Basaveshwara statue unveiled 
ಬೆಂಗಳೂರು ಗ್ರಾಮಾಂತರ

ಏ.6ರಂದು ಬಸವೇಶ್ವರ ಪುತ್ಥಳಿ ಅನಾವರಣ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
8ನೇ ಶತಮಾನದಲ್ಲೇ ವಿಶ್ವ ಗುರು ಬಸವಣ್ಣ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ್ದರು, ಅವರ ಮಾರ್ಗದರ್ಶನದಲ್ಲಿ ನಡೆಯಬೇಕೆಂಬ ಹಿನ್ನೆಲೆಯಲ್ಲಿ ದೇವನಹಳ್ಳಿ ಜಿಲ್ಲಾಡಳಿತಭವನದ ಆವರಣದಲ್ಲಿ ಏ.6ರಂದು ಜಗತ್‌ಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀ ಜಗತ್‌ಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಸಮಿತಿ ಸದಸ್ಯ ಮಂಜುನಾಥ್ ಹೇಳಿದರು.
ದೇವನಹಳ್ಳಿ ತಾಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿ ಬಸವಣ್ಣ ಕಂಚಿನ ಪ್ರತಿಮೆ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬಸವಣ್ಣನವರು ಸಮ ಸಮಾಜದ ಏಳಿಗೆಗಾಗಿ ದುಡಿದವರು, ಅಜ್ಞಾನ, ಮೂಢ ನಂಬಿಕೆ, ಮೌಢ್ಯವನ್ನು ಕಿತ್ತುಹಾಕುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರು ಎಂದು ಗುಣಗಾನ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಬಸವಣ್ಣನವರ ಮಂಟಪ 28 ಅಡಿ, ಕಂಚಿನ ಪ್ರತಿಮೆ 5 ಅಡಿ ಉದ್ದ 450 ಕೆಜಿ ಕಂಚು ಬಳಕೆ ಮಾಡಿ ಸುಮಾರು 80 ಲಕ್ಷ ರೂ.ವೆಚ್ಚದಲ್ಲಿ ಭವ್ಯವಾದ ಪ್ರತಿಮೆ ನಿರ್ಮಿಸಲಾಗಿದೆ. ಬಸವಣ್ಣನವರ ಆದರ್ಶಗಳನ್ನು ಪಾಲಿಸುವಂತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭಕ್ಕೆ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ವೀರಶೈವ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಸಮಾರಂಭ ಯಶಸ್ವಿ ಗೊಳಿಸಲು ಸಹಕರಿಸಬೇಕು ಅಂದಿನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ, ಶ್ರೀ ಕ್ಷೇತ್ರ ಸಿದ್ದಗಂಗಾ ಶ್ರೀಗಳು, ಸುತ್ತೂರು ಜಗದ್ಗುರು ಪೀಠಾಧ್ಯಕ್ಷರು ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಲೋಕಾರ್ಪಣೆಗೆ ಸಹಕಾರ ಬೇಕು:
ವೀರಶೈವ ಲಿಂಗಾಯತ ಸಮಾಜದ ಮುಖಂಡ ವಿಜಯಕುಮಾರ್ ಮಾತನಾಡಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ವಿಶ್ವಗುರು ಬಸವೇಶ್ವ ಪುತ್ಥಳಿ ಲೋಕಾರ್ಪಣೆಗೊಳ್ಳಲಿದೆ, ಎಲ್ಲ ಕಾಮಗಾರಿ ಮುಗಿದಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಲೋಕಾರ್ಪಣೆಗೆ ಎಲ್ಲರೂ ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.