ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದು ಜತೆಗೆ ಎಲ್ಲಿಯಾದರೂ ವಿದ್ಯುತ್ ಕಡಿತವಾದರೆ ತಕ್ಷಣ ಸರಿಪಡಿಸಲು ಬೆಸ್ಕಾಂ ಹೊಸ ಆ್ಯಪ್ ಸಿದ್ದಪಡಿಸಿದ್ದು ಈ ಮೂಲಕ ವಿದ್ಯುತ್ ವ್ಯತ್ಯಯ ನಿರ್ವಹಣೆಗೆ ಮುಂದಾಗಿದೆ.
ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದು ಬೆಸ್ಕಾಂ ಇಲಾಖೆಗೆ ಸವಾಲಿನ ಕೆಲಸವಾಗಿರುತ್ತದೆ, ವಿದ್ಯುತ್ ತಂತಿಗಳು ತುಂಡಾಗುವುದು, ಲೋಡ್‌ಶೆಡ್ಡಿಂಗ್, ವಿದ್ಯುತ್ ಪರಿವರ್ತಕಗಳು (ಟಿಸಿ) ಹಾಳಾಗುವುದು ಸೇರಿ ಹಲವು ಸಮಸ್ಯೆಗಳು ಎದುರಾಗುತ್ತವೆ, ಅದರಲ್ಲೂ ವಿಶೇಷವಾಗಿ ಟಿಸಿಗಳು ಹಾಳಾದರೆ ಅವುಗಳ ಮಾಹಿತಿ ಪಡೆದು ಅವುಗಳನ್ನು ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಆಯಾ ಭಾಗದಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಾಗುತ್ತದೆ ಇದನ್ನು ತಕ್ಷಣ ಸರಿಪಡಿಸುವ ನಿಟ್ಟಿನಲ್ಲಿ ಡಿಸ್ಟ್ರಿಬ್ಯೂಷನ್ ಟ್ರಾನ್ಸರೇಷನ್ ಲ್ೈ ಸೈಕಲ್ ಮ್ಯಾನೇಜೆಂಟ್ ಸಿಸ್ಟಮ್ (ಡಿಟಿಎಲ್‌ಎಂಎಸ್) ಎಂಬ ಆ್ಯಪ್ ಸಿದ್ದಪಡಿಸಿದೆ. ಇದರಿಂದ ವಿದ್ಯುತ್ ವ್ಯತ್ಯಯದಿಂದ ಟಿಸಿಗಳು ಹಾಳಾಗುವುದನ್ನು ತಡೆಯುವುದರ ಜತೆಗೆ ತಕ್ಷಣ ಅದನ್ನು ದುರಸ್ತಿಪಡಿಸಲು ಅನುಕೂಲವಾಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಟಿಸಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಪ್ರತಿಕ್ರಿಯಿಸಲು ಅದರ ಬಗ್ಗೆ ಮಾಹಿತಿ ಪಡೆಯಲು ಈ ಆ್ಯಪ್ ಸಹಕಾರಿಯಾಗಲಿದೆ, ಟಿಸಿ ಹಾಕಿದ ದಿನ, ಅದರಲ್ಲಿನ ಕಾಯ ಕ್ಷಮತೆ, ಇದರ ಸರ್ವಿಸ್ ಆದ ದಿನಾಂಕ ಸೇರಿ ಟಿಸಿಯ ಸಂೂರ್ಣ ಮಾಹಿತಿ ಲಭ್ಯವಾಗಲಿದೆ ಇದರ ಆಧಾರದಲಿ ಟಿಸಿಗಳ ನಿರ್ವಹಣೆ ಸುಲಭವಾಗಲಿದೆ ಎಂಬುದು ಇಲಾಖೆಯ ಅಭಿಮತವಾಗಿದೆ. ಈಗಾಗಲೇ ಹೊಸಕೋಟೆ ಉಪವಿಭಾಗದಲ್ಲಿ 1800ಕ್ಕೂ ಹೆಚ್ಚು ಟಿಸಿಗಳ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದೆ. ನೆಲಮಂಗಲ ವಿಭಾಗದಲ್ಲೂ ಈ ಕಾರ್ಯ ಪ್ರಗತಿಯಲ್ಲಿದೆ. 5 ಸಾವಿರ ಟಿಸಿಗಳನ್ನು ಆ್ಯಪ್ ವ್ಯಾಪ್ತಿಗೆ ತರುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಟಿಸಿಗಳನ್ನು ಈ ಮೂಲಕ ನಿರ್ವಹಣೆ ಮಾಡುವುದು ಬೆಸ್ಕಾಂ ಉದ್ದೇಶವಾಗಿದೆ.
ಸಮಸ್ಯೆಗಳನ್ನು ಗುರುತಿಸಲು ಸಹಕಾರಿ:
ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿಗಳು, ವಾಲಿರುವ ಕಂಬಗಳು, ಶಿಥಿಲಗೊಂಡಿರುವ ಕಂಬಗಳ ಬಗ್ಗೆ ಗಮನಹರಿಸಲಾಗುತ್ತದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಈಗಾಗಲೇ ಇಂಥ ಸಾವಿರಾರು ವಿದ್ಯುತ್ ಕಂಬಗಳನ್ನು ಗುರುತಿಸಲಾಗಿದ್ದು ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಬೆಸ್ಕಾಂ ನಿರತವಾಗಿದೆ.
ಅಪ್ಲಿಕೇಷನ್ ಮೂಲಕ ನಿರ್ವಹಣೆ:
ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ಟಿಸಿಗಳ ಪಾತ್ರ ಪಮುಖವಾಗಿರುತ್ತದೆ. ಇದರಿಂದ ಟಿಸಿಗಳ ನಿರ್ವಹಣೆ ಮತ್ತು ಅವುಗಳ ಮೇಲೆ ನಿಗಾ ಇರಿಸಲು ಡಿಟಿಎಲ್‌ಎಂಎಸ್ ಆ್ಯ್ ಸಹಕಾರಿಯಾಗಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಸಿಗಳ ಕಾರ್ಯನಿರ್ವಹಣೆ, ಮುಂಜಾಗ್ರತಾ ನಿರ್ವಹಣೆ, ದುರಸ್ತಿ ಹಾಗೂ ದಕ್ಷತೆಯ ಮೇಲೆ ನಿರಂತರ ನಿಗಾ ಇರಿಸಬಹುದಾಗಿದೆ. ಅದರ ಕಾರ್ಯ ನಿರ್ವಹಣೆಯ ಅವಧಿ, ಟಿಸಿ ನಿರ್ವಹಣೆಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಆ್ಯಪ್ ನಲ್ಲಿ ನಮೂದಿಸಲಿದ್ದಾರೆ.
ಜಿಲ್ಲೆಯಲ್ಲಿ ಬೆಸ್ಕಾಂ ವತಿಯಿಂದ ಎಲ್ಲ ಟಿಸಿಗಳಿಗೂ ಕೋಡ್‌ಗಳನ್ನು ನೀಡಲಾಗುತ್ತಿದೆ. ಇದರ ಆಧಾರದ ಮೇಲೆ ಆ್ಯಪ್ ಮೂಲಕ ಬೆಸ್ಕಾಂ ಅಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿರುವ ಟಿಸಿಗಳನ್ನು ನಿರ್ವಹಣೆ ಮಾಡಿ ವಿದ್ಯುತ್ ಸೋರಿಕೆ ತಡೆಗಟ್ಟಿ ಸಮರ್ಪಕ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಲಿದೆ. ರೈತರು ಗ್ರಾಹಕರಿಗೆ ತಡೆರಹಿತ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಪ್ರಮುಖ ಪಾತ್ರವಹಿಸಲಿದೆ ಎಂಬ ಮಾತು ಕೇಳಿಬರುತ್ತಿದೆ.
ವಿದ್ಯುತ್ ಪರಿವರ್ತಕಗಳ ಸಮರ್ಪಕ ನಿರ್ವಹಣೆಗಾಗಿ ಡಿಟಿಎಲ್‌ಎಂಎಸ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ದೇವನಹಳ್ಳಿ ಹಾಗೂ ಹೊಸಕೋಟೆ ವಿಭಾಗಗಳಲ್ಲಿ ಟಿಸಿಗಳ ಮಾಹಿತಿಗಳನ್ನು ಅಪ್ಲೋಡ್ ಮಾಡಲಾಗಿದೆ. ಪ್ರತಿ ಟಿಸಿಗಳ ಸಮರ್ಪಕ ನಿರ್ವಹಣೆಗೆ ಇದು ಬಹಳ ಅನುಕೂಲವಾಗಲಿದೆ. ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದು ಇಲಾಖೆಯ ಆದ್ಯತೆಯಾಗಿದೆ.
ವೆಂಕಟೇಶಪ್ಪ ಕಾರ್ಯಪಾಲಕ ಇಂಜಿನಿಯರ್ ಹೊಸಕೋಟೆ ವಿಭಾಗ ಬೆಸ್ಕಾಂ