Beer sales record in the district
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕಳೆದೆರೆಡು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಬೇಸಿಗೆ ವೇಳೆ ಬಿಯರ್ ಮಾರಾಟದಲ್ಲಿ ದಾಖಲೆ ಎನಿಸಿದ್ದು, ಮದ್ಯದಂಡಿಗಳ ಖಜಾನೆ ಭರ್ತಿಯಾದಂತಾಗಿದೆ.
ಈ ವರ್ಷ ಬೇಸಿಗೆಯಲ್ಲಿ ಬಿಸಿಲ ತಾಪಮಾನ ಏರಿದಂತೆ ತಂಪನೆಯ ಬಿಯರ್ ಮಾರಾಟದಲ್ಲೂ ಏರಿಕೆ ಕಂಡುಬಂದಿದೆ. ಈ ವರ್ಷದ ಪ್ರತಿದಿನ ಗರಿಷ್ಠ 37 ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿತ್ತು. ಈ ವೇಳೆ ಮದ್ಯಪ್ರಿಯರು ಬಿಯರ್‌ಗೆ ಮೊರೆ ಹೋಗಿದ್ದರಿಂದ ದಾಖಲೆಯ ಮಾರಾಟವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ವಲಯಗಳು ವಿಸ್ತರಣೆಯಾದಂತೆ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ ಇಂಥ ಕಾರ್ಮಿಕರು ಬಿಯರ್ ಸೇವನೆಗೆ ಮುಗಿಬೀಳುವುದೂ ಇದಕ್ಕೆ ಕಾರಣ ಎನ್ನಲಾಗಿದೆ.
2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ಬಿಯರ್ ಮಾರಾಟವಾಗಿದೆ. ಈ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ಹೊಸಕೋಟೆ ತಾಲೂಕಿನಲ್ಲಿ 85,418ಲೀ ಬಿಯರ್ ಮಾರಾಟವಾಗಿದ್ದರೆ, ದೇವನಹಳ್ಳಿ ತಾಲೂಕಿನಲ್ಲಿ 63,542 ಲೀ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 72,536 ಲೀ, ನೆಲಮಂಗಲ ತಾಲೂಕಿನಲ್ಲಿ 61,058 ಲೀ ಬಿಯರ್ ವಹಿವಾಟು ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನೆಲಮಂಗಲದಲ್ಲಿ ಶೇ.30.71ರಷ್ಟು ಮಾರಾಟ ಹೆಚ್ಚಾಗಿದೆ. ದೇವನಹಳ್ಳಿಯಲ್ಲಿ ಶೇ.29.5, ಹೊಸಕೋಟೆ ಶೇ.30. 68, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶೇ.43.19 ಕಳೆದ ವರ್ಷಕ್ಕಿಂತ ಗಣನೀಯ ಏರಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಮಾಹಿತಿ ಅನುಸಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2025- 26ರ ಸಾಲಿನ ಏಪ್ರಿಲ್ನಲ್ಲಿ 1,06,844 ಲೀ ಬಿಯರ್ ಮಾರಾಟವಾಗಿತ್ತು. 2026-27ನೇ ಸಾಲಿನ ಏಪ್ರಿಲ್ನಲ್ಲಿ 1,44,251. ಲೀ ಬಿಯರ್ ಮಾರಾಟವಾಗಿದೆ. 2025- 26ರ ಮೇನಲ್ಲಿ 1,05,128 ಲೀಟರ್ ಮಾರಾಟವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಬಿಯರ್ ವಹಿವಾಟು ಗಮನಿಸಿದರೆ ಕಳೆದ ವರ್ಷ ಎರಡು ತಿಂಗಳ ಅವಧಿಯಲ್ಲಿ 2,11,972ಲೀ, ಪ್ರಸಕ್ತ ವರ್ಷದಲ್ಲಿ 2,82,554 ಲೀ ಬಿಯರ್ ಬಿಕರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ 70,582ಲೀ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಮಾರಾಟವಾಗುವ ಮೂಲಕ ಶೇ.33. 30 ವಹಿವಾಟು ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ಸಾಮಾನ್ಯವಾಗಿ ಬೇಸಿಗೆ ಸಂದರ್ಭಗಳಲ್ಲಿ ಮದ್ಯಪ್ರಿಯರು ಇನ್ನಿತರ ಮದ್ಯದ ಬದಲಿಗೆ ಬಿಯರ್ ಸೇವನೆಗೆ ಹೆಚ್ಚು ಆಸಕ್ತಿ ತೋರುತ್ತಾರೆ. ಈ ಭಾರಿ ಬಿಸಿಲಿನ ತಾಪಮಾನ ಹೆಚ್ಚಿದ್ದರಿಂದ ತಂಪನೆಯ ಬಿಯರ್‌ಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಇದರನ್ವಯ ಬಿಯರ್ ವಹಿವಾಟು ಸಹ ಉತ್ತಮವಾಗಿತ್ತು.
ಶ್ರೀನಿಧಿ, ಮದ್ಯ ಮಾರಾಟಗಾರರು ಹೊಸಕೋಟೆ
ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಬಿಯರ್ ವಹಿವಾಟು ದಾಖಲೆ ಮಟ್ಟದಲ್ಲಿ ನಡೆದಿದೆ. ಬಿಸಿಲಿನ ತಾಪಮಾನ ಹೆಚ್ಚಳದಿಂದ ಮದ್ಯಪ್ರಿಯರು ಸಾಮಾನ್ಯವಾಗಿ ತಣ್ಣನೆಯರ ಬಿಯರ್ ಸೇವನೆಗೆ ಹೆಚ್ಚು ಮೊರೆ ಹೋಗಿರಬಹುದು. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಉತ್ತಮ ವಹಿವಾಟು ನಡೆದಿದೆ.
ಛಲಪತಿ, ಅಬಕಾರಿ ಅಧಿಕಾರಿ ಬೆಂ.ಗ್ರಾಮಾಂತರ