆರಂಭವಾಗಲಿದ್ದು ಶೇ. 100 ಗುರು ಸಾಧಿಸುವತ್ತ ಜಿಲ್ಲಾಡಳಿತ ಮುಂದಡಿ ಇಟ್ಟಿದೆ.
4 ತಾಲೂಕಿನಲ್ಲೂ ಸದಸ್ಯತ್ವ ಅಭಿಯಾನ:
ಯುವಕ-ಯುವತಿಯರ ಸದಸ್ಯತ್ವ ನೋಂದಣಿಯನ್ನು ಜಿಲ್ಲೆಯ 4 ತಾಲೂಕುಗಳಲ್ಲೂ ಆರಂಭಿಸಿದ್ದು ಜಿಲ್ಲೆಯಲ್ಲಿ 170 ಭಾರತ್​ ಜೋಡೊ ಯುವ ಸಂಘಗಳ ರಚನೆಯಾಗಲಿವೆ ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಜಿಲ್ಲೆಯ 101 ಗ್ರಾಪಂಗಳ ವ್ಯಾಪ್ತಿಯಲ್ಲಿ ಪ್ರತಿ ಪಂಚಾಯಿತಿಗೆ ಒಂದರಂತೆ 101 ಸಂಘ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 6 ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 63 ಸಂಘಗಳ ಗುರಿ ನಿಗಧಿಪಡಿಸಲಾಗಿದೆ, ಇದರಲ್ಲಿ ಪಟ್ಟಣ ಪಂಚಾಯಿತಿಗೆ 4 ಸಾವಿರ ಜನಸಂಖ್ಯೆಗೆ 1, ಪುರಸಭೆಗೆ 6 ಸಾವಿರ ಹಾಗೂ ನಗರಸಭೆಗೆ 8 ಸಾವಿರ ಜನಸಂಖ್ಯೆಗೊಂದು ಸಂಘದಂತೆ ನಿಗಧಿಪಡಿಸಲಾಗಿದೆ.
ಸಂಘದ ಸದಸ್ಯರು ಯಾರು?
ವಯೋಮಿತಿಯ ಸ್ಥಳಿಯ ನಿವಾಸಿಗಳಿಗೆ ಅವಕಾಶವಿರುವ ಪ್ರತಿ ಸಂಘದಲ್ಲಿ ಕಡ್ಡಾಯವಾಗಿ 100 ಸದಸ್ಯರು ಇರಲಿದ್ದಾರೆ. ಪ್ರತಿ ಸಂಘಕ್ಕೂ 15 ಸದಸ್ಯರ ಕಾರ್ಯಕಾರಿ ಸಮಿತಿ ಇರಲಿದ್ದು, ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಇಬ್ಬರು ಕಾರ್ಯದರ್ಶಿಗಳು, ಖಜಾಂಚಿ ಹಾಗೂ ನಿರ್ದೇಶಕರು ಇರುತ್ತಾರೆ. ಅಧ್ಯಕ್ಷ, ಉಪಾಧ್ಯಕ್ಷರಲ್ಲಿ ಕಡ್ಡಾಯವಾಗಿ ಒಬ್ಬ ಮಹಿಳೆ ಇರಬೇಕು. ಅಲ್ಲದೆ, ಸಮಿತಿಯಲ್ಲಿ 5 ಮಹಿಳೆಯರು, 3 ಎಸ್​ಸಿ,ಎಸ್​ಟಿ ಹಾಗೂ 4 ಹಿಂದುಳಿದ- ಅಲ್ಪಸಂಖ್ಯಾತರಿಗೆ ಮೀಸಲು ಕಲ್ಪಿಸಲಾಗಿದೆ.
ಯಾವೆಲ್ಲಾ ಚಟುವಟಿಕೆಗಳಿರಲಿವೆ?
ಪ್ರತಿ ಸಂಘಕ್ಕೆ 10ಲಕ್ಷ ರೂಪಾಯಿಯಷ್ಟು ಅನುದಾನವನ್ನು ಸರ್ಕಾರ ನೀಡಲಿದೆ. ಇದರ ಮೂಲಕ ಚಟುವಟಿಕೆಗಳನ್ನು ಮಾಡಲೇಬೇಕು. ಕ್ರೀಡೆ ಮತ್ತು ಫಿಟ್​ನೆಸ್​ಗೆ ಸಂಬಂಧಿಸಿದಂತೆ ಗ್ರಾಮೀಣ ಕ್ರೀಡಾಕೂಟಗಳು, ಯೋಗ ಶಿಬಿರಗಳು, ಸಾಂಪ್ರದಾಯಿಕ ಆಟಗಳ ಆಯೋಜನೆ ಮಾಡುವುದು, ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆರೆ, ಕಲ್ಯಾಣಿಗಳ ಸ್ವಚ್ಛತೆ, ಸ್ವಚ್ಛತಾ ಅಭಿಯಾನಗಳನ್ನು ನಡೆಸುವುದು ಪ್ರಮುಖವಾಗಿರಲಿವೆ ಇದರ ಜತೆಗೆ ಸಸಿ ನೆಡುವುದು, ಹವಾಮಾನ ಬದಲಾವಣೆ ಜಾಗೃತಿ ರಕ್ತದಾನ ಶಿಬಿರಗಳು, ಮಾನಸಿಕ ಆರೋಗ್ಯ ಜಾಗೃತಿ ಶಿಬಿರಗಳು, ಸಾಂಸ್ಕತಿಕ ಕಾರ್ಯಕ್ರಮಗಳು, ಭಾವೈಕ್ಯತೆ ಮೂಡಿಸುವ ಚಟುವಟಿಕೆಗಳನ್ನು ನಡೆಸಬೇಕು. ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸೈಬರ್​ ಸುರಕ್ಷತೆ ಜಾಗೃತಿ, ಸಂಚಾರ ನಿಯಮಗಳ ಜಾಗೃತಿ ಮತ್ತಿತರ ಸಾಮಾಜಿಕ ಚಟುವಟಿಕೆಗಳು ಇದರಡಿ ನಡೆಯಲಿವೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭಾರತ್​ ಜೋಡೊ ಯುವ ಸಂಘದ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲೂ ನಗರ ಹಾಗೂ ಪಂಚಾಯಿತಿವಾರು ನೋಂದಣಿ ಪ್ರಕ್ರಿಯೆ ನಡೆಸಲಾಗಿದೆ. ಇದರಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಗುರಿಗಿಂತ ಹೆಚ್ಚಿನ ಸಾಧನೆಯಾಗಿದೆ. ನಗರ ಪ್ರದೇಶಗಳಲ್ಲೂ ನಿಗಧಿತ ಗುರಿ ಮುಟ್ಟಲು ಶ್ರಮಿಸಲಾಗುತ್ತಿದೆ.
> ಗೀತಾ ಉಪನಿರ್ದೇಶಕಿ, ಯುವಜನ ಮತ್ತು ಕ್ರೀಡಾ ಇಲಾಖೆ, ಬೆಂ. ಗ್ರಾಮಾಂತರ.