bee-offspring 
ಬೆಂಗಳೂರು ಗ್ರಾಮಾಂತರ

ಜೇನು ಸಂತತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜೇನು ಸಂತತಿಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಇದೊಂದು ಅಪರೂಪದ ಸಂತತಿಯಾಗಿದ್ದು ಕೈಗಾರಿಕೆ ಹಾಗೂ ಆರೋಗ್ಯ ಉತ್ಪನ್ನಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ತಿಳಿಸಿದ್ದಾರೆ.
ಜೇನು ಸಂತತಿ ರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ತೋಟಗಾರಿಕೆ ನಿರ್ದೇಶಕರು,
ಜೇನು ಗೂಡುಗಳು ಸಾರ್ವಜನಿಕ ಕಟ್ಟಡಗಳು, ವಿದ್ಯಾ ಸಂಸ್ಥೆಗಳು, ವಸತಿ ನಿಲಯಗಳು ಹಾಗೂ ಮಕರಂದ ಲಭ್ಯವಿರುವ ಪ್ರದೇಶಗಳಲ್ಲಿ ಹೆಜ್ಜೇನುಗಳು ಗೂಡು ಕಟ್ಟುವುದು ಸರ್ವೇ ಸಾಮಾನ್ಯ ಹೆಜ್ಜೇನು ದುಂಬಿಗಳಿಂದ ತೊಂದರೆಯಾಗುವ ಆತಂಕ ಭಯಗಳಿಂದ ಹೆಜ್ಜೇನು ಗೂಡುಗಳಿಗೆ ಬೆಂಕಿ ಹಚ್ಚಿ, ಹೊಗೆ ಹಾಕಿ ಹಾಗೂ ರಾಸಾಯನಿಕಗಳನ್ನು ಬಳಸಿ ಗೂಡುಗಳನ್ನು ನಾಶ ಮಾಡುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಜೇನು ಸಂತತಿಯನ್ನು ನಾಶ ಪಡಿಸದೇ ಸುರಕ್ಷಿತ ಕ್ರಮಗಳೊಂದಿಗೆ ಮತ್ತೊಂದು ಕಡೆ ಸ್ಥಳಾಂತರಿಸುವುದು ಸೂಕ್ತ ಎಂದಿದ್ದಾರೆ.
ಉಪಯೋಗವೇನು?
ಜೇನು ದುಂಬಿಗಳು ಜೇನು ತುಪ್ಪ ಹಾಗೂ ಜೇನು ಕೃಷಿಯ ಇತರೆ ಉಪ ಉತ್ಪನ್ನಗಳಾದ ಜೇನು ಮೇಣ, ಪರಾಗ, ಜೇನು ಅಂಟುಗಳನ್ನು ಸಹಾ ಒದಗಿಸುತ್ತಿದ್ದು, ಇವು ಕೈಗಾರಿಕಾ ಉದ್ದೇಶಕ್ಕೆ ಹಾಗೂ ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಲ್ಲಿವೆ. ಇವುಗಳು ಮನುಷ್ಯನ ದೈನಂದಿನ ಜೀವನಕ್ಕೆ ಅವಶ್ಯಕವಾಗಿರುವ ಉತ್ಪನ್ನಗಳಾಗಿವೆ.
ಪರಿಸರ ಸಮತೋಲನ ಸಾಧ್ಯ:
ನಮ್ಮ ಆಹಾರ ಸರಬರಾಜಿನ ಸುಮಾರು ಮೂರನೇ ಒಂದು ಭಾಗದಷ್ಟು ನೇರವಾಗಿ ಅಥವಾ ಪರೋಕ್ಷವಾಗಿ ಕೀಟಗಳ ಪರಾಗಸ್ಪರ್ಶ ಕ್ರಿಯೆಯನ್ನು ಅವಲಂಭಿಸಿವೆ. ಪರಿಸರ ಸಮತೋಲನ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಳದಲ್ಲಿ ಜೇನು ದುಂಬಿಗಳಿಂದಾಗುವ ಪರಾಗ ಸ್ಪರ್ಶ ಕ್ರಿಯೆಯ ಪಾತ್ರ ಮಹತ್ತರವಾಗಿದೆ. ಭೂಮಿಯ ಮೇಲಿನ ಶೇ.85 ರಷ್ಟು ಜಾತಿಯ ಸಸ್ಯಗಳು ತಮ್ಮ ಉಳಿವಿಗಾಗಿ ಜೇನು ದುಂಬಿಗಳನ್ನು ಅವಲಂಭಿಸಿವೆ. ಇವು ಪ್ರಕೃತಿಯ ವೈವಿಧ್ಯತೆ ಹಾಗೂ ಸಸ್ಯ ಸಂರಕ್ಷಣೆಗೆ ಅನುಕೂಲವಾಗಿದೆ. ಇಂತಹ ಶ್ರೇಷ್ಠ ಜೀವಿಯನ್ನು ಸಾಕಿ ಸಲಹಿ ಪ್ರಯೋಜನೆ ಪಡೆಯುವುದು ಅತಿ ಮುಖ್ಯವಾಗಿದೆ.
ಹಾನಿಯಾಗದಂತೆ ಸ್ಥಳಾಂತರ ಸಾಧ್ಯ:
ಪ್ರತಿ ವರ್ಷ ಸಾವಿರಾರು ಜೇನುನೊಣಗಳು ಸಾಯುತ್ತಿವೆ ಹಾಗೂ ಜೇನು ನೊಣಗಳ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ. ಈ ನಾಶಗೊಳಿಸುವಿಕೆ ಪರಿಸರದ ದೃಷ್ಟಿಯಿಂದ ಹಾಗೂ ನಮ್ಮ ಬೆಳೆಗಳ ಇಳುವರಿಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲ. ಜತೆಗೆ ಮಾನವ ಜೀವನದಲ್ಲಿ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಜೇನು ಸಂತತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮತ್ತು ಸಂರಕ್ಷಿಸುವ ಅಗತ್ಯವಿದೆ.
ಸಾರ್ವಜನಿಕ ಕಟ್ಟಡ, ವಿದ್ಯಾರ್ಥಿನಿಲಯ, ಶಾಲಾ ಕಾಲೇಜು ಹೀಗೆ ಹಲವು ಕಡೆಗಳಲ್ಲಿ ಜೇನುಗೂಡು ಕಂಡುಬಂದರೆ ಅವುಗಳನ್ನು ನಾಶಪಡಿಸಲು ಮುಂದಾಗಬಾರದು, ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಜೇನು ಗೂಡುಗಳನ್ನು ವೈಜ್ಞಾನಿಕ ವಿಧಾನದಿಂದ ಜೇನು ನೊಣಗಳಿಗೆ ಹಾನಿಯಾಗದಂತೆ ಸ್ಥಳಾಂತರ ಮಾಡಲು ಅವಕಾಶಗಳಿರುತ್ತದೆ ಜೇನು ಗೂಡುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.
ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬೆಂ.ಗ್ರಾಮಾಂತರ