ನವೀನ್ ಶೆಟ್ಟಿ ಕೆರಾಡಿ, ಆನೇಕಲ್
ಒಂದು ಕಡೆ ಮೊಣಕಾಲುದ್ದದ ಗುಂಡಿಗಳು, ಮತ್ತೊಂದೆಡೆ ವೇಗದಲ್ಲಿ ಸಂಚರಿಸುವ ಭಾರಿ ವಾಹನಗಳು.. ಮಧ್ಯದಲ್ಲಿ ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು.
ಪಟ್ಟಣದಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನೊಮ್ಮೆ ನೋಡಿದರೆ ಇದು ಸಂಚಾರಕ್ಕೆ ನಿರ್ಮಿಸಿರುವ ರಸ್ತೆಯೋ ಅಥವಾ ಹೂಳೆತ್ತಿದ ಕೆರೆಯೋ ಎಂಬ ಅನುಮಾನ ಮೂಡುತ್ತದೆ. ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಸವಾರರಿಗೆ ಹೊಸ ಸವಾಲಾಗಿವೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡು ಕೆಲವೊಮ್ಮೆ ಆಳವೇ ಗೋಚರಿಸುವುದಿಲ್ಲ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು ಹೀಗೆ ವರ್ಷಪೂರ್ತಿ ಜನ ಸಂಕಷ್ಟ ಅನುಭವಿಸುವಂತಾಗಿದೆ.
ಆನೇಕಲ್ನಿಂದ ಬಹದ್ಧೂರ್ಪುರ, ಎ.ಪಿ.ಎಸ್ ಶಾಲೆ ಸೇರಿ ಹಲವು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚು. ಸೂಕ್ಷ$್ಮರಸ್ತೆಯಲ್ಲಿ ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರ್ನಿಲಕ್ಷ$್ಯ ತೋರುತ್ತಿದ್ದಾರೆ. ಕೆಲವೆಡೆ ರಸ್ತೆಯ ಕುರುಹೇ ಕಾಣದಂತಾಗಿದ್ದು, ಎದುರುಗಡೆಯಿಂದ ಬರುವ ವಾಹನಗಳಿಗೆ ಡಿಕ್ಕಿಯಾಗುವ ಅಪಾಯ ಹೆಚ್ಚಿದೆ. ರಸ್ತೆ ಗುಂಡಿ ತಪ್ಪಿಸುವುದು ವಾಹನ ಸವಾರರಿಗೆ ಅನಿವಾರ್ಯ. ಗುಂಡಿ ತಪ್ಪಿಸಲು ಹೋಗುವಷ್ಟರಲ್ಲಿ ಎದುರುಗಡೆಯಿಂದ ಭಾರಿ ವಾಹನ ಬಂದುಬಿಟ್ಟರೆ ದ್ವಿಚಕ್ರ ವಾಹನ ಸವಾರರು ಯಮಲೋಕಕ್ಕೆ ಹೋಗುವುದು ಗ್ಯಾರಂಟಿ.
ಭಾರಿ ವಾಹನ ಸಂಚಾರಕ್ಕೆ ಕಡಿವಾಣ ಹಾಕಿ : ಪಟ್ಟಣದ ರಸ್ತೆಗಳ ದುಸ್ಥಿತಿಗೆ ಭಾರಿ ವಾಹನಗಳ ನಿರಂತರ ಸಂಚಾರವೂ ಒಂದು ಕಾರಣ. ಹೊಸೂರು ಕಡೆಯಿಂದ ಅತ್ತಿಬೆಲೆ ಮಾರ್ಗವಾಗಿ ಬೆಂಗಳೂರಿಗೆ ತೆರಳಬೇಕಾದ ವಾಹನಗಳು ಅತ್ತಿಬೆಲೆ ಭಾಗದಲ್ಲಿ ವಿಧಿಸಲಾಗುವ ಶುಲ್ಕ ತಪ್ಪಿಸುವ ಉದ್ದೇಶದಿಂದ ಆನೇಕಲ್ ಪಟ್ಟಣದ ಮಾರ್ಗವಾಗಿ ಚಂದಾಪುರದತ್ತ ತೆರಳಿ, ರಾಷ್ಟ್ರೀಯ ಹೆದ್ದಾರಿ ಸೇರುತ್ತಿದ್ದು, ಪಟ್ಟಣದೊಳಗಿನ ರಸ್ತೆಗಳು ಭಾರಿ ವಾಹನಗಳ ಒತ್ತಡಕ್ಕೆ ಸಿಲುಕಿವೆ. ಜಲ್ಲಿ ಕಲ್ಲು, ಎಮ್.-ಸ್ಯಾಂಡ್ ಹಾಗೂ ಇತರ ನಿಮಾರ್ಣ ಸಾಮಗ್ರಿ ಸಾಗಿಸುವ ಟಿಪ್ಪರ್ ಲಾರಿ ನಿರಂತರ ಸಂಚಾರದಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಇತ್ತೀಚೆಗೆ ಅಕ್ಷರ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಲಾರಿಗೆ ಸಿಲುಕಿ ಧಾರುಣವಾಗಿ ಮೃತಪಟ್ಟ ಘಟನೆ ಸ್ಥಳಿಯರಲ್ಲಿ ಭಯಮೂಡಿಸಿದೆ. ಶಾಲಾ-&ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ರಸ್ತೆಯಲ್ಲಿ ಭಾರಿ ವಾಹನಗಳ ಓಡಾಟ ನಿಯಂತ್ರಿಸಬೇಕು, ವೇಗಕ್ಕೆ ಕಡಿವಾಣ ಹಾಕಿ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.
ಫುಟ್ಪಾತ್ ನಿರ್ಮಿಸಿ : ಆನೇಕಲ್ ಪಟ್ಟಣದಿಂದ ಶ್ರೀರಾಮ ಮಂದಿರದ ಮಾರ್ಗವಾಗಿ ಹೊಸೂರಿಗೆ ಸಂಪರ್ಕ ಕಲ್ಪಿಸುವ ಸುಮಾರು ನಾಲ್ಕು ಕಿ.ಮೀ. ರಸ್ತೆಯ ಬಹುತೇಕ ಭಾಗದಲ್ಲಿ ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗವಿಲ್ಲ.ಶಾಲಾ-&ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಮಂದಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಇದೇ ರಸ್ತೆಯಲ್ಲಿ ಭಾರಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಪಾದಚಾರಿಗಳು ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ.
ಆನೇಕಲ್ ಹೊಸೂರು ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸುವುದಕ್ಕೂ ಭಯಪಡುವಂತಾಗಿದೆ. ರಸ್ತೆ ಗುಂಡಿ ತಪ್ಪಿಸಲು ಹೋಗುವಾಗ ಅಕ್ಕಪಕ್ಕದಲ್ಲಿ ಟಿಪ್ಪರ್ ಲಾರಿ ಬಂದರೆ ಏನಾಗುತ್ತದೆ ಎಂಬ ಆತಂಕ ಹೆಚ್ಚಿದೆ. ಶಾಲಾ-&ಕಾಲೇಜು ಸಮಯದಲ್ಲಿ ಸಂಚಾರ ಅಪಾಯಕಾರಿ. ಕನಿಷ್ಠ ಆ ಸಮಯದಲ್ಲಾದರೂ ಭಾರಿ ವಾಹನ ಸಂಚಾರ ನಿಯಂತ್ರಿಸಬೇಕು.> ವರ್ಷಾ ವಿದ್ಯಾರ್ಥಿನಿ
ರಸ್ತೆಯಲ್ಲಿ ಓಡಾಡುವುದೇ ದುಸ್ತರ, ಜನಪ್ರತಿನಿಧಿಗಳು ಸಮಸ್ಯೆ ಗಮನಕ್ಕೆ ಬಂದಿಲ್ಲದಂತೆ ವರ್ತಿಸುತ್ತಿದ್ದಾರೆ. ರಸ್ತೆ ಗುಂಡಿಗಳಿಂದ ಜನರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈಗಾಗಲೇ ಹಲವರು ಕೈಕಾಲು ಮುರಿದುಕೊಂಡಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.> ಮಮತಾ ಮುರಳಿಕಾಟಿ ಸ್ಥಳಿಯ