ಪ್ರಮುಖ ಮುಖ್ಯಾಂಶಗಳು
ತ್ಯಾಮಗೊಂಡ್ಲು:
ಇಲ್ಲಿನ ಬೆಸ್ಕಾಂ ಶಾಖಾ ಕಚೇರಿ ಕಾರ್ಯವ್ಯಾಪ್ತಿಗೆ 7 ಪಂಚಾಯಿುತಿಗಳ 90ಕ್ಕೂ ಹೆಚ್ಚು ಗ್ರಾಮಗಳು. 2150 ವಿದ್ಯುತ್ ಪರಿವರ್ತಕಗಳು, ಅಧಿಕ ವೋಲ್ಟೇಜ್ನ 178, 40 ಅಶ್ವಶಕ್ತಿಯ 390, ವಾಣಿಜ್ಯ 3800, ಗೃಹ ಬಳಕೆಯ 13,200 ಸ್ಥಾವರಗಳಿವೆ. ತಿಂಗಳಿಗೆ 14 ಕೋಟಿ ರೂ. ಆದಾಯ ಸಹ ಹರಿದುಬರುತ್ತದೆ. ಆದರೆ ನಿರ್ವಹಣೆಗೆ ಇರುವುದು ಅಧಿಕಾರಿ, ಸಿಬ್ಬಂದಿ ಸೇರಿ 16 ಮಂದಿ ಮಾತ್ರ.
1959ರಲ್ಲಿ ಪವರ್ ಆ್ಯಂಡ್ ಲೈಟಿಂಗ್ ಹೆಸರಿನಲ್ಲಿ ತ್ಯಾಮಗೊಂಡ್ಲುವಿನಲ್ಲಿ ಕರ್ನಾಟಕ ವಿದ್ಯುತ್ ಮಂಡಳಿ ಕಚೇರಿ ಪ್ರಾರಂಭವಾಯಿತು. ತ್ಯಾಮಗೊಂಡ್ಲು ಮತ್ತು ಸೋಂಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಣಲು ಶುರುವಾದ ಮೇಲೆ ಅಧಿಕಾರಿಗಳ ಅನುಕೂಲಕ್ಕೆ ದಾಬಸ್ಪೇಟೆಗೆ ಬೆಸ್ಕಾಂ ಉಪವಿಭಾಗ ಮಂಜೂರಾಯಿತು. ಆಗ ತ್ಯಾಮಗೊಂಡ್ಲು ಲೆಕ್ಕಪತ್ರ ವಿಭಾಗ ಸಹ ಜನಪ್ರತಿನಿಧಿಗಳ ರ್ನಿಲಕ್ಷ$್ಯದಿಂದ ಅಲ್ಲಿಗೆಯೇ ವರ್ಗಾವಣೆಯಾಯಿತು. ತ್ಯಾಮಗೊಂಡ್ಲು ಹೋಬಳಿಯ ಎಲ್ಲ ಗ್ರಾಮಗಳ ಗ್ರಾಹಕರು ಸಮಸ್ಯೆಯಿದ್ದರೆ ದಾಬಸ್ಪೇಟೆಗೆ ಹೋಗುವ ಅನಿವಾರ್ಯತೆಯಿದೆ. ತ್ಯಾಮಗೊಂಡ್ಲುವಿಗೆ ಉಪವಿಭಾಗ ಆಗುವ ಅರ್ಹತೆ ಇದ್ದರೂ ದಾಬಸ್ಪೇಟೆಗೆ ಉಪವಿಭಾಗ ಬಿಟ್ಟುಕೊಟ್ಟು, ಲೆಕ್ಕಪತ್ರ ವಿಭಾಗವೂ ಅಲ್ಲಿಗೆ ವರ್ಗಾವಣೆಯಾಗಿ ಹೋಬಳಿ ವಿದ್ಯುತ್ ಗ್ರಾಹಕರ ಹಿತಾಸಕ್ತಿಯನ್ನೇ ಜನಪ್ರತಿನಿಧಿಗಳು ಬಲಿಕೊಟ್ಟರು ಎಂದು ಜನ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಳೆಗಾಲದಲ್ಲಿ ಸಿಬ್ಬಂದಿ ಪಾಡು ಹೇಳತೀರದು. ಇತ್ತೀಚೆಗಂತೂ ಗಾಳಿಮಳೆ ಹೆಚ್ಚಾಗಿ ವಿದ್ಯುತ್ ಅಡಚಣೆ ಉಂಟಾಗುತ್ತಲೇ ಇದೆ. ಇರುವ ಒಂದು ಒಮಿನಿ ವ್ಯಾನ್ನಲ್ಲೇ ಪರಿಕರಗಳನ್ನು ತುಂಬಿಕೊಂಡು ಅಡಚಣೆ ಸರಿಮಾಡುವ ಜವಾಬ್ದಾರಿ ಪವರ್ಮನ್ಗಳ ಮೇಲೆ ಒತ್ತಡ ತರುತ್ತಿದೆ. ಕಂಬದ ಮೇಲೆ ಹತ್ತಿ ಸಮಸ್ಯೆ ಸರಿಮಾಡಬೇಕಾದರೆ ಸಿಬ್ಬಂದಿ ಪ್ರಾಣವನ್ನೇ ಪಣಕ್ಕೆ ಇಡಬೇಕಾಗುತ್ತದೆ. ಸಮಯಕ್ಕೆ ವಿದ್ಯುತ್ ನೀಡದಿದ್ದರೆ ಇಲಾಖೆಗೆ ಹಾಗೂ ಸಿಬ್ಬಂದಿಗೆ ಸಾರ್ವಜನಿಕರು ಉಚಿತ ಬೈಗುಳದ ಗ್ಯಾರಂಟಿ ನೀಡುತ್ತಾರೆ. ಇದೆಲ್ಲ ಸರಿ ಹೋಗಬೇಕಾದರೆ ಶಾಖಾ ಕಚೇರಿಗೆ ಮಂಜೂರಾಗಿರುವ 11 ಪವರ್ಮನ್, 8 ಸಹಾಯಕ ಪವರ್ಮನ್ ಹಾಗೂ 4 ಕಿರಿಯ ಪವರ್ಮನ್ಗಳನ್ನು ತ್ವರಿತವಾಗಿ ನೇಮಕಮಾಡಿಕೊಂಡರೆ ತಕ್ಕಮಟ್ಟಿಗೆ ಒತ್ತಡ ಕಡಿಮೆಯಾಗುತ್ತದೆ.
ಶಾಖಾ ಕಚೇರಿ ಆವರಣದಲ್ಲೇ ಸಹಾಯಕ ಅಭಿಯಂತ ಮತ್ತು ಪವರ್ಮನ್ಗಳ ವಸತಿ ನಿಲಯದ ಕಾಮಗಾರಿ ನಡೆಯುತ್ತಿದೆ. ಇದರಿಂದ ಕೇಂದ್ರ ಸ್ಥಾನದಲ್ಲೇ ಸಿಬ್ಬಂದಿ ಇರಲು ವ್ಯವಸ್ಥೆ ಆಗುತ್ತಿದೆ. ಕಡಿಮೆಯಿರುವ 12 ಸಿಬ್ಬಂದಿಯನ್ನು ಶ್ರೀ ಭರ್ತಿ ಮಾಡಿ ವಿದ್ಯುತ್ ಗ್ರಾಹಕರ ಸಮಸ್ಯೆ ದೂರಮಾಡಬೇಕು. ತ್ಯಾಮಗೊಂಡ್ಲು ಶಾಖಾ ಕಚೇರಿಯನ್ನು ಉಪವಿಭಾಗಕ್ಕೆ ಮೇಲ್ದರ್ಜೆಗೇರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.