ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳ ತಡೆ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಇಲಾಖೆ ಸಜ್ಜಾಗಿದ್ದು ಸಿಬ್ಬಂದಿಗೆ ವಿಶೇಷ ತರಬೇತಿ ಮೂಲಕ ಅಣಿಗೊಳಿಸಿದೆ.
ಮಳೆಗಾಲದಲ್ಲಿ ಹೆಚ್ಚಾಗಿ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯ. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಾಸುಗಟ್ಟಲೆ ವಿದ್ಯುತ್ ಕಡಿತಗೊಂಡು ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗುತ್ತದೆ ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ತಂತಿಗಳು ಹಾದುಹೋಗಿರುವ ಜಾಗಗಳಲ್ಲಿ ಮರದಕೊಂಬೆಗಳು ತಗಲುವಂತಿದ್ದರೆ ತಕ್ಷಣ ಅವುಗಳನ್ನು ತೆರವುಗೊಳಿಸುವಂತೆ ಸಿಬ್ಬಂದಿಗೆ ಬೆಸ್ಕಾಂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಹಾಗೂ ತಂತಿಗಳ ಮೇಲೆ ಮರಗಳ ಕೊಂಬೆಗಳು ಚಾಚಿಕೊಂಡಿರುವತ್ತವೆ ಮಳೆಗಾಳಿಗೆ ವಿದ್ಯುತ್ ಶಾರ್ಟ್ ಆಗಿ ವಿದ್ಯುತ್ ಪೂರೈಕೆ ಕಡಿತಗೊಳ್ಳುತ್ತದೆ ಹಾಗಾಗಿ ಮಳೆ ಪ್ರಾರಂಭಕ್ಕೂ ಮುನ್ನ ಬೆಸ್ಕಾಂ ಸಿಬ್ಬಂದಿ ಅಂತಹ ಸ್ಥಳಗಳಲ್ಲಿರುವ ಮರಗಳ ಕೊಂಬೆಗಳನ್ನು ಗುರುತಿಸಿ ತೆರವು ಮಾಡಲು ಸೂಚನೆ ನೀಡಲಾಗಿದೆ.
ಆ್ಯಪ್ ಮೂಲಕ ಟಿಸಿ ನಿರ್ವಹಣೆ:
ಬೆಸ್ಕಾಂನಿಂದ ಟಿಸಿ (ಟ್ರಾನ್‌ಸ್ಾರ್ಮರ್) ನಿರ್ವಹಣೆ ಡಿಟಿಎಲ್ ಎಂಎಸ್ (ವಿತರಣಾ ಟ್ರಾನ್‌ಸ್ಾರ್ಮರ್ ನಿರ್ವಹಣಾ ವ್ಯವಸ್ಥೆ) ಎಂಬ ವಿಶೇಷ ಮೊಬೈಲ್ ಆ್ಯಪ್ ಮೂಲಕ ಟಿಸಿಗಳ ನಿರ್ವಹಣೆ ಮಾಡಲಾಗುತ್ತಿದೆ, ಈ ತಂತ್ರಾಂಶದ ಮೂಲಕ ಟಿಸಿಗಳ ಸಕಾಲಿಕ ದುರಸ್ತಿ, ತ್ರೈಮಾಸಿಕ ನಿರ್ವಹಣೆ, ಟಿಸಿಗಳ ದಕ್ಷತೆಯನ್ನು ಡಿಜಿಟಲ್ ಆಗಿ ನಿರ್ವಹಣೆ ಮಾಡುವ ವ್ಯವಸ್ಥೆ ಇದಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿನ ಎಲ್ಲ ಟಿಸಿಗಳ ಕಾರ್ಯಕ್ಷಮತೆ ಬಗ್ಗೆ ಗಮನಿಸಲು ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ತಂತಿಗಳ ಬಳಿ ಮರದ ಕೊಂಬೆಗಳು ಚಾಚಿಕೊಂಡಿರುವುದು, ವಿದ್ಯುತ್ ಪರಿವರ್ತಕಗಳ ಮೇಲೆ ಗಿಡ ಬಳ್ಳಿ ಬೆಳೆದುನಿಂತಿರುವುದು, ಶಿಥಿಲಗೊಂಡ ವಿದ್ಯುತ್ ಕಂಬಗಳು ಭಾಗಿರುವುದು ಸೇರಿ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಪೂರೈಕೆ ಪರಿಕರಗಳನ್ನು ಮಳೆಗಾಲಕ್ಕೆ ಮುನ್ನವೆ ಪರಿಶೀಲಿಸಿ ಅವುಗಳನ್ನು ದುರಸ್ತಿ ಅಥವಾ ಬದಲಿಸುವ ಕೆಲಸ ಮಾಡಬೇಕು ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.
ವಿದ್ಯುತ್ ಅಡಚಣೆ ಸೇರಿ ವಿದ್ಯುತ್ ಕಂಬ ಬಿದ್ದಿರುವುದು, ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಲುತ್ತಿರುವುದು ಸೇರಿ ಇನ್ಯಾವುದೇ ವಿದ್ಯುತ್ ಪ್ರಸರಣಕ್ಕೆ ಸಂಬಂಧಪಟ್ಟ ದೂರುಗಳಿದ್ದರೆ ತಕ್ಷಣ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡುವಂತೆ ಅಧಿಕಾರಿಗಳು ಜಿಲ್ಲೆಯಲ್ಲಿ ಹೆಚ್ಚೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಸಿಬ್ಬಂದಿ ಸ್ಪಂದಿಸುವ ಕಾರ್ಯ ಮಾಡಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಭಾಗಿರುವ ಕಂಬಗಳನ್ನು ಗುರುತಿಸಿ ಬದಲಾಯಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಬೆಸ್ಕಾಂನಿಂದ ವರ್ಷಪೂರ್ತಿ ನಿರ್ವಹಣೆ ಕೆಲಸ ನಡೆಯುತ್ತಿರುತ್ತದೆ, ಆದರೆ ಮಳೆಗಾಲ ಆರಂಭದ ವೇಳೆ ಇದರ ವೇಗ ಮತ್ತಷ್ಟು ಹೆಚ್ಚಿಸಲಾಗುತ್ತದೆ. ಮುಂಗಾರು ವೇಳೆ ಎಲ್ಲಿಯೂ ವಿದ್ಯುತ್ ಪೂರೈಕೆಗೆ ಅಡೆಚಣೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಎಲ್ಲ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಪರಿಕರಗಳ ದಾಸ್ತಾನು ಇಟ್ಟುಕೊಳ್ಳಬೇಕು ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಲಾಗಿದೆ.
ಡಾ. ಎನ್.ಶಿವಶಂಕರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು ಸೇರಿ ಹಾದುಹೋಗಿರುವ ವಿದ್ಯುತ್ ತಂತಿಗಳ ನಿರ್ವಹಣೆ ಮಾಡಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಕೆಲವು ವೇಳೆ ವಿಶೇಷ ಕಾರ್ಯಾಚರಣೆ ಮೂಲಕವೂ ವಿದ್ಯುತ್ ಅಡಚಣೆ ತಡೆಗಟ್ಟುವ ಪ್ರಯತ್ನ ನಡೆಯುತ್ತಿರುತ್ತದೆ. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಸಿಬ್ಬಂದಿ ಹೆಚ್ಚು ಅಲರ್ಟ್ ಆಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ಶಿವಕುಮಾರ್, ಇಇ ಬೆಂ ಗ್ರಾಮಾಂತರ